*ಆಸ್ತಿ ಕಲಹಕ್ಕೆ KSRTC ಬಸ್ ಚಾಲಕನ ಬರ್ಬರ ಹತ್ಯೆ: 11 ಜನರ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಆಸ್ತಿ ಕಲಹಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ರಾಜನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಎರಡು ಎಕರೆ ಭೂಮಿ ವಿವಾದದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿ ಬಂದಿದ್ದ ವೀರಪ್ಪನನ್ನು ಕುಟುಂಬಸ್ಥರೇ ಕೊಲೆ ಮಾಡಿ, ಪೆಟ್ರೋಲ್ ಸುರುದು ಸುಟ್ಟು ಹಾಕಿದ್ದಾರೆ.
ಮೃತ ವೀರಪ್ಪ (58)ಕೆಎಸ್‌ಆರ್‌ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ವೀರಪ್ಪನ ಚಿಕ್ಕಪ್ಪ ಬಾಗಲಯ್ಯ ತನ್ನ 2 ಎಕರೆ ಆಸ್ತಿಯನ್ನು ಅವರಿಗೆ ಕೊಡುವುದಾಗಿ ದಾನಪತ್ರ ನೀಡಿದ್ದರು. ಚಿಕ್ಕಪ್ಪನ ನಿಧನದ ಬಳಿಕ ಆ ಆಸ್ತಿ ವೀರಪ್ಪನ ಹೆಸರಿಗೆ ರಿಜಿಸ್ಟರ್ ಆಗಿತ್ತು. ಆದರೆ ಆತನ ಮಕ್ಕಳಾದ ಮಲ್ಲಮ್ಮ ಹಾಗೂ ಮಹದೇವಮ್ಮ ಮತ್ತು ಅವರ ಕುಟುಂಬಸ್ಥರು ಆಸ್ತಿ ಹಂಚಿಕೆ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.ಈ ಹಿನ್ನೆಲೆ ಮಂಗಳವಾರ ಆಲೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ವೀರಪ್ಪ ಹಾಜರಾಗಿದ್ದರು.
ವಿಚಾರಣೆ ಮುಗಿಸಿ ಜಮೀನಿನ ಬಳಿ ತೆರಳಿದ್ದ ವೀರಪ್ಪರನ್ನು ಹಿಂಬಾಲಿಸಿದ ಮಲ್ಲಮ್ಮನ ಮಕ್ಕಳಾದ ಹರೀಶ ಹಾಗು ಪ್ರಕಾಶ ಮತ್ತು ಮಹದೇವಮ್ಮನ ಮಗನಾದ ಮಹದೇವ, ಹಲ್ಲೆ ನಡೆಸಿ ಕೊಲೆಗೈದು, ಬಳಿಕ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ವೀರಪ್ಪನ ಪುತ್ರ ವಿವೇಕ್ ನೀಡಿದ ದೂರಿನ ಮೇರೆಗೆ ಮಲ್ಲಮ್ಮ, ಮಹದೇವಮ್ಮ, ಹರೀಶ್, ಲೋಕೇಶ್, ಮಹದೇವ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.


