ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಲವು ದಶಕಗಳಿಂದ ಜಗಳವಾಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಮಹಾರಾಷ್ಟ್ರ ಏಕಾಕರಣ ಸಮಿತಿ ನಾಯಕರೆಲ್ಲ ಶುಕ್ರವಾರ ಒಂದಾಗಿದ್ದಾರೆ.
ಇನ್ನೆಂದೂ ಕನ್ನಡ -ಮರಾಠಿ, ಕರ್ನಾಟಕ – ಮಹಾರಾಷ್ಟ್ರ ಗದ್ದಲ ನಡೆಯುವುದೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಎರಡೂ ಗುಂಪಿನ ನಾಯಕರು ನಗುನಗುತ್ತ ಪರಸ್ಪರ ಹತ್ತಿರವಾದರು.
ಇದು ನಡೆದಿದ್ದು ಇಲ್ಲಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ. ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ ಶುಕ್ರವಾರ ಸಂಜೆ ಕರವೇ ಮತ್ತು ಎಂಇಎಸ್ ನಾಯಕರನ್ನು ಠಾಣೆಗೆ ಕರೆಸಿ ಶಾಂತಿ ಸಭೆ ನಡೆಸಿದರು. ಕನ್ನಡ- ಮರಾಠಿ ಒಂದಾಗಬೇಕು, ಕರವೇ – ಎಂಇಎಸ್ ಒಂದಾಗಬೇಕು ಎಂದು ಪಾಠ ಮಾಡಿದರು.
ಗಡಿ ವಿವಾದ ಸುಪ್ರಿಂ ಕೋರ್ಟ್ ನಲ್ಲಿ ಬಗೆಹರಿಯಲಿ. ಕೋರ್ಟ್ ತೀರ್ಪಿಗೆ ಗೌರವ ಕೊಡೋಣ. ಅಲ್ಲಿಯವರೆಗೆ ಅನಗತ್ಯ ಗಲಭೆ ಸೃಷ್ಟಿಸದೆ ಬೆಳಗಾವಿಯಲ್ಲಿ ಶಾಂತಿ ಕಾಪಾಡಿ ಎಂದು ಸಲಹೆ ನೀಡಿದರು.
ಇದಕ್ಕೆ ಒಪ್ಪಿದ ಎರಡೂ ಬಣಗಳು ಶಾಂತಿಯಿಂದ ಇರುವುದಾಗಿ ತಿಳಿಸಿದರು. ಕನ್ನಡ – ಮರಾಠಿ ಭಾಷಿಕರೆಲ್ಲ ಬೆಳಗಾವಿಯಲ್ಲಿ ಸೌಹಾರ್ಧತೆಯಿಂದ ಇದ್ದೇವೆ. ಮಹಾರಾಷ್ಟ್ರ ನಾಯಕರಿಂದಾಗಿ ವಿವಾದ ಉಂಟಾಗುತ್ತಿದೆ ಎಂದು ಕರವೇ ಮುಖಂಡರು ಹೇಳಿದರೆ, ನಮ್ಮದೇನಿದ್ದರೂ ಸರಕಾರದ ನೀತಿ ವಿರುದ್ಧ ತಗಾದೆ. ಕನ್ನಡ ಭಾಷಿಕರ ವಿರುದ್ಧವಲ್ಲ ಎಂದು ಎಂಇಎಸ್ ನಾಯಕರು ಹೇಳಿದರು.
ಏನೇ ಆದರೂ ಸ್ವಲ್ಪಮಟ್ಟೆಗೆ ಎರಡೂ ಬಣಗಳಲ್ಲಿ ಸೌಹಾರ್ದತೆ ಮೂಡಿದ್ದು ಸುಳ್ಳಲ್ಲ.
ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ಎಸ್ಪಿ ಸಂಜೀವ ಪಾಟೀಲ, ಕರವೇಯ ಗಣೇಶ ರೋಖಡೆ, ದೀಪಕ್ ಗುಡಗನಟ್ಟಿ, ಎಂಇಎಸ್ ನ ಮನೋಹರ ಕಿಣೇಕರ್, ವಿಕಾಸ ಕಲಘಟಗಿ ಮೊದಲಾದವರು ಇದ್ದರು.
ಸ್ಫೋಟಕ ಸುದ್ದಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ ಪ್ರಧಾನಿ ಮಧ್ಯಸ್ಥಿಕೆ! ಮಹಾರಾಷ್ಟ್ರದ ಉದ್ಧಟತನ ನೋಡಿ
https://pragati.taskdun.com/prime-minister-intervened-in-the-karnataka-maharashtra-border-dispute/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ