ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಿಜೆಪಿಯವರು ರಾಷ್ಟ್ರಭಕ್ತಿ, ದೇಶಪ್ರೇಮ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು. ಆದರೆ, ನಿಜವಾದ ರಾಷ್ಟ್ರ ಭಕ್ತರು, ರಾಷ್ಟ್ರ ಪ್ರೇಮಿಗಳು ನಾವೇ. ಬಿಜೆಪಿ ನಾಯಕರು ನಮ್ಮ ದೇಶದ ಮುಗ್ಧ ಯೋಧರ ಶವದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಈ ದೇಶದಿಂದ ಬಿಜೆಪಿಯ ದುರಾಡಳಿತವನ್ನು ತೊಲಗಿಸಬೇಕು ಎಂದು ಗುಡುಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರಸ್ವೀಕರಿಸಿದ ಖಂಡ್ರೆ, ಬಿಜೆಪಿಯವರ ಬಳಿ ಇರುವುದು ಕೇವಲ ಸುಳ್ಳು, ಮೋಸ, ವಂಚನೆ ಅಷ್ಟೇ. ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದೆ. ದಿನಬಳಕೆಯ ವಸ್ತುಗಳ ಬೆಲೆ ಎಷ್ಟು ಏರಿಕೆಯಾಗಿದೆ. ಜನಸಾಮನ್ಯರ ನೋವು ಕೇಳುವವರಿಲ್ಲ. ಇನ್ನೊಂದೆಡೆ ಶತ್ರು ರಾಷ್ಟ್ರದ ಸೈನಿಕರು ನಮ್ಮ ದೇಶದ ಒಳ ನುಸುಳಿ ಬಂದಿದ್ದಾರೆ. ಆದರೂ ಕೇಂದ್ರ ಸರ್ಕಾರ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದ 4 ತಿಂಗಳ ಬಳಿಕ ಇಂದು ಅಧಿಕೃತವಾಗಿ ಪದಗ್ರಹಣ ಮಾಡಿದರು. ಕೊರೊನಾ ಲಾಕ್ಡೌನ್ ಘೋಷಣೆಯಾದ ಹಿನ್ನಲೆಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ನಡೆಸಲು ಅನುಮತಿ ಸಿಕ್ಕಿರಲಿಲ್ಲ. ಆದರೆ, ಇದೀಗ ಲಾಕ್ ಡೌನ್ ಸಡಿಲಿಕೆಯಾದ ಕಾರಣ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಅಧಿಕಾರ ಸ್ವೀಕಾರ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ