Kannada NewsLatest

ಕೋಟೆಕೆರೆ ಪ್ರವೇಶ ಶುಲ್ಕ ಪುನರ್ ಪರಿಶೀಲಿಸುವ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿಯ ಸುಂದರ ತಾಣವಾದ ಕೋಟೆ ಕೆರೆಯ ಆವರಣವನ್ನು ಪ್ರವೇಶಿಸುದಕ್ಕೂ ಪ್ರವೇಶ ಶುಲ್ಕ ವಿಧಿಸಿರುವ ಹಿಂದಿನ ಜಿಲ್ಲಾಧಿಕಾರಿ ಡಾ.ವಿಶಾಲ ಅವರ ನಿರ್ಧಾರದ ವಿರುದ್ಧ ಕಳೆದ 15 ದಿನಗಳಿಂದ ನಡೆದಿರುವ ಕನ್ನಡ ಪರ ಮತ್ತು ಇತರ ಸಾಮಾಜಿಕ ಸಂಘಟನೆಗಳ ಹೋರಾಟವು ಇಂದು ಶುಕ್ರವಾರ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯ ಮೆಟ್ಟಿಲು ಏರಿದೆ.
ಸುಮಾರು ಹತ್ತು ಸಂಘಟನೆಗಳ ಅಧ್ಯಕ್ಷರು ಇತರ ಪದಾಧಿಕಾರಿಗಳು ಇಂದು ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಮತ್ತು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರೊಂದಿಗೆ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಒಂದು ಗಂಟೆ ಕಾಲ ಚರ್ಚೆ ನಡೆಸಿದರು.
ಆರಂಭದಲ್ಲಿ ಕನ್ನಡ ಹೋರಾಟಗಾರ ಅಶೋಕ ಚಂದರಗಿ,1991 ರಲ್ಲಿ ಈ ಕೆರೆಯನ್ನು ಅಂದಿನ ಜಿ.ಪಂ. ಮುಖ್ಯ ಕಾರ್ಯದರ್ಶಿ ಭರತ್ ಲಾಲ್ ಮೀನಾ ಅವರ ” ಅಪ್ನಾದೇಶ” ಸ್ವಯಂ ಸೇವಾ ಸಂಸ್ಥೆಯು ಅಭಿವೃದ್ಧಿಗೊಳಿಸಲು ಮುಂದೆ ಬಂದಾಗ ಬೆಳಗಾವಿಯ ಸಾವಿರಾರು ಯುವಕರು ಶ್ರಮದಾನ ಮಾಡುವ ಮೂಲಕ ಕೆರೆಗೆ ಒಂದು ರೂಪವನ್ನು ನೀಡಿದ್ದನ್ನು ಉಭಯ ಅಧಿಕಾರಿಗಳ ಗಮನಕ್ಕೆ ತಂದರು.
ಹಿಂದಿನ ಜಿಲ್ಲಾಧಿಕಾರಿಗಳು ಮಾಡಿಕೊಂಡ ತಪ್ಪು ತಿಳುವಳಿಕೆಯಿಂದಾಗಿ ಪ್ರವೇಶ ಶುಲ್ಕ ವಿಧಿಸಿರುವ ಸಾಧ್ಯತೆಯಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಹಾದೇವ ತಳವಾರ,ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಸಲೀಂ ಖತೀಬ, ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಿ.ತಿಪ್ಪೇಸ್ವಾಮಿ, ಕೋಟೆ ಕೆರೆ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಮ್.ಕೆ.ಕುಂದರಗಿ, ಕ್ರಿಯಾ ಸಮಿತಿಯ ರಾಜೂ ಕುಸೋಜಿ, ಎಮ್.ಜಿ.ಮಕಾನದಾರ, ಶಿವಪ್ಪ ಶಮರಂತ, ಸಾಗರ ಬೋರಗಲ್ಲ, ಬಾಬು ಸಂಗೋಡಿ, ರಜತ್ ಅಂಕಲೆ , ಗಣೇಶ ರೋಖಡೆ ಮುಂತಾದವರು ಮಾತನಾಡಿ ಪ್ರವೇಶ ಶುಲ್ಕವನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಕೊನೆಗೆ ಮಾತನಾಡಿದ ಮೇಘಣ್ಣವರ ಅವರು,ಪ್ರವೇಶ ಶುಲ್ಕ ವಿಧಿಸಿರುವ ಹಿಂದಿನ ಜಿಲ್ಲಾಧಿಕಾರಿಗಳ ನಿರ್ಧಾರವನ್ನು ಸಕಾರಾತ್ಮಕವಾಗಿ ಪುನರ್ ಪರಿಶೀಲಿಸಲು ತಾವು ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಮಾತನಾಡಿ,ಈ ಬಗ್ಗೆ ಪರಿಶೀಲಿಸಿ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುವದಾಗಿ ಕನ್ನಡ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button