ಪ್ರಗತಿವಾಹಿನಿ ಸುದ್ದಿ: ಪತಿಯ ಅನುಮಾನದ ರೋಗಕ್ಕೆ ಪತ್ನಿಯ ಪ್ರಾಣವೇ ಹೋಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. 25 ವರ್ಷದ ಮಹಿಳೆ ಅನುಮಾನಾಸ್ಪದವಾಗಿ ಶವವಾಗಿದ್ದು, ಪತಿಯೇ ಪತ್ನಿಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ರೇಣುಕಾ ಸಂಗಟಿ (25) ಮೃತ ಮಹಿಳೆ. ವರ್ಷದ ಹಿಂದೆ ಅನಿಲ್ ಎಂಬಾತನ ಜೊತೆ ರೇಣುಕಾಳನ್ನು ಮದುವೆ ಮಾಡಿಕೊಡಲಾಗಿತ್ತು. ಭಾರಿ ಚಿನ್ನಾಭರಣ, ಹಣ ನೀಡಿ ರೇಣುಕಾ ಪೋಷಕರು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಅಳಿಯ ಕೇಳಿದಾಗಲೆಲ್ಲ ಹಣ ನೀಡುತ್ತಿದ್ದರು. ದಂಪತಿಗೆ ಮುದ್ದಾದ ಹೆಣ್ಣು ಮಗು ಕೂಡ ಇತ್ತು. ಆದರೆ ಸುರಂದರವಾಗಿದ್ದ ಪತ್ನಿಯ ಮೇಲೆ ಅನಿಲ್ ಗೆ ಸದಾಕಾಲ ಅನುಮಾನ. ಸಾಲದ್ದಕ್ಕೆ ಕುಡಿತದ ಚಟ ಬೇರೆ ಇತ್ತು.
ಪತ್ನಿಗೆ ಪ್ರತಿದಿನ ಮಾನಸಿಕ ಕಿರುಕುಳ, ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಪತ್ನಿ ಜೊತೆ ಯಾರೂ ಮಾತನಾಡುವಂತೆ ಇಲ್ಲ. ಯಾರೇ ಮಾತನಾಡಿದರೂ ಅವರ ಜೊತೆ ಸಂಬಂಧವಿದೆ ಎಂಬ ಕಥೆಕಟ್ಟಿ ಹಿಂಸಿಸುತ್ತಿದ್ದನಂತೆ. ಪತಿಯ ಹಿಂಸೆಗೆ ಬೇಸತ್ತ ರೇಣುಕಾ ಮೂರು ತಿಂಗಳ ಹಿಂದೆ ತವರು ಸೇರಿದ್ದಳು. ಬಳಿಕ ಕುಟುಂಬದವರ ರಾಜಿಪಂಚಾಯತಿ ಬಳಿಕ ಮತ್ತೆ ಪತಿಯ ಮನೆಗೆ ಬಂದಿದ್ದಳು. ಮೂರು ತಿಂಗಳಿಂದ ಇಬ್ಬರು ಚೆನ್ನಾಗಿಯೇ ಇದ್ದರು ಎನ್ನಲಾಗಿದೆ. ಇಂದು ಮುಂಜಾನೆ 4 ಗಂಟೆಗೆ ರೇಣುಕಾ ಪೋಷಕರಿಗೆ ಕರೆ ಮಾಡಿರುವ ಅನಿಲ್, ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾನಂತೆ.
ಮಲಗಿದ್ದ ಹಾಸಿಗೆಯಲ್ಲಿಯೇ ರೇಣುಕಾ ಶವವಾಗಿ ಪತ್ತೆಯಾಗಿದ್ದಾಳೆ. ಪತ್ನಿ ಮೇಲೆ ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಪತಿಯೇ ಕೊಲೆ ಮಾಡಿದ್ದಾನೆ ಎಂದು ರೇಣುಕಾ ಪೋಷಕರು ಆರೋಪಿಸಿದ್ದಾರೆ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಅನಿಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ