*CRPF ಶಿಬಿರದ ಮೇಲೆ ದಾಳಿ ಮಾಡಿದ ಉಗ್ರರಿಗೆ ಬಿಗ್ ಶಾಕ್*: *ಲಷ್ಕರ್ ಕಮಾಂಡರ್ ಲತೀಫ್ ಭಟ್ ಸೇರಿ ಇಬ್ಬರು ಉಗ್ರರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಕಳೆದ ವಾರ ಸಿಆರ್ಪಿಎಫ್ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿ ಮೂವರು ಯೋಧರನ್ನು ಗಾಯಗೊಳಿಸಿದ್ದ ಉಗ್ರರಿಗೆ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್ ಲತೀಫ್ ಭಟ್ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ. ಈ ಕಾರ್ಯಾಚರಣೆಯೊಂದಿಗೆ ಕಳೆದ ವಾರದ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರ ಜಾಲಕ್ಕೆ ಭದ್ರತಾ ಪಡೆಗಳು ಹೊಡೆತ ನೀಡಿವೆ.
ನವೆಂಬರ್ 11ರಂದು ಕುಲ್ಗಾಮ್ನ ಮೀರ್ ಬಜಾರ್ ಸಮೀಪದ ಸಿಆರ್ಪಿಎಫ್ ಶಿಬಿರದ ಮೇಲೆ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿತ್ತು. ದಾಳಿ ನಡೆಸಿದ ಬಳಿಕ ಉಗ್ರರು ಸಮೀಪದ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿದ್ದರು.
ದಾಳಿಯ ಬಳಿಕ ಭದ್ರತಾ ಪಡೆಗಳು ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಸೋಮವಾರ ಕುಲ್ಗಾಮ್ನ ಅನುಮಾನಾಸ್ಪದ ಪ್ರದೇಶವೊಂದರಲ್ಲಿ ಉಗ್ರರು ಅಡಗಿರುವ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ಪಡೆ ಜಂಟಿಯಾಗಿ ಪ್ರದೇಶವನ್ನು ಸುತ್ತುವರೆದವು.
ಈ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಅವರಲ್ಲಿ ಲಷ್ಕರ್ ಕಮಾಂಡರ್ ಲತೀಫ್ ಭಟ್ ಕೂಡ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
15 ಲಕ್ಷ ರೂ. ಬಹುಮಾನ ಘೋಷಿಸಿದ್ದ ಕಮಾಂಡರ್
ಕುಲ್ಗಾಮ್ ಜಿಲ್ಲೆಯ ನಿವಾಸಿಯಾಗಿದ್ದ ಲತೀಫ್ ಭಟ್ ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ ಸ್ಥಳೀಯ ಉಗ್ರನಾಗಿದ್ದ. ಈತನ ವಿರುದ್ಧ ಹಲವು ಉಗ್ರ ದಾಳಿಗಳಲ್ಲಿ ಭಾಗಿಯಾಗಿರುವ ಆರೋಪಗಳಿದ್ದವು.
ಜುಲೈ 22ರಂದು ಅನಂತ್ನಾಗ್ನ ಲಾಲ್ ಚೌಕ್ ಪ್ರದೇಶದಲ್ಲಿ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆಶಿಕ್ ಹುಸೇನ್ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿತ್ತು. ಜುಲೈ 31ರಂದು ಕುಲ್ಗಾಮ್ನಲ್ಲಿ ಛತ್ತೀಸ್ಗಢ ಮೂಲದ ವಲಸೆ ಕಾರ್ಮಿಕರಾದ ದೀಪಕ್ ಮತ್ತು ಭೂಪೇಂದ್ರ ಹತ್ಯೆ ಪ್ರಕರಣದಲ್ಲೂ ಈತನ ಪಾತ್ರವಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದರು.
ಪಾಕಿಸ್ತಾನಿ ಉಗ್ರರ ಸಂಪರ್ಕದಲ್ಲಿದ್ದ ಲತೀಫ್ ಭಟ್ ದಕ್ಷಿಣ ಕಾಶ್ಮೀರದ ವಿವಿಧ ಅಡಗುತಾಣಗಳಲ್ಲಿ ನೆಲೆ ಬದಲಾಯಿಸುತ್ತಿದ್ದ ಎನ್ನಲಾಗಿದೆ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಭದ್ರತಾ ಪಡೆಗಳು 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದವು.
ನವೆಂಬರ್ 11ರಂದು ಮಧ್ಯಾಹ್ನ ಸುಮಾರು 2.15ಕ್ಕೆ ಕುಲ್ಗಾಮ್ನ ಅಖ್ರಾನ್ ಪ್ರದೇಶದಲ್ಲಿ ಸಿಆರ್ಪಿಎಫ್ನ 46ನೇ ಬೆಟಾಲಿಯನ್ ಸಿಬ್ಬಂದಿ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಹೆಡ್ ಕಾನ್ಸ್ಟೆಬಲ್ ಸೋಮವೀರ್ ಸಿಂಗ್, ಕಾನ್ಸ್ಟೆಬಲ್ ರಾಕೇಶ್ ದಾಸ್ ಮತ್ತು ಸಂತೋಷ್ ಚಂದ್ರು ಗಾಯಗೊಂಡಿದ್ದರು.
ದಾಳಿಯ ನಂತರ ಕುಲ್ಗಾಮ್ ಸೇರಿದಂತೆ ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಉಗ್ರರಿಗೆ ಆಶ್ರಯ, ಮಾಹಿತಿ ಹಾಗೂ ಪರಾರಿಯಾಗಲು ನೆರವು ನೀಡಿದ ಶಂಕೆಯ ಮೇರೆಗೆ 500ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿತ್ತು. ಅವರಲ್ಲಿ ಕನಿಷ್ಠ 20 ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು.
ಈ ಬೆಳವಣಿಗೆಗಳ ಬೆನ್ನಲ್ಲೇ ಕುಲ್ಗಾಮ್ನಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ ತೀವ್ರಗೊಂಡಿದೆ.



