Kannada NewsKarnataka NewsLatestPolitics

*ಮಾಜಿ ಸಚಿವ ಕೋಟೆ ಶಿವಣ್ಣ ಕಾಂಗ್ರೆಸ್ ಸೇರ್ಪಡೆ*

ಪ್ರಗತಿವಾಹಿನಿ ಸುದ್ದಿ: ಮೈಸೂರಿನಲ್ಲಿ ಮಾಜಿ ಸಚಿವ ಕೋಟೆ ಶಿವಣ್ಣ ಕಾಂಗೆಸ್ ಗೆ ಅಧಿಕೃತವಾಗಿ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಷಣದ ಹೈಲೈಟ್ಸ್

ಈ ಬಾರಿಯ ಧರ್ಮಯುದ್ಧ ಆರಂಭವಾಗುವ ಮುನ್ನ ನಾನು ರಾಜ್ಯದ ವಿವಿಧ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನಾವು ಈ ಬಾರಿ ಚುನಾವಣೆಗೆ 24 ಕ್ಷೇತ್ರಗಳ ಅಭ್ಯರ್ಥಿ ಪ್ರಕಟಿಸಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 6 ಮಂದಿ ಮಹಿಳೆಯರನ್ನು ಕಣಕ್ಕಿಳಿಸುತ್ತಿದ್ದೇವೆ.

ನಾವು ತಾಯಿ ಚಾಂಮುಂಡೇಶ್ವರಿಗೆ ಗೃಹಲಕ್ಷ್ಮಿ ಹಣವನ್ನು ಅರ್ಪಿಸಿ ರಾಜ್ಯದ 1.29 ಕೋಟಿ ಮಹಿಳೆಯರಿಗೆ ಈ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ಹಣ ನೀಡುತ್ತಿದ್ದೇವೆ. ತಾಯಿ ಚಾಮುಂಡಿ ಈ ನಾಡಿನ ದೇವತೆ. ಆಕೆಯ ಆಶೀರ್ವಾದದಿಂದ ನಾವು 136 ಸೀಟುಗಳನ್ನು ಗೆದ್ದು ಜನರ ಸೇವೆ ಮಾಡುತ್ತಿದ್ದೇವೆ.

ನಾನು ಬೇರೆ ಪಕ್ಷದವರ ಬಗ್ಗೆ ಚರ್ಚೆ ಮಾಡುವುದಿಲ್ಲ. ಈ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇತ್ತು. ಅವರಿಗೆ ರಾಜ್ಯದ ಜನರ ಹೃದಯ ಗೆಲ್ಲುವ ಅವಕಾಶವಿತ್ತು. ಆದರೆ ಅದರಲ್ಲಿ ವಿಫಲರಾದರು. ಅವರ ಆಡಳಿತ ವೈಖರಿಯನ್ನು ಜನ ಮೆಚ್ಚಲಿಲ್ಲ. ನಮ್ಮ ಈ ಹಿಂದಿನ ಆಡಳಿತವೇ ಉತ್ತಮ ಎಂದು ಭಾವಿಸಿ ನಮಗೆ ಮತ್ತೆ ಅವಕಾಶ ನೀಡಿದ್ದಾರೆ. ಕಳೆದ ಬಾರಿ ಚುನಾವಣೆ ವೇಳೆ ನಾನು ಹಾಗೂ ಸಿದ್ದರಾಮಯ್ಯ ಅವರು ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರಿಗೆ ಉತ್ತಮ ಆಡಳಿತ ನೀಡುವ ಭರವಸೆ ನೀಡಿ ಅವರ ವಿಶ್ವಾಸ ಗಳಿಸಿದೆವು.

ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ನಮ್ಮ ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿಯನ್ನು ಘೋಷಣೆ ಮಾಡಿದವು. ಈಗ ಈ ಯೋಜನೆಯಿಂದ ರಾಜ್ಯದ 1.49 ಕೋಟಿ ಮನೆಗಳು 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪಡೆಯುತ್ತಿವೆ.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ನಾನು ಹೇಳುತ್ತಿದ್ದೆ. ಈಗ ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿ ಕಮಲ ಉದುರಿಹೋಯಿತು, ತೆನೆಯೊತ್ತ ಮಹಿಳೆ ತೆನೆ ಇಳಿಸಿ ಬಿಜೆಪಿ ಜತೆ ಸೇರಿದಳು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಿತು, ಕರ್ನಾಟಕ ಪ್ರಬುದ್ಧವಾಯಿತು, ಕರ್ನಾಟಕ ಸಮೃದ್ಧವಾಯಿತು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಪಕ್ಷದ ಯೋಜನೆಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸಮಾಜದ ಎಲ್ಲಾ ವರ್ಗದ ಜನರನ್ನು ತಲುಪುತ್ತಿವೆ.

ಕಾಂಗ್ರೆಸ್ ಪಕ್ಷದ ಈ ಶಕ್ತಿ ನೋಡಿ ಬೇರೆ ಪಕ್ಷಗಳಿಂದ ನಾಯಕರುಗಳು ಕಾಂಗ್ರೆಸ್ ನತ್ತ ಮುಖ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನವೇ ಇವರನ್ನು ಕಾಂಗ್ರೆಸ್ ಪಕ್ಷಕ್ಕೆ ತರಲು ಗಾಳ ಹಾಕಿದ್ದೆ. ಆದರೆ ಅವರು ಮನಸ್ಸು ಮಾಡಿರಲಿಲ್ಲ. ಆದರೆ ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಯಸುತ್ತಿರುವ ನಾಯಕರ ದೊಡ್ಡ ಪಟ್ಟಿಯೇ ಇದೆ. ಈಗ ಅದನ್ನು ಬಹಿರಂಗಪಡಿಸುವುದಿಲ್ಲ.

ಆಡಿದವರ ಮನವ ಬಲ್ಲೆ, ನೀಡಿದವರ ನಿಜವಾ ಬಲ್ಲೆ ಎಂಬ ಮಂಟೆಸ್ವಾಮಿ ಅವರ ಮಾತು ಹಾಗೂ ಬಸವಣ್ಣನವರ ಮಾತಿನಂತೆ ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಯಾವುದೇ ರೀತಿಯ ಬಿಜೆಪಿ ಪರ ಅಲೆ ಇಲ್ಲ. ಮೋದಿ ಅಲೆ ಇಲ್ಲ. ಇದನ್ನು ತಲೆಯಲ್ಲಿಟ್ಟುಕೊಳ್ಳಿ. ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಅಲೆ, ಗ್ಯಾರಂಟಿ ಅಲೆ ಇದೆ. ನಾವು ಕೊಟ್ಟ ಅನ್ನಭಾಗ್ಯ ಅಕ್ಕಿಗೆ ಅರಿಷಿನ, ಕುಂಕುಮ ಹಾಕಿ ಬಿಜೆಪಿಯವರು ಅಕ್ಷತೆ ಹಂಚಿದರು. ದೇವಾಲಯಗಳಲ್ಲಿ ಪೂಜೆ ಮುಗಿದ ನಂತರ ಅಕ್ಷತೆ ನೀಡುತ್ತಾರೆ. ಆದರೆ ಬಿಜೆಪಿಯವರು ಪೂಜೆಯಲ್ಲ, ಮಂದಿರ ಉದ್ಘಾಟನೆಗೂ ಮುನ್ನವೇ ಮಂತ್ರಾಕ್ಷತೆ ನೀಡಿದ್ದಾರೆ.

ನಾನು ರಾಜ್ಯದ ಉದ್ದಗಲ ಪ್ರವಾಸ ಮಾಡುತ್ತಿದ್ದೇನೆ. ಎಲ್ಲೆಡೆ ಜನ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸುತ್ತಿದ್ದಾರೆ. ಮಂಡ್ಯ ಇರಲಿ, ಮೈಸೂರು, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲಲಿದೆ. ರಾಜ್ಯದಲ್ಲಿ ನಾವು 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಯಲ್ಲಿ ಗೋಬ್ಯಾಕ್ ಸೇರಿದಂತೆ ಅನೇಕ ವಿಚಾರಗಳು ನಡೆಯುತ್ತಿವೆ. ನಾವು ಮೈಸೂರಿನಲ್ಲಿ ಲಕ್ಷ್ಮಣ್ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರು ಯಾರು? ಪಕ್ಷದ ಧ್ವಜ ಹಿಡಿದು ಪಕ್ಷದ ಪರವಾಗಿ ತಮ್ಮ ಧ್ವನಿ ಎತ್ತಿಕೊಂಡು ಬಂದಿದ್ದಾರೆ. ಒಬ್ಬ ಕಾರ್ಯಕರ್ತನನ್ನು, ಬಡವನನ್ನು ಗುರುತಿಸಿ ಟಿಕೆಟ್ ನೀಡಿದ್ದೇವೆ.

ನಾವು ಯಾರ ಬಗ್ಗೆ ಟೀಕೆ ಮಾಡುವ ಅಗತ್ಯವಿಲ್ಲ. ನಮ್ಮ ಕಷ್ಟ ಕಾಲಕ್ಕೆ ನಮ್ಮ ಸಂಸದರು ಹಾಗೂ ಶಾಸಕರು ಸಿಗುತ್ತಾರಾ ಇಲ್ಲವೇ ಎಂಬುದು ಮುಖ್ಯ ವಿಚಾರವಾಗುತ್ತದೆ. ನಮ್ಮ ಅಭ್ಯರ್ಥಿ ನಿಮ್ಮ ಸೇವೆಗೆ ಸದಾ ಸಿದ್ಧರಾಗಿದ್ದಾರೆ. ನನ್ನ ಮಿತ್ರ ತನ್ವೀರ್ ಸೇಠ್ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದಾರೆ. ಅವರ ನಾಯಕತ್ವವನ್ನು ಬಳಸಿಕೊಳ್ಳಲು ನಾವು ಅವರಿಗೆ ಅಧಿಕಾರ ನೀಡಿದ್ದೇವೆ. ಅನೇಕರಿಗೆ ಮಂತ್ರಿ ಸ್ಥಾನ ಸಿಗಬಹುದು. ಆದರೆ ಪಕ್ಷದ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನ ಕೆಲವೇ ಜನರಿಗೆ ಮಾತ್ರ ಸಿಗುತ್ತದೆ. ಈ ಜವಾಬ್ದಾರಿ ವಹಿಸಿಕೊಂಡಿರುವ ತನ್ವೀರ್ ಸೇಠ್ ಅವರಿಗೆ ನಿಮ್ಮೆಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ದೆಹಲಿ ಸಭೆ ವೇಳೆ ಲಕ್ಷ್ಮಣ್ ಅವರು ಯಾರು ಎಂದು ಕೇಳಿದರು. ಲಕ್ಷ್ಮಣ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೆಪಿಸಿಸಿ ವಕ್ತಾರರು ಬೆಂಗಳೂರಿನಿಂದ ರಾಜ್ಯಾದ್ಯಂತ ಬಿಜೆಪಿಯ ವಿರುದ್ದ ವಾಗ್ದಾಳಿ ಮಾಡಿಕೊಂಡು ಬಂದಿರುವವರು ಎಂದು ಹೇಳಿದೆ. ಆಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಬಹಳ ಸಂತೋಷದಿಂದ ಟಿಕೆಟ್ ನೀಡಲು ಒಪ್ಪಿದರು. ಇಲ್ಲಿ ಲಕ್ಷ್ಮಣ್ ಅವರು ಮಾತ್ರವಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕೂಡ ಅಭ್ಯರ್ಥಿ, ನಿಮಗೆ ನೀವೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಿ. ನಾವೆಲ್ಲ ಒಗ್ಗಟ್ಟಾಗಿ ಇವರ ಕೈ ಬಲಪಡಿಸಿ, ಲೋಕಸಭೆಯಲ್ಲಿ ಮೈಸೂರಿನ ಧ್ವನಿಯಾಗಿ ಘರ್ಜಿಸಲಿ ಎಂದು ನಾನು ಹಾರೈಸುತ್ತೇನೆ.

ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದು ಯಾಕೆ? ಅವರ ಪಕ್ಷ ದುರ್ಬಲವಾದ ಕಾರಣ ತಮ್ಮ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತಿದೆ. ಕೇಂದ್ರ ಸರ್ಕಾರ ತೆರಿಗೆ ಸೇರಿದಂತೆ ಅನೇಕ ವಿಚಾರವಾಗಿ ನಮಗೆ ದ್ರೋಹ ಬಗೆದಿದೆ. ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ನಾವು ಆಗ್ರಹಿಸುತ್ತಾ ಬಂದಿದ್ದೇವೆ. ಈಗ ದೇವೇಗೌಡರು ಈ ಮೇಕೆದಾಟು ಯೋಜನೆಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳುತ್ತಿದ್ದಾರೆ. ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ಮಾಡಿದಾಗ ನಿಮ್ಮ ಕೂಗು ಏನಾಗಿತ್ತು? ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜನ ಪೆಟ್ಟು ನೀಡಲಿದ್ದಾರೆ ಎಂದು ಈಗ ಮೇಕೆದಾಟು ಯೋಜನೆ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಯೋಜನೆ. ಕಾಂಗ್ರೆಸ್ ಸರ್ಕಾರದಲ್ಲೇ ಈ ಯೋಜನೆ ಆರಂಭಿಸಿ ಪೂರ್ಣಗೊಳಿಸುತ್ತೇವೆ. ಈ ಯೋಜನೆ ಜಾರಿ ಮಾಡಲೇಬೇಕು ಎಂದು ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ.

ಕಾಂಗ್ರೆಸ್ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ನಾನು ನಮ್ಮ ನಾಯಕರಿಗೆ ಸೂಚಿಸಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮೈತ್ರಿ ಬಗ್ಗೆ ತೃಪ್ತಿ ಇಲ್ಲ. ಅಲ್ಲಿ ಅವರಿಗೆ ಭವಿಷ್ಯವಿಲ್ಲ. ಈ ಕಾಂಗ್ರೆಸ್ ಸರ್ಕಾರ ಕೇವಲ ನಾಲ್ಕು ವರ್ಷ ಮಾತ್ರವಲ್ಲ. ಮುಂದಿನ ಒಂಬತ್ತು ವರ್ಷ ಅಧಿಕಾರ ನಡೆಸಲಿದೆ.

Related Articles

Back to top button