
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ರತರು ಹಾಗೂ ಜನರ್ಗೆ ಯುಗಾದಿ ಹಬ್ಬದ ಗಿಫ್ಟ್ ನೀಡಿದೆ. ಕೊಪ್ಪಳ, ರಾಯಚೂರು, ಯಾದಗಿರಿ ಈ ಭಾಗದ ಜನರ ಕುಡಿಯುವ ನೀರು, ಬೆಳೆಗಳ ಸಂರಕ್ಷಣೆಗಾಗಿ ತುಂಗಭದ್ರಾ ಕಾಲುವೆಗಳಿಗೆ ನೀರು ಬಿಡಲು ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರರೊಂದಿಗೆ ಚರ್ಚಿಸಿದಂತೆ, ಇಂದು ಭದ್ರಾ ಜಲಾಶಯದಲ್ಲಿ ಪ್ರಸ್ತುತ 28 ಟಿಎಂಸಿ ನೀರು ಸಂಗ್ರಹವಾಗಿದೆ. ಮೇ 8ರವರೆಗೆ 11 ಟಿಎಂಸಿ ನೀರು ನೀರಾವರಿಗಾಗಿ ಅಗತ್ಯವಿದೆ. ಜಲಾಶಯದ ಇಂಜಿನಿಯರ್‌ಗಳ ಲೆಕ್ಕಾಚಾರದ ಪ್ರಕಾರ, ಮೇಲ್ದಂಡೆ ಮತ್ತು ಕೆಳದಂಡೆ ಸೇರಿದಂತೆ 14 ಟಿಎಂಸಿ ಕುಡಿಯುವ ನೀರಿನ ಅವಶ್ಯಕತೆ ಇದೆ. ಇದರಿಂದ ಉಳಿದ ಶುದ್ಧ ಲಭ್ಯತೆ ಕೇವಲ 3 ಟಿಎಂಸಿ ಆಗಿರುತ್ತದೆ.
ತುಂಗಭದ್ರಾ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಕನಿಷ್ಠ 3.5 ಟಿಎಂಸಿ ನೀರಿನ ಸಂಗ್ರಹ ಅಗತ್ಯವಿರುತ್ತದೆ. ಆದ್ದರಿಂದ, ಕೊಪ್ಪಳ ಜಿಲ್ಲೆಯ ರೈತರ ನೀರಾವರಿ ಅಗತ್ಯಗಳನ್ನು ಪರಿಗಣಿಸಿ, ಭದ್ರಾದಿಂದ 2 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, ಇದರಿಂದಾಗಿ ತುಂಗಭದ್ರಾ ಕಾಲುವೆಗಳಿಗೆ ಏಪ್ರಿಲ್ 1 ರಿಂದ ಏಪ್ರಿಲ್ 5 ರವರೆಗೆ 5 ದಿನಗಳವರೆಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗಾಗಿ ಮತ್ತು ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಬಿಡುಗಡೆ ಮಾಡಲಾಗುತ್ತದೆ.
ಏಪ್ರಿಲ್ 5 ರ ನಂತರ ತುಂಗಭದ್ರಾ ಕಾಲುವೆಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಮಾತ್ರ ನೀರು ಬಿಡಲಾಗುವುದು. ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು. ಎಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ.
ಮಾರ್ಚ್ 30ರಂದು ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಇದರಲ್ಲಿ ಮೇ 8ರವರೆಗೆ ನೀರಾವರಿಗೆ 11ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ 14ಟಿಎಂಸಿ ಅಗತ್ಯವಿದ್ದು, 3ಟಿಎಂಸಿ ನೀರು ಜಲಾಶಯದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಎಪ್ರಿಲ್ 6ರಿಂದ ಕಾಲುವೆಗಳನ್ನು ಕೇವಲ ಕುಡಿಯುವ ನೀರಿನ ಪೂರೈಕೆಗೆ ಮಾತ್ರ ಬಳಸಿಕೊಳ್ಳಲಾಗುವುದು.
ರೈತಾಪಿ ಜನರ ಬೆಳೆಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸಲು ಸರ್ಕಾರ ಎಲ್ಲಾ ಹಂತದಲ್ಲೂ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.