ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರ ಮೃತದೇಹ ಪತ್ತೆಯಾಗಿದೆ.
ಕಳೆದ 6 ದಿನಗಳಿಂದ ಎನ್ ಡಿ ಆರ್ ಎಫ್ ತಂಡ ನಿರಂತರ ಕಾರ್ಯಾಚಾರಣೆ ನಡೆಸಿ ನಾರಾಯಾಣಾಚಾರ್ ಮೃತದೇಹ ಹೊರತೆಗೆದಿದೆ. ಮಣ್ಣು ಕುಸಿದುಬಿದ್ದಿದ್ದ ಕಂದಕದಲ್ಲಿ ಮೃತದೇಹ ಸಿಕ್ಕಿದೆ ಎಂದು ತಿಳಿದುಬಂದಿದೆ.
ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಕುಡ್ಡ ಕುಸಿತವಾಗುತ್ತಿದ್ದು, ಕೆಲದಿನಗಳ ಹಿಂದೆ ತಲಕಾವೇರಿ ದೇವಾಲಯದ ಬಳಿಯ ಬ್ರಹ್ಮಗಿರಿ ಬೆಟ್ಟ ಎರಡು ಮನೆಗಳ ಮೇಲೆ ಕುಸಿದುಬಿದ್ದಿತ್ತು. ಪರಿಣಾಮ ತಲಕಾವೇರಿ ಪ್ರಧಾನ ಅರ್ಚಕ ನಾರಾಯಾಣಾಚಾರ್, ಅವರ ಪತ್ನಿ, ಅವರ ಸಹೋದರ ಹಾಗೂ ಇಬ್ಬರು ಅಡುಗೆಯವರು ನಾಪತ್ತೆಯಾಗಿದ್ದರು. ಐದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು.
ಎನ್ ಡಿ ಆರ್ ಎಫ್ ತಂಡ ನಾರಾಯಾಣಾಚಾರ್ ಹಾಗೂ ಕುಟುಂಬದವರ ಪತ್ತೆಗಾಗಿ ಶೋಧ ಆರಂಭಿಸಿತ್ತು. ಆ.9ರಂದು ನಾರಾಯಾನಾಚಾರ್ ಅವರ ಸಹೋದರನ ಮೃತದೇಹ ಪತ್ತೆಯಾಗಿತ್ತು. ಇದೀಗ 6 ದಿನಗಳ ಬಳಿಕ ನಾರಾಯಣಾಚಾರ್ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಮಾತನಾಡಿರುವ ಸಚಿವ ವಿ.ಸೋಮಣ್ಣ 6 ದಿನಗಳ ಕಾರ್ಯಾಚಾರಣೆ ಬಳಿಕ ಪ್ರಧಾನ ಅರ್ಚಕರ ಮೃತದೇಹ ಪತ್ತೆಯಾಗಿದೆ. ಇನ್ನು ಮೂವರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ