ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಜನವರಿ ೧೨ ಹಾಗೂ ೧೩ ರಂದು ಸಂಗೊಳ್ಳಿ ರಾಯಣ್ಣ ವೇದಿಕೆ ಸರ್ಕಾರಿ ಮೈದಾನ ಸಂಗೊಳ್ಳಿಯಲ್ಲಿ ಜರುಗಲಿದೆ.
ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು ಜನವರಿ ೧೨ ರಂದು ಸಂಜೆ ೭ ಗಂಟೆಗೆ ಉತ್ಸವನ್ನು ಉದ್ಘಾಟಿಸಲಿದ್ದಾರೆ. ಸಂಗೊಳ್ಳಿಯ ಶ್ರೀ ಗುರು ಸಿದ್ಧಲಿಂಗಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಚನ್ನಮ್ಮ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ ಅಂಗಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸಿ.ಟಿ.ರವಿ ಅವರು ಉಪಸ್ಥಿತರಿರುವರು.
ಬೈಲಹೊಂಗಲ ತಾಲೂಕಿನ ಶಾಸಕರಾದ ಮಹಾಂತೇಶ ಎಸ್. ಕೌಜಲಗಿ ಅವರು ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ ಹಾಗೂ ಕುಡಚಿ ಮತಕ್ಷೇತ್ರದ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ.ರಾಜೀವ್ ಅವರು ಭಾಗವಹಿಸುವರು.
ಮುಖ್ಯ ಅಥಿತಿಗಳಾಗಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರುವರು.
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ:
ಜನವರಿ ೧೨ ರಂದು ಬೆಳಿಗ್ಗೆ ೬ ಗಂಟೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ ನೆರವೇರುವುದು. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸುವರು. ಸಂಗೊಳ್ಳಿಯ ಬಸವರಾಜ ಡೊಳ್ಳಿನ ಅರ್ಚನೆ ನೆರವೇರಿಸಲಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ ಅವರು ಬೆಳಿಗ್ಗೆ ೧೦ ಗಂಟೆಗೆ ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದಲ್ಲಿ ಧ್ವಜರೋಹಣ ನೆರವೇರಿಸುವರು ಹಾಗೂ ಶೂರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡುವರು.
ಜನವರಿ ೧೨ ರಂದು ಬೆಳಿಗ್ಗೆ ೧೦-೧೫ ಗಂಟೆಗೆ ರಾಜ್ಯ ರೈಲ್ವೆ ಸಚಿವರಾದ ಸುರೇಶ ಅಂಗಡಿ ಅವರು ಜಾನಪದ ಕಲಾವಾಹಿನಿ ಉದ್ಘಾಟಿಸುವರು. ಬೆಳಿಗ್ಗೆ ೧೧ ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಸರ್ಕಾರಿ ಮೈದಾನದಲ್ಲಿ ಬೈಲಹೊಂಗಲ ತಾಲೂಕಿನ ಶಾಸಕರಾದ ಮಹಾಂತೇಶ ಎಸ್. ಕೌಜಲಗಿ ಅವರು ವಸ್ತುಪ್ರದರ್ಶನ ಉದ್ಘಾಟನೆ ಮಾಡುವರು. ರಾತ್ರಿ ೯ ಗಂಟೆಗೆ ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಅನೀಲ ಮೇಕಲಮರಡಿ ಅವರು ವೀರರ ಸ್ಮರಣೆಗಾಗಿ ದೀಪೋತ್ಸವ ನೇರವೇರಿಸುವರು.
ಜನವರಿ ೧೨ ಮತ್ತು ೧೩ ರಂದು ಸಾಯಂಕಾಲ ೬ ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಸರ್ಕಾರಿ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಿಚಾರ ಸಂಕಿರಣ:
ಜನವರಿ ೧೩ ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದಲ್ಲಿ ಮಧ್ಯಾಹ್ನ ೧೨ ಗಂಟೆಗೆ ವಿಚಾರ ಸಂಕೀರಣವನ್ನು ಬೈಲಹೊಂಗಲ ತಾಲೂಕ ಪಂಚಾಯತ ಅಧ್ಯಕ್ಷರಾದ ನೀಲವ್ವ ಫಕೀರಣ್ಣವರ ಉದ್ಘಾಟಿಸುವರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಯಣ್ಣನ ಪಾತ್ರದ ಕುರಿತು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಡಾ.ಆರ್.ಸಿ.ಹಿರೇಮಠ ಅವರು ಮಂಡಿಸುವರು.
ಜನಪದ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪಾತ್ರದ ಕುರಿತು ಧಾರವಾಡ ಜನಪದ ಕರ್ನಾಟಕ ಪರಿಷತ್ ಅಧ್ಯಕ್ಷರಾದ ಡಾ. ಶ್ರೀಶೈಲ ಹುದ್ದಾರ ಅವರು ವಿಷಯ ಮಂಡಿಸುವರು.
ಬೆಳಗಾವಿ ಲಿಂಗರಾಜ ಕಾಲೇಜು ವಿಶ್ರಾಂತ ಪ್ರಾಚಾರ್ಯರಾದ ಡಾ.ಬಸವರಾಜ ಜಗಜಂಪಿ ಅವರು ಅಧ್ಯಕ್ಷತೆ ವಹಿಸುವರು. ನರಗುಂದ ಎಸ್.ಎಸ್.ಸರಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ.ಎ.ಬಿ.ವಗ್ಗರ ಅವರು ಅಥಿತಿಗಳಾಗಿ ಆಗಮಿಸುವರು.
ಜನವರಿ ೧೩ ರಂದು ಕ್ರೀಡಾ ಕಾರ್ಯಕ್ರಮಗಳು ಮಧ್ಯಾಹ್ನ ೧೨ ಗಂಟೆಗೆ ವಾಲಿಬಾಲ್ ಪಂದ್ಯಕ್ಕೆ ತಾಲೂಕ ಪಂಚಾಯತ ಸದಸ್ಯರಾದ ಗೌಸಸಾಬ ಬುಡ್ಡೆಮುಲ್ಲಾ ಅವರು ಉದ್ಘಾಟಿಸುವರು ಹಾಗೂ ಮಧ್ಯಾಹ್ನ ೩ ಗಂಟೆಗೆ ಕುಸ್ತಿ ಪಂದ್ಯಾವಳಿಯನ್ನು ಚ.ಕಿತ್ತೂರು ಶಾಸಕರಾದ ಮಹಾಂತೇಶ ದೊಡಗೌಡ್ರ ಉದ್ಘಾಟಿಸುವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ