
ಪ್ರಗತಿವಾಹಿನಿ ಸುದ್ದಿ: “ಬೊಮ್ಮಾಯಿ ಸರ್ಕಾರದ ವೇಳೆ ಮಾಡಿದ ಹಳೆಯ ಲೆಕ್ಕಗಳನ್ನು ತೆಗೆದುಕೊಂಡರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಜಾರಿಗೆ ಅಂದಾಜು ರೂ.87,818 ಸಾವಿರ ಕೋಟಿ ಹಣ ಬೇಕಾಗುತ್ತದೆ. ಪ್ರಸ್ತುತ ಪರಿಷ್ಕರಣೆ ಮಾಡಿದರೆ ವೆಚ್ಚ ಇನ್ನೂ ಹೆಚ್ಚಾಗುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಎಚ್.ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ಯೋಜನೆಗೆ ಒಂದೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
“ಸಣ್ಣ ಹಾಗೂ ದೊಡ್ಡ ನೀರಾವರಿ ಈ ಎರಡೂ ಇಲಾಖೆಗಳ ಬಜೆಟ್ ಇರುವುದೇ ರೂ.22 ಸಾವಿರ ಕೋಟಿ. ಆದರೂ ಈ ಯೋಜನೆ ಜಾರಿಗೆ ನಾವು ಬದ್ಧವಾಗಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರಿಗೆ ನಾನು ಹಾಗೂ ಸಣ್ಣ ನೀರಾವರಿ ಸಚಿವರಾದ ಬೋಸ್ ರಾಜು ಅವರು ಉದಯಪುರ ಸಮಾವೇಶದ ವೇಳೆ, ದೆಹಲಿಯಲ್ಲಿ ಭೇಟಿಯಾಗಿ ಯೋಜನೆ ಅನುಮೋದನೆಗೆ ಮನವರಿಕೆ ಮಾಡಿದ್ದೇವೆ. ಇದಕ್ಕೂ ಮುಂಚಿತವಾಗಿ ಕಾನೂನಿನ ಚೌಕಟ್ಟಿನಲ್ಲಿ ಏನೇನು ಮಾಡಬೇಕು ಎಂದು ನಾವು ಆಲೋಚನೆ ಮಾಡಿದ್ದೇವೆ” ಎಂದು ಹೇಳಿದರು.
ನಾವು- ನೀವು ಸೇರಿ ಮಾಡಿಸಬೇಕಿದೆ
“ನಾವು- ನೀವು (ಆಡಳಿತ-ವಿರೋಧ ಪಕ್ಷಗಳು) ಸೇರಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಮಾಬೇಕು. ಹೀಗಾದಾಗ ಮಾತ್ರ ಇದಕ್ಕೆ ಏನಾದರೂ ಮುಕ್ತಿ ಸಿಗಬಹುದು. ಇದಕ್ಕೆ ನಾನು ಪ್ರಸ್ತಾವನೆ ತಯಾರು ಮಾಡುತ್ತೇನೆ. ನೀವು ನಾವು ಇಬ್ಬರೂ ದೆಹಲಿಗೆ ಹೋಗೋಣ” ಎಂದರು.
“ಈಗಾಗಲೇ 75,563 ಎಕರೆ ಸಬ್ ಮರ್ಜ್ ಆಗಿದೆ, 2,543 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 29,568 ಎಕರೆ ಭೂಮಿ ವಿವಿಧ ಹಂತಗಳಲ್ಲಿದೆ. 43,452 ಎಕರೆ ಭೂಮಿ ಸ್ವಾಧೀನಕ್ಕೆ ಒಳಪಡಬೇಕಿದೆ. ಆರ್.ಸಿ ಭೂಮಿಗೆ 6,467 ಎಕರೆ ಬೇಕಾಗಿದೆ ಇದರಲ್ಲಿ ಶೇ 50 ರಷ್ಟು ಎಂದರೆ 3,392 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರಲ್ಲಿ ವಿವಿಧ ಹಂತಗಳಲ್ಲಿ 2,600 ಎಕರೆಯಿದ್ದು, 471 ಎಕರೆ ಬಾಕಿ ಉಳಿದಿದೆ. ಫಾರ್ಮೇಶನ್ ಆಫ್ 24 ಆರ್ ಸಿ ವಿಲೇಜ್ ಅಡಿ 4,636 ಎಕರೆ, ವಿವಿಧ ಹಂತಗಳಲ್ಲಿ 2,500 ಮತ್ತು 1,886 ಎಕರೆ ಬಾಕಿಯಿದೆ. ಕಾಲುವೆ ಜಾಲ ನಿರ್ಮಾಣಕ್ಕೆ 1,33,867 ಎಕರೆ ಬೇಕಾಗಿದೆ. ಇದರಲ್ಲಿ ಈಗಾಗಲೇ 51 ಸಾವಿರ ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸರ್ಕಾರದ ಬಳಿ ವಿವಿಧ ಹಂತಗಳಲ್ಲಿ 22,962 ಎಕರೆ ಭೂಮಿ ಇದೆ” ಎಂದು ಅಂಕಿ-ಅಂಶಗಳನ್ನು ಸದನದ ಮುಂದಿಟ್ಟರು.
“ಒಂದಷ್ಟು ಭೂಮಿಗೆ 10- 12 ಕೋಟಿ ಪರಿಹಾರ ನೀಡಬೇಕು ಎಂದು ನ್ಯಾಯಲಯ ಆದೇಶಿಸಿದೆ. ಇದರ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಭೂಸ್ವಾಧೀನಕ್ಕೆ ಅನುಮೋದನೆ ದೊರೆಯದೇ ಹೋದರು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿ ಎನ್ನುವುದು ಅನೇಕರ ಒತ್ತಡ. ಇದನ್ನು ಸರ್ಕಾರವೂ ಒಪ್ಪುತ್ತದೆ. ಇದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಆ ಭಾಗದ ಜನಪ್ರತಿನಿಧಿಗಳು ಸೇರಿದಂತೆ ನಾವೆಲ್ಲರೂ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ ಇದು ಸರ್ಕಾರದ ದಾಖಲೆಗೆ ಬರಬೇಕು. ಇದಾದ ನಂತರ ಹಣಕಾಸು ಇಲಾಖೆ, ಕಾನೂನು ಇಲಾಖೆಯ ಅಭಿಪ್ರಾಯ ಕೇಳಬೇಕು” ಎಂದು ಹೇಳಿದರು.
“ಬೊಮ್ಮಾಯಿ ಅವರ ಸರ್ಕಾರದ ವೇಳೆ ಸಚಿವ ಸಂಪುಟ ಉಪಸಮಿತಿ ಮಾಡಿ ಭೂಸ್ವಾಧೀನದ ಬಗ್ಗೆ ಮಾಡಿರುವ ತೀರ್ಮಾನಗಳು ಪೂಜಾರ್ ಅವರಿಗೆ ಸಮಾಧಾನ ತಂದಿಲ್ಲ. ಯುಕೆಪಿ ಬಗ್ಗೆ ವಿರೋಧ ಪಕ್ಷದಿಂದ ಅತಿಹೆಚ್ಚು ಪ್ರಶ್ನೆ ಮಾಡಿದ ಹೆಗ್ಗಳಿಕೆ ಪೂಜಾರ್ ಅವರಿಗೆ ಸಲ್ಲಬೇಕು” ಎಂದು ಹೇಳಿದರು.
ನೀವು ಬಜೆಟ್ ಅಲ್ಲಿ ಕೇವಲ ಶೇ.5 ರಷ್ಟು ಮಾತ್ರ ಹಣ ಇಟ್ಟಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ ಪೂಜಾರ್ ಅವರಿಗೆ ಉತ್ತರಿಸಿದ ಡಿಸಿಎಂ, “ಬೊಮ್ಮಾಯಿ ಅವರ ಕಾಲದಲ್ಲಿಯೂ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಸೇರಿ ರೂ.21 ಸಾವಿರ ಕೋಟಿ ಇಟ್ಟಿದ್ದರು. ಕೇಂದ್ರ ಹಣ ಕೊಡದ ಕಾರಣ ಅಂದಾಜು ರೂ. 5 ಸಾವಿರ ಮಾತ್ರ ಬಜೆಟ್ ಆದಂತಾಯಿತು” ಎಂದರು.
“ನಿಮ್ಮ ಭಾಗದ ಎಲ್ಲಾ ಜನಪ್ರತಿನಿಧಿಗಳ ಜೊತೆ ನಾವು ಸಹಾನೂಭೂತಿಯಿಂದ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಖ್ಯಮಂತ್ರಿಗಳು ಸಹ ಒಂದೇ ಬಾರಿಗೆ ಭೂಸ್ವಾಧೀನ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ. ಊಟ ಹಾಕಲು ಬಂದ ನಮ್ಮ ಮೇಲೆ ಜಗಳಕ್ಕೆ ಬೀಳುತ್ತಿದ್ದೀರಿ” ಎಂದರು.
ವರಾಹಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಕ್ರಮ
ವರಾಹಿ ಯೋಜನೆ ಯಾವಾಗ ಪ್ರಾರಂಭವಾಯಿತು ಇಲ್ಲಿಯ ತನಕ ಇದಕ್ಕೆ ಎಷ್ಟು ಖರ್ಚಾಗಿದೆ ಎಂದು ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ, “1979 ರಿಂದ 2005 ರವರೆಗೆ ಸುಮಾರು 26 ವರ್ಷಗಳ ಕಾಲ ಕೇಂದ್ರ ಪರಿಸರ ಇಲಾಖೆಯ ತಿಳುವಳಿಕೆ ಪತ್ರ ಪಡೆಯಲು ಸಮಯ ಹೋಗಿದೆ. ಇದಾದ ನಂತರ ಈ ಯೋಜನೆಗೆ ಜೀವ ಬಂದಿತು. ಆದಷ್ಟು ಬೇಗ ಕೆಲಸ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ವರಾಹಿ ಎಡದಂಡೆಯಲ್ಲಿ ಮಾತ್ರ ನೀರು ಹೋಗುತ್ತಿದೆ. ಭಂಡಾರಿಯವರ ಜೊತೆ ಒಮ್ಮೆ ಯೋಜನಾ ಸ್ಥಳಕ್ಕೆ ಭೇಟಿ ನೀಡಲಾಗುವುದು” ಎಂದು ತಿಳಿಸಿದರು.
“1979 ರಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆಯ ನೀತಿ ನಿಯಮಗಳ ಅರಿವಿಲ್ಲದೆ ಯೋಜನೆ ಮಾಡಿಬಿಟ್ಟಿದ್ದಾರೆ. ಭೂ ಸ್ವಾಧೀನವೇ ಈ ಯೋಜನೆಯ ಪ್ರಮುಖ ವಿಚಾರ. 1,009 ಎಕರೆ ಪಟ್ಟಾ ಭೂಮಿಯಲ್ಲಿ 765 ಎಕರೆ ಭೂಮಿ ಸ್ವಾಧೀನ ಪಡೆಸಿಕೊಂಡಿದ್ದು, ಇನ್ನೂ 343 ಎಕರೆ ಬಾಕಿಯಿದೆ. 813 ಎಕರೆ ಸರ್ಕಾರಿ ಭೂಮಿಯಲ್ಲಿ 714 ಎಕರೆ ಸ್ವಾಧೀನ ಮಾಡಿಕೊಂಡಿದ್ದು 99 ಎಕರೆ ಬಾಕಿಯಿದೆ. 345 ಎಕರೆ ಅರಣ್ಯ ಭೂಮಿಯಲ್ಲಿ 319 ಎಕರೆ ಸ್ವಾಧೀನ ಮಾಡಿಕೊಂಡಿದ್ದು 19 ಎಕರೆ ಬಾಕಿಯಿದೆ. ಡೀಮ್ಡ್ ಅರಣ್ಯ ಭೂಮಿಯಲ್ಲಿ 11 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು 104 ಎಕರೆ ಬಾಕಿಯಿದೆ. ಸ್ವಾಧೀನಗಳಿಗೆ 73 ಕೋಟಿ ಅವಶ್ಯಕತೆಯಿದೆ” ಎಂದು ಮಾಹಿತಿ ನೀಡಿದರು.
11 ಸಾವಿರ ಕೋಟಿ ಬಿಲ್ ಇದೆ; ಯಾರಿಗೆ ಕೊಡುವುದು
“ಕೇಂದ್ರದಲ್ಲಿ ಯಾವುದೇ ಯೋಜನೆ ಮಾಡಿದರೂ ಯೋಜಿತವಾಗಿ ಮಾಡುತ್ತಾರೆ. ನಮ್ಮ ಇಲಾಖೆಗೆ ಇರುವ ಬಜೆಟ್ 22 ಸಾವಿರ ಕೋಟಿ ಆದರೆ 1.50 ಲಕ್ಷ ಕೋಟಿ ಕಾಮಗಾರಿಗಳು ನಡೆಯುತ್ತಿವೆ. ಬಿಲ್ ಗಳ ಶೇ.10ಕ್ಕಿಂತ ಹೆಚ್ಚು ಪಾವತಿ ಮಾಡಲು ಆಗುವುದಿಲ್ಲ. ಮುಖ್ಯಮಂತ್ರಿಗಳು ಬಿಲ್ ಪಾವತಿಗಾಗಿ 1,200 ಕೋಟಿ ಕೊಟ್ಟಿದ್ದಾರೆ. ಆದರೆ ಒಟ್ಟು ಬಿಲ್ 11 ಸಾವಿರ ಕೋಟಿಯಷ್ಟಿದೆ. ಯಾರಿಗೆ ದುಡ್ಡು ಕೊಡುವುದು ಬಿಡುವುದು. ಇದೇ ದೊಡ್ಡ ಪ್ರಶ್ನೆ. ಇದಕ್ಕೆ ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಮಾತ್ರ ಗುರಿ ಮಾಡುತ್ತಿಲ್ಲ. ನಾವೆಲ್ಲರೂ ಇದಕ್ಕೆ ಕಾರಣ” ಎಂದರು.
ಸದಸ್ಯ ಟಿ.ಎ.ಶರವಣ ಅವರು ಕೆರೆ ಒತ್ತುವರಿ ಹಾಗೂ ಲಕ್ಷ್ಮಣ್ ರಾವ್ ವರದಿ, ಕೆರೆ ಬಫರ್ ಜೋನ್ ಉಲ್ಲಂಘನೆ ಬಗ್ಗೆ ಕೇಳಿದ ಪ್ರಶ್ನೆಗೆ, “ಹೈಕೋರ್ಟ್ ಈ ಹಿಂದೆ ನೀಡಿದ ತೀರ್ಪಿನಂತೆ ಕೆರೆ ಬಳಿ 50 ಮೀಟರ್, ಕಾಲುವೆ ಬಳಿ 15 ಮೀಟರ್ ಬಫರ್ ಜೋನ್ ಇಡಿ ಎಂದು ಸೂಚನೆ ನೀಡಿತ್ತು. ಆರ್ ಎಂಪಿ ಅನ್ವಯ 2015 ರಲ್ಲಿ ಅನುಮತಿ ನೀಡಿದ್ದರೆ ಮುಂದುವರೆಯಿರಿ ಎಂದು ಹೇಳಿತ್ತು. ಈ ಬಗ್ಗೆ ಒಂದು ಸಮಿತಿ ರಚನೆ ಮಾಡಿ ಅರಣ್ಯ ಇಲಾಖೆಗೆ ಕಳಿಸಲಾಗಿದೆ” ಎಂದರು.
“ಕೆರೆ ಬಫರ್ ವಲಯದ ಬಗ್ಗೆ ನನ್ನ ತಾಲ್ಲೂಕಿನಲ್ಲಿಯೇ ಸಮಸ್ಯೆಯಿದೆ. ನ್ಯಾಯಲಯಕ್ಕೆ ಜಾಗ ನೀಡಲಾಗಿದೆ. ಪೊಲೀಸ್ ಠಾಣೆಯನ್ನೂ ಸಹ ಕಟ್ಟಿಕೊಳ್ಳಲಾಗಿದೆ. ಕಂಠೀರವ ಕ್ರೀಡಾಂಗಣ ಸಹ ಕೆರೆ ಜಾಗ. ಕೆರೆ, ರಾಜಕಾಲುವೆ ಬಫರ್ ಜೋನ್ ಬಗ್ಗೆ ಒಂದು ಸಮೀಕ್ಷೆ ನಡೆಸಿ ಸರಿಪಡಿಸಲಾಗುವುದು” ಎಂದು ಹೇಳಿದರು.