ಪ್ರಗತಿವಾಹಿನಿ ಸುದ್ದಿ; ಕೋಲಾರ: ನನ್ನ ಪಾಲಿಗೆ ಇಂದು ಬಹಳ ಪವಿತ್ರವಾದ ದಿನ. ಪುರಂದರದಾಸರು ಒಂದು ಮಾತು ಹೇಳಿದ್ದಾರೆ. ‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ’. ಇದರಂತೆ ಮುಳಬಾಗಿಲಿಗೆ ಬಂದು ವಿಘ್ನಗಳ ನಿವಾರಣೆ ಮಾಡುವ ವಿನಾಯಕ, ವಿಜಯಕ್ಕೆ ನಾಯಕ ವಿನಾಯಕನಿಗೆ ಪೂಜೆ ಮಾಡಿ, ದರ್ಗಾ, ಆಂಜನೇಯ, ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ನಂತರ ಮುಳಬಾಗಿಲಿನ ಮಹಾ ಜನರ ಮುಂದೆ ನಮ್ಮ ಯಾತ್ರೆ ಆರಂಭಿಸುತ್ತಿದ್ದೇವೆ. ಇದು ನನ್ನ ಭಾಗ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮುಳಬಾಗಿಲಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೊತ್ತೂರು ಮಂಜುನಾಥ್ ಅವರ ನಾಯಕತ್ವದಲ್ಲಿ ಪ್ರಜಾಧ್ವನಿಯಾತ್ರೆ ಇತಿಹಾಸದ ಪುಟಕ್ಕೆ ಸೇರುತ್ತಿದೆ. ನಿಮ್ಮ ಜೈಕಾರ, ಹೂಹಾರಕ್ಕೆ ನಾನು ಬಂದಿಲ್ಲ. ಮುಳಬಾಗಿಲು ಜನರ ಜತೆ ಕಾಂಗ್ರೆಸ್ ಸದಾ ಇದೆ. ನಿಮ್ಮ ಸಮಸ್ಯೆ ಆಲಿಸಿ, ಶಕ್ತಿ ತುಂಬಲು ನಾವಿಲ್ಲಿಗೆ ಬಂದಿದ್ದೇವೆ.
ಕೋಲಾರ ಜಿಲ್ಲೆಯ ಜನರು ಬಹಳ ಶ್ರಮಜೀವಿಗಳು. ಎಂ ವಿ ಕೃಷ್ಣಪ್ಪನವರು, ವೆಂಕಟಪ್ಪನವರು, ಆಲೂರು ಶ್ರೀನಿವಾಸ್ ಅವರ ಕಾಲದಿಂದ ಮಂಜುನಾಥ್ ಅವರವರೆಗೆ ಕಾಂಗ್ರೆಸ್ ಜನರ ಸೇವೆ ಮಾಡಿಕೊಂಡು ಬಂದಿದೆ. ಹಾಲು, ತರಕಾರಿ, ಹಣ್ಣು, ರೇಷ್ಮೇ ಉತ್ಪಾದನೆಯಲ್ಲಿ ಜಿಲ್ಲೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಕೊಡುಗೆ ನೀಡಿದೆ ಎಂದರು.
ರೈತರಿಗೆ ಸಂಬಳ, ಪ್ರಮೋಷನ್, ಪಿಂಚಣಿ, ಲಂಚ, ನಿವೃತ್ತಿ ಏನೂ ಇಲ್ಲ. ರೈತರ, ಜನರ ಸಮಸ್ಯೆ ಅರಿಯಲು ಈ ಯಾತ್ರೆ ಮಾಡುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಪರದಾಡಿರುವ ರೈತರಿಗೆ ಸರ್ಕಾರ ಬೆಂಬಲ ಬೆಲೆ, ಮಾರುಕಟ್ಟೆ ನೀಡಲಿಲ್ಲ. ಅವರ ಬದುಕಿಗೆ ಮಾರ್ದರ್ಶನ ನೀಡಬೇಕು. ರಾಜ್ಯದ ಇತಿಹಾಸದಲ್ಲಿ ಕೋಲಾರ ಜಿಲ್ಲೆ ಅಪಾರ ಕೊಡುಗೆ ನೀಡಿದೆ. ಉತ್ತಮ ಸಾಹಿತಿಗಳು, ನಾಯಕರನ್ನು ಜಿಲ್ಲೆ ಕೊಟ್ಟಿದೆ. ಅತಿ ಹೆಚ್ಚು ಕೆಎಎಸ್, ಐಪಿಎಸ್ ಅಧಿಕಾರಿ, ನ್ಯಾಯಾಧೀಶರನ್ನು ಕೊಟ್ಟಿರುವ ಜಿಲ್ಲೆ. ಕೃಷಿ, ರೇಷ್ಣೆ, ಹೈನುಗಾರಿಕೆ, ಪಶುಸಂಗೋಪನೆ ಕ್ಷೇತ್ರಗಳಲ್ಲಿ ಈ ಜಿಲ್ಲೆ ಬಹಳ ಮುಂದುವರಿದಿದೆ.
ನೀವು ಬಿಜೆಪಿ ಆಡಳಿತ ನೋಡಿದ್ದೀರಿ. ಕುಮಾರಸ್ವಾಮಿ ಅವರ ಆಡಳಿತ ನೋಡಿದ್ದೀರಿ. ಇವೆರಡೂ ಪಕ್ಷಗಳಿಂದ ರಾಜ್ಯಕ್ಕೆ ಭವಿಷ್ಯವಿಲ್ಲ. ನಾನು ದಳದ ಕಾರ್ಯಕರ್ತರಿಗೆ ಒಂದು ಮಾತು ಹೇಳುತ್ತೇನೆ. ನೀವು ಹತಾಶರಾಗಬೇಡಿ. ನಿಮ್ಮ ಹಾಗೂ ದೇಶದ ಭವಿಷ್ಯಕ್ಕೆ ಕಾಂಗ್ರೆಸ್ ನೆರವಾಗಲಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರು ಅಧಿಕಾರಕ್ಕೆ ಬಂದಂತೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಸಂವಿಧಾನ, ರಾಷ್ಟ್ರಧ್ವಜ ನೀಡಿದ ಪಕ್ಷ ನಮ್ಮದು. ಈ ಪಕ್ಷ ನಿಮ್ಮ ಜತೆ ನಿಲ್ಲಲಿದೆ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ, ಮೇಕೆದಾಟು ಯಾತ್ರೆಯಲ್ಲಿ ನೀವು ಭಾಗವಹಿಸಿ ನಮಗೆ ಶಕ್ತಿ ತುಂಬಿದ್ದೀರಿ. ನಿಮಗೆ ನಾನು ಧನ್ಯವಾದ ತಿಳಿಸುತ್ತೇನೆ.
ನಾವು ಈ ಭಾಗದ ಜನರಿಗೆ ನೀರಿನ ಬವಣೆ ತೀರಿಸಲು ಅನೇಕ ಕಾರ್ಯಕ್ರಮ ನೀಡಿದ್ದೇವೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ಶ್ರಮಿಸಿದ್ದನ್ನು ನೀವು ನೋಡಿದ್ದೀರಿ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೀರಿನ ಸಮಸ್ಯೆ ಬಗೆಹರಿಸಿ, ವ್ಯವಸಾಯ ಯೋಗ್ಯ ಭೂಮಿ ಪ್ರಮಾಣ ಹೆಚ್ಚಿಸಲು ಮುಂಬರುವ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗಾಗಿ 2 ಲಕ್ಷ ಕೋಟಿ ಮೀಸಲಿಡಲು ಸಂಕಲ್ಪ ಮಾಡಿದ್ದೇವೆ ಎಂದು ಭರವಸೆ ನೀಡಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣಕ್ಕೆ ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ನೀಡಿದ್ದೇವೆ. ಇದನ್ನು ಕಾಯ್ದೆ ತಂದು ಕಾನೂನಿನ ರಕ್ಷಣೆಯನ್ನು ಮಾಡಿದ್ದೇವೆ.
ರಾಜ್ಯದಲ್ಲಿ ಯಾರೂ ಹಸಿದುಕೊಂಡಿರಬಾರದು ಎಂದು ಅನ್ನ ಭಾಗ್ಯ ಯೋಜನೆ ನೀಡಿದೆವು. 5 ಕೆ.ಜಿಯಿಂದ 7 ಕೆ.ಜಿಗೆ ನಾವು ಏರಿಕೆ ಮಾಡಿದ್ದೆವು. ಈ ಸರ್ಕಾರ 7ರಿಂದ 5ಕ್ಕೆ ಇಳಿಸಿದೆ. ನಮ್ಮ ಸರ್ಕಾರ ಬಂದರೆ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹಾಗೂ ನಾನು ಈಗಾಗಲೇ ಘೋಷಣೆ ಮಾಡಿದ್ದೇವೆ.
ಬೆಲೆ ಏರಿಕೆ ಹೆಚ್ಚಾಗಿದೆ. ಅಡುಗೆ ಅನಿಲ ಸಾವಿರ ರು. ದಾಟಿದೆ. ಪೆಟ್ರೋಲ್ 100 ರ ಗಡಿ ದಾಟಿದೆ. ಅಡುಗೆ ಎಣ್ಣೆ 250 ರೂ ಆಗಿದೆ. ಆದಾಯ ಪಾತಾಳಕ್ಕೆ ಕುಸಿಯುತ್ತಿದ್ದರೆ, ಬೆಲೆಗಳು ಮಾತ್ರ ಗಗನಕ್ಕೇರುತ್ತಿವೆ. ಈ ಸರ್ಕಾರ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಆದರೆ ಜನರಿಗಾಗಿ ಏನು ಮಾಡಿಲ್ಲ. ಚುನಾವಣೆ ಎಂಬುದು ಎಲ್ಲ ಪಕ್ಷಗಳಿಗೂ ಪರೀಕ್ಷೆ ಇದ್ದಂತೆ. ಬಿಜೆಪಿ ಸರ್ಕಾರ ಜನರ ಹೊಟ್ಟೆ ತುಂಬಿಸಲು ಯಾವುದೇ ಕಾರ್ಯಕ್ರಮ ನೀಡಲಿಲ್ಲ.
ಬಿಜೆಪಿಯವರು ನಿಮ್ಮ ಖಾತೆಗಳಿಗೆ 15 ಲಕ್ಷ ಹಣ ಹಾಕಿಸುತ್ತೇವೆ ಎಂದು ಹೇಳಿದರು, ಹಾಕಿದರಾ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಮೋದಿ ಅವರೇ ಎಲ್ಲಿ ಆದಾಯ ಡಬಲ್ ಆಗಿದೆ ತೋರಿಸಿ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು, ಕೊಟ್ಟರಾ? ನಿಮಗೆ ಯಾರಿಗಾದರೂ ಕೆಲಸ ಸಿಕ್ಕಿತಾ? ಇಲ್ಲ. ನಮ್ಮದು ಬಸವಣ್ಣ, ಕುವೆಂಪು, ಶಿಶುನಾಳ ಶರೀಫರು, ಕನಕದಾಸರ ನಾಡು. ನಾವು ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯ ಅವರ ಸರ್ಕಾರ ಬರುವ ಮುನ್ನ ರಾಜ್ಯದ ಜನರಿಗೆ 165 ವಚನಗಳನ್ನು ನೀಡಿದ್ದು, ಆ ಪೈಕಿ 159 ವಚನಗಳನ್ನು ಪೂರ್ಣಗೊಳಿಸಿ, ಹೆಚ್ಚುವರಿಯಾಗಿ 30 ಕಾರ್ಯಕ್ರಮವನ್ನು ನೀಡಿದ್ದೆವು. ಅಧಿಕಾರಕ್ಕೆ ಬಂದ ದಿನವೇ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ಜಾರಿ ಮಾಡಿದರು. ಆರೋಗ್ಯ, ಶಿಕ್ಷಣ, ಮಹಿಳೆಯರ ಸಬಲೀಕರಣ, ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ, ಹಾಲಿಗೆ 5 ರೂ. ಪ್ರೋತ್ಸಾಹ ಧನ, ನರೇಗಾ ಯೋಜನೆ, ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಇದೆಲ್ಲವೂ ಕಾಂಗ್ರೆಸ್ ಕೊಡುಗೆ.
ಕೋವಿಡ್ ನಿಂದಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಕಷ್ಟದ ಪರಿಸ್ಥಿತಿಯಿಂದ ಮೇಲೆತ್ತಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಎರಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ. ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದೆವು. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳಿಗೆ 1500ರಂತೆ ವರ್ಷಕ್ಕೆ 18 ಸಾವಿರದಷ್ಟು ಹಣವನ್ನು ಪ್ರತಿ ಕುಟುಂಬ ಉಳಿಸಬಹುದಾಗಿದೆ. ನಾನು ಇಂಧನ ಸಚಿವನಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿದ್ದ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಅನ್ನು 21 ಸಾವಿರ ಮೆ.ವ್ಯಾ ಗೆ ಹೆಚ್ಚಿಸಿದೆವು. ಆ ಮೂಲಕ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಬೇರೆ ರಾಜ್ಯಗಳಿಗೆ ಮಾರುವಂತೆ ಮಾಡಿದ್ದೇವೆ.
ಈ ಜಿಲ್ಲೆಯಲ್ಲಿ 3.12 ಲಕ್ಷ ಮನೆಗಳು ಪ್ರತಿ ತಿಂಗಳು 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತವೆ. 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಮನೆಗಳು ಕೇವಲ 83 ಸಾವಿರ ಮಾತ್ರ. ಈ ಎಲ್ಲ ಮನೆಗಳಿಗೂ 200 ಯುನಿಟ್ ವಿದ್ಯುತ್ ನೀಡಲು ನಿರ್ಧರಿಸಿದ್ದೇವೆ.
ಇನ್ನು ಎರಡನೇ ಗ್ಯಾರಂಟಿ ಯೋಜನೆಯಾಗಿ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯದ ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರು. ಪ್ರೋತ್ಸಾಹಧನ ನೀಡಲಾಗುವುದು. ಆ ಮೂಲಕ ವರ್ಷಕ್ಕೆ 24 ಸಾವಿರ ನೆರವು ನೀಡಲಾಗುವುದು. ಹೀಗೆ ಈ ಎರಡೂ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರದಷ್ಟು ಆರ್ಥಿಕ ಹೊರೆ ತಗ್ಗಿಸಲು ಕಾಂಗ್ರೆಸ್ ಈ ಕಾರ್ಯಕ್ರಮ ರೂಪಿಸಿದೆ. ಐದು ವರ್ಷಗಳಲ್ಲಿ 2 ಲಕ್ಷ ಆರ್ಥಿಕ ನೆರವು ನೀಡಲಾಗುವುದು. 200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ರು. ಖಚಿತ. ಕಾಂಗ್ರೆಸ್ ಪಕ್ಷದ ಈ ಯೋಜನೆಗಳನ್ನು ಪಕ್ಷದ ಎಲ್ಲ ಕಾರ್ಯಕ್ರತರು ಪ್ರತಿ ಮನೆ ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.
ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಾಗಿ ನಮ್ಮ ಪಕ್ಷಕ್ಕೆ ಬೇರೆ ಪಕ್ಷಗಳ ನಾಯಕರು ಬರುತ್ತಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ನಾಗೇಶ್ ಅವರು ಭವಿಷ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಅರಿತು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಈಗ ನಮ್ಮ ಪಕ್ಷ ಮಂಜುನಾಥ್ ಅವರ ನೇತೃತ್ವದಲ್ಲಿ ಇಲ್ಲಿ ಯಾರು ಸ್ಪರ್ಧಿಸಬೇಕು ಎಂದು ತೀರ್ಮಾನಿಸುವ ಹೆಸರನ್ನು ನಾನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡುತ್ತೇವೆ. ಯಾರೇ ಅಭ್ಯರ್ಥಿಯಾದರೂ ನೀವು ಹಸ್ತದ ಗುರುತಿಗೆ ಮತ ಹಾಕಿ ಪಕ್ಷವನ್ನು ಗೆಲ್ಲಿಸಬೇಕು. ನಿಮ್ಮ ಋಣವನ್ನು ತೀರಿಸಲು ನಮಗೆ ಅವಕಾಶ ಮಾಡಿಕೊಡಬೇಕು.
*ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಕ್ಷಣಗಣನೆ*
https://pragati.taskdun.com/37th-state-conference-of-journalistsvijayapuracm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ