*ನಕಲಿ ಆಹ್ವಾನ ಪತ್ರಿಕೆ: ಮಾಜಿ ಸಚಿವ ಸುರೇಶ್ ಕುಮಾರ್ ವಿರುದ್ಧ ರಮೇಶ್ ಬಾಬು ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ: ಮಾಜಿ ಸಚಿವ ಸುರೇಶ್ ಕುಮಾರ್ ಅವರು, ಬೆಂಗಳೂರು ವಕೀಲರ ಸಂಘದ ಹೆಸರಿನಲ್ಲಿ ನಕಲಿ ಆಹ್ವಾನ ಪತ್ರಿಕೆ ಸೃಷ್ಟಿಸಿ, ಡಿಸಿಎಂ ಡಿ.ಕೆ ಶಿವಕುಮಾರ್ ಹೆಸರಿಗೆ ಮಸಿ ಬಳಿಯಲು ಹೊರಟಿರುವುದು ಹಿಟ್ ಅಂಡ್ ರನ್ ಮನಸ್ಥಿತಿಯ ಇನ್ನೊಂದು ಮುಖ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬೆಂಗಳೂರು ವಕೀಲರ ಸಂಘವು ನ್ಯಾಯಾಧೀಶ ದಿನೇಶ್ ಕುಮಾರ್ ಅವರಿಗೆ ಗೌರವ ಸಮಾರಂಭ ಹಮ್ಮಿಕೊಂಡ ವೇಳೆ ಸಿಎಂ ಅಥವಾ ಡಿಸಿಎಂ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇವರಿಗೆ ಸಂಘವು ಆಹ್ವಾನ ಪತ್ರಿಕೆ ತಲುಪಿಸಿರುವುದಿಲ್ಲ. ಪ್ರಚಾರಕ್ಕಾಗಿ ಚೇಷ್ಟೆಗಳನ್ನು ಮಾಡುವ ಸುರೇಶ್ ಕುಮಾರ್, ನ್ಯಾಯಮೂರ್ತಿಗಳ ಕಾರ್ಯಕ್ರಮಕ್ಕೆ ತಾವೇ ಒಂದು ಆಹ್ವಾನ ಪತ್ರಿಕೆ ಸೃಷ್ಟಿ ಮಾಡಿ ಅನಾವಶ್ಯಕವಾಗಿ ಉಪಮುಖ್ಯಮಂತ್ರಿಗಳ ಹೆಸರನ್ನು ಎಳೆದು ತಂದು ಪ್ರಚಾರ ಪಡೆಯುವ ಹುನ್ನಾರಕ್ಕೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ತಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿದ ಶಿಕ್ಷಕರನ್ನು ಜೈಲಿಗೆ ಹಾಕಿಸುವ ಸುರೇಶ್ ಕುಮಾರ್, ಪ್ರಚಾರಕ್ಕಾಗಿ ಮನೆಯ ಮುಂದೆ ಕಸ ಹೊಡೆಯುವ ನಾಟಕವಾಡುತ್ತಾರೆ. ಅಧಿಕಾರ ಇದ್ದಾಗ ಒಬ್ಬರಿಗೂ ಉದ್ಯೋಗ ಕೊಡಿಸದ ಇವರು ಪ್ರಚಾರಕ್ಕಾಗಿ ಕರ್ನಾಟಕ ಲೋಕ ಸೇವಾ ಆಯೋಗದ ತಾತ್ಕಾಲಿಕ ವಾಚ್ ಮೆನ್ ಕೆಲಸವನ್ನು ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ವಕೀಲರ ಸಂಘ ತಾವು ಇಲ್ಲಿಯವರೆಗೆ ಕಾರ್ಯಕ್ರಮದ ಯಾವುದೇ ಆಹ್ವಾನ ಪತ್ರಿಕೆ ಮುದ್ರಣ ಮಾಡಿಲ್ಲವೆಂದು ಸ್ಪಷ್ಟನೆ ನೀಡಿರುತ್ತಾರೆ. ಬೆಂಗಳೂರು ವಕೀಲರ ಸಂಘವು ಯಾವುದೇ ರಾಜಕೀಯ ಪಕ್ಷದ ಸಂಘಟನೆ ಅಲ್ಲ. ಮೌಲ್ಯಗಳ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಸುರೇಶ್ ಕುಮಾರ್ ರವರು ಈ ಪ್ರಕರಣದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಹಾಗೂ ಸಂಘದ ಹೆಸರಿನಲ್ಲಿ ಅಪಪ್ರಚಾರ ಮಾಡಿರುವ ಮಾಜಿ ಸಚಿವ ಸುರೇಶ್ ಕುಮಾರ್ ಅವರಿಗೆ ವಕೀಲರ ಸಂಘ ನೋಟೀಸ್ ನೀಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ