ಕೆಪಿಎಲ್: ಬೆಂಗಳೂರಿನಲ್ಲಿ 15 , ಮೈಸೂರಿನಲ್ಲಿ 10 ಪಂದ್ಯಗಳು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ಕರ್ನಾಟಕ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದ ನೂತನ ವೇಳಾಪಟ್ಟಿ ಪ್ರಕಾರ ಕರ್ನಾಟಕ ಪ್ರೀಮಿಯರ್ ಲೀಗ್ ನ ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ಆಗಸ್ಟ್ 16 ರಿಂದ 23 ರ ವರೆಗೆ ನಡೆಯಲಿದೆ.
ಉತ್ತರಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆಯಬೇಕಾಗಿದ್ದ ಐದು ಪಂದ್ಯಗಳನ್ನು ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಸಲಾಗುವುದು. ಈ ಹಿಂದೆಯೇ ನಿಗಧಿಯಾಗಿರುವಂತೆ ಫೈನಲ್ ಪಂದ್ಯ ಆಗಸ್ಟ್ 31 ರಂದು ಅರಮನೆ ನಗರ ಮೈಸೂರಿನಲ್ಲಿ ನಡೆಯಲಿದೆ.
ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡಬೇಕಾಗಿರುವುದರಿಂದ ತಂಡಗಳಿಗೆ ಆಗಸ್ಟ್ 24 ವಿಶ್ರಾಂತಿ/ ಪ್ರಯಾಣದ ದಿನವಾಗಿರುತ್ತದೆ. ಬೆಂಗಳೂರಿನಲ್ಲಿ 15 ಹಾಗೂ ಮೈಸೂರಿನಲ್ಲಿ 10 ಪಂದ್ಯಗಳು ನಡೆಯಲಿವೆ.
ದೇಶದ ಪ್ರಮುಖ ಕ್ರಿಕೆಟ್ ಲೀಗ್ ಗಳಲ್ಲಿ ಪ್ರಮುಖವಾಗಿರುವ ಕ್ಯಾಸಿನೊ ಪ್ರೈಡ್ ಕೆಪಿಎಲ್ ಎಂದು ಹೊಸ ರೂಪ ತಳೆದಿದೆ. ಗೋಲ್ಡನ್ ಪೀಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ನ ಭಾಗವಾಗಿರುವ ಕ್ಯಾಸಿನೊ ಪ್ರೈಡ್ ದೇಶದಲ್ಲಿ ಪ್ರಮುಖ ಕ್ಯಾಸಿನೊ ಸರಣಿ ಹಾಗೂ ಹೋಟೆಲ್ ಗಳನ್ನುಹೊಂದಿದೆ. ಅಲ್ಲದೆ ದೇಶದ ಅನೇಕ ಸಮುದ್ರ ಪ್ರದೇಶ ಹಾಗೂ ತಟ ಭಾಗಗಳಲ್ಲೂ ತನ್ನ ವ್ಯವಹಾರವನ್ನು ಹೊಂದಿರುವ ಗೋಲ್ಡನ್ ಪೀಸ್ ಕಂಪೆನಿಯು ಕ್ಯಾಸಿನೊ ಪ್ರೈಡ್ ಮೂಲಕ ಟೈಟಲ್ ಪ್ರಾಯೋಜಕತ್ವ ಹೊಂದಿದೆ.
ಫ್ಯಾಂಟಸಿ ಸ್ಪೋರ್ಟ್ಸ್ ನಲ್ಲಿ ಪ್ರಭುತ್ವ ಸಾಧಿಸಿರುವ ಡ್ರೀಮ್ XI ಈಗಾಗಲೇ ಪವರ್ಡ್ ಬೈ ಪ್ರಾಯೋಜಕತ್ವ ಹೊಂದಿದೆ. ಡ್ರೀಮ್ XI ಯೂನಿಕಾರ್ನ್ ಕ್ಲಬ್ ಸೇರಿದ ಭಾರತದ ಮೊದಲ ಕಂಪನಿ. ಇದು ಮೂರು ವರ್ಷಗಳ ಅವಧಿಗೆ ಕೆಪಿಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
2018 ರಲ್ಲಿ ಕೆಪಿಎಲ್ 42.8 ಮಿಲಿಯನ್ ವೀಕ್ಷಕರನ್ನು ಹಾಗೂ 353 .1 ಮಿಲಿಯನ್ ಸರಾಸರಿ ಪ್ರಭಾವವನ್ನು ಹೊಂದಿತ್ತು. ಹಿಂದಿಗಿಂತ ಶೇ. 17 ರಷ್ಟು ಏಳ್ಗೆ ಯನ್ನು ಕಂಡಿರುವ ಕೆಪಿಎಲ್ 2019 ರ ಋತುವಿನಲ್ಲಿ ಇನ್ನೂಹೆಚ್ಚಿನ ಜನಪ್ರಿಯಗೊಳ್ಳಲಿದೆ.
ಸೈಕಲ್ ಪ್ಯೂರ್ ಅಗರ್ಬತ್ತಿಸ್ ಈ ಬಾರಿಯೂ ಅಂಪೈರ್ ಹಾಗೂ ಅಸೋಸಿಯೇಟ್ ಪ್ರಾಯೋಜಕರಾಗಿ ಮುಂದುವರಿದಿದ್ದಾರೆ.
ವಿಮಲ್ ಎಲೈಚಿ, ಟಿಸಿಎಲ್, ನಿಪ್ಪೋನ್ ಪೈಂಟ್, ಎಲೈಸಿ, ಸ್ಟಾರ್ ಏರ್ (ಸಂಜಯ್ ಗೋಢಾವತ್ ಗ್ರೂಪ್) ಅಸೋಸಿಯೇಟ್ ಪ್ರಾಯೋಜಕರಾಗಿ ಕೆಪಿಎಲ್ ಕುಟುಂಬವನ್ನು ಸೇರಿಕೊಂಡಿದ್ದಾರೆ.
ಪೇಟಿಎಂ ಇನ್ಸೈಡರ್ ಕೆಪಿಎಲ್ 8 ರ ಆವೃತ್ತಿಯೊಂದಿಗೆ ಈಗಾಗಲೇ ಕೈ ಜೋಡಿಸಿದ್ದು, ಈಗಾಗಲೇ ಆನ್ ಲೈನ್ ನಲ್ಲಿ ತನ್ನ ಟಿಕೆಟ್ ಮಾರಾಟ ಕಾರ್ಯವನ್ನು ಆರಂಭಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ