
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ನೌಕರರು, ಚಾಲಕರು, ನಿರ್ವಾಹಕರು ಮುಷ್ಕರ ನಡೆಸಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ ಎಸ್ ಆರ್ ಟಿಸಿ)ಯ ನಾಲ್ಕು ನಿಗಮಗಳ ನೌಕರರು ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೀಗಾಗಿ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಬೆಳಗ್ಗೆ 9 ಘಂಟೆಯಿಂದ ಆರಂಭವಾಗಿರುವ ಉಪವಾಸಸತ್ಯಾಗ್ರಹ ಸಂಜೆ 5 ಘಂಟೆಯವರೆಗೆ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ನಡೆಯಲಿದೆ. ಈ ಸತ್ಯಾಗ್ರಹದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನರು ಭಾಗಿಯಾಗುವ ಸಾಧ್ಯತೆ ಇದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೌಕರರು ಹಾಗೂ ಅವರ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿದ್ದಾರೆ. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಸತ್ಯಾಗ್ರಹದಲ್ಲಿ ನೌಕರರ ಆಗ್ರಹವಾಗಿದೆ.
ಈ ಹಿಂದೆಯೂ ಸಾರಿಗೆ ನೌಕರರು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಎದುರು ಇದೇ ಬೇಡಿಕೆ ಇಟ್ಟಿದ್ದರು. ಆದರೆ, ಈ ಬಗ್ಗೆ ಸರ್ಕಾರ ಸರಿಯಾಗಿ ಸ್ಪಂದಿಸದ ಕಾರಣ ಮತ್ತೆ ಇಂದು ಒಂದು ದಿನ ಸಾಂಕೇತಿಕ ಹೋರಾಟ ನಡೆಸಲಾಗುತ್ತಿದೆ.
ನೌಕರರು ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಬಸ್ ಸಂಚಾರ ವ್ಯತ್ಯಯ ಆಗುವ ಸಾಧ್ಯತೆಯಿದೆ. ಆದರೆ ಸಾರಿಗೆ ಸಂಚಾರಕ್ಕೆ ಯಾವುದೆ ತೊಂದರೆ ಆಗದು ಕಾರಣ ಶಿಫ್ಟ್ ರೀತಿಯಲ್ಲಿ ಮುಷ್ಕರ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ