*ಶಬರಿಮಲೆ ಯಾತ್ರೆಗೆ ಕ್ಷಣಗಣನೆ*: *ಅಯ್ಯಪ್ಪನ ದರ್ಶನಕ್ಕೆ ಈ ಬಾರಿ ದಿನಕ್ಕೆ 80 ಸಾವಿರ ಭಕ್ತರಿಗಷ್ಟೇ ಅವಕಾಶ*

ಪ್ರಗತಿವಾಹಿನಿ ಸುದ್ದಿ: ಅಯ್ಯಪ್ಪ ಭಕ್ತರು ಕಾತರದಿಂದ ಕಾಯುತ್ತಿದ್ದ ಶಬರಿಮಲೆ ವಾರ್ಷಿಕ ಮಂಡಲ ಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ ದೇವಸ್ಥಾನದ ಬಾಗಿಲು ತೆರೆಯುವುದರೊಂದಿಗೆ ಯಾತ್ರಾ ಋತುವಿಗೆ ಚಾಲನೆ ಸಿಗಲಿದೆ. ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಶಬರಿಮಲೆಯತ್ತ ಆಗಮಿಸಲಿದ್ದಾರೆ. ಈ ಬಾರಿ ದರ್ಶನಕ್ಕೆ ದಿನಕ್ಕೆ 80 ಸಾವಿರ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕೇರಳದ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಂಜೆ 5 ಗಂಟೆಗೆ ಬಾಗಿಲು ತೆರೆಯಲಾಗುತ್ತದೆ. ನಿರ್ಗಮಿತ ಮುಖ್ಯ ಅರ್ಚಕ ಇ.ಡಿ. ಪ್ರಸಾದ್ ನಂಬೂದರಿ ಅವರು ತಂತ್ರಿ ಕಂಠರು ಬ್ರಹ್ಮದತ್ತನ್ ಅವರ ಉಪಸ್ಥಿತಿಯಲ್ಲಿ ಗರ್ಭಗುಡಿಯ ದೀಪ ಬೆಳಗಿಸಲಿದ್ದಾರೆ. ಬಳಿಕ ಪವಿತ್ರ ಹದಿನೆಂಟು ಮೆಟ್ಟಿಲುಗಳ ಬಳಿ ಅಗ್ನಿ ಬೆಳಗಿಸಿ, ನೂತನ ಮುಖ್ಯ ಅರ್ಚಕರನ್ನು ಸನ್ನಿಧಾನಕ್ಕೆ ಬರಮಾಡಿಕೊಳ್ಳಲಿದ್ದಾರೆ.
ಸಂಜೆ ಸುಮಾರು 6.30ಕ್ಕೆ ತಂತ್ರಿಗಳು ಶಬರಿಮಲೆಯ ನೂತನ ಮೇಲ್ಶಾಂತಿ ಅರೀಕ್ಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂತಿರಿ ಅವರ ಪ್ರತಿಷ್ಠಾಪನಾ ವಿಧಿ ನೆರವೇರಿಸಲಿದ್ದಾರೆ. ಮಾಳಿಕಪ್ಪುರಂ ದೇವಸ್ಥಾನದಲ್ಲಿಯೂ ಇದೇ ರೀತಿಯ ಸಮಾರಂಭ ನಡೆಯಲಿದ್ದು, ಎ. ದಾಮೋದರನ್ ನಂಬೂದಿರಿ ನೂತನ ಮುಖ್ಯ ಅರ್ಚಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂದು ಬೇರೆ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನಿಗದಿಪಡಿಸಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 3 ಗಂಟೆಗೆ ನೂತನ ಮುಖ್ಯ ಅರ್ಚಕರು ದೇವಸ್ಥಾನದ ಬಾಗಿಲುಗಳನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಿದ್ದಾರೆ.
ಡಿಸೆಂಬರ್ 27ರಂದು ಮಂಡಲ ಪೂಜೆ ನಡೆಯಲಿದ್ದು, ಪೂಜಾ ಕೈಂಕರ್ಯಗಳ ಬಳಿಕ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನಂತರ ಮಕರವಿಳಕ್ಕು ಯಾತ್ರಾ ಋತು ಆರಂಭವಾಗಲಿದೆ. ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ದೇವಸ್ಥಾನ ಮತ್ತೆ ತೆರೆಯಲಿದೆ.
ಜನವರಿ 14ರಂದು ಮಕರವಿಳಕ್ಕು ಉತ್ಸವ ನಡೆಯಲಿದ್ದು, ಜನವರಿ 19ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಜನವರಿ 20ರಂದು ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ.
ಭಕ್ತರಿಗೆ ಪ್ರಮುಖ ಸೂಚನೆ
ದಿನವೊಂದಕ್ಕೆ ಗರಿಷ್ಠ 80 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆನ್ಲೈನ್ ಬುಕ್ಕಿಂಗ್ ಕಡ್ಡಾಯವಾಗಿದ್ದು, ಭಕ್ತರು ಮುಂಚಿತವಾಗಿಯೇ ನೋಂದಣಿ ಮಾಡಿಕೊಳ್ಳಬೇಕು.




