CrimeKannada NewsKarnataka NewsLatest

*30 ಲಕ್ಷ ಸುಪಾರಿ ನೀಡಿ ಉದ್ಯಮಿ ಚರಣ್ ಹತ್ಯೆ*: *ಪಾಲುದಾರನೇ ಮಾಸ್ಟರ್‌ಮೈಂಡ್, ಐವರ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಹಾಡಹಗಲೇ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪರಿಚಯಸ್ಥರೇ ಸೇರಿಕೊಂಡು ಹತ್ಯೆಗೆ ಸಂಚು ರೂಪಿಸಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿಯ ಕೊಲೆಗೆ ಬರೋಬ್ಬರಿ 30 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ನ್ಯೂ ಟೌನ್‌ನಲ್ಲಿ ನವೆಂಬರ್ 13ರಂದು ಚರಣ್‌ನನ್ನು ಹತ್ಯೆ ಮಾಡಲಾಗಿತ್ತು. 35 ವರ್ಷದ ಮೃತ ಚರಣ್‌ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಈತನೊಂದಿ ವ್ಯವಹಾರ ನಡೆಸುತ್ತಿದ್ದ ಕಿರಣ್ ಎಂಬಾತನೇ ಹತ್ಯೆಗೆ ಸುಪಾರಿ ನೀಡಿದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪೊಲೀಸರ ತನಿಖೆಯ ಪ್ರಕಾರ, ಕಿರಣ್ ಚರಣ್ ಹತ್ಯೆಗಾಗಿ ರುದ್ರೇಶ್ ಎಂಬಾತನಿಗೆ 30 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎನ್ನಲಾಗಿದೆ. ರುದ್ರೇಶ್ ಈ ಡೀಲ್ ಬಗ್ಗೆ ಲೋಕೇಶ್ ಜೊತೆ ಮಾತುಕತೆ ನಡೆಸಿದ್ದ. ಬಳಿಕ ಕಿರಣ್ ಮತ್ತು ಆಕಾಶ್ ಮೂಲಕ ಹತ್ಯೆ ನಡೆಸಲು ಸಂಚು ರೂಪಿಸಲಾಗಿತ್ತು.

ಚರಣ್‌ನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಆರೋಪಿಗಳು, ಆತ ಕಚೇರಿಗೆ ಬರುವ ಸಮಯವನ್ನೇ ದಾಳಿಗೆ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ನವೆಂಬರ್ 13ರಂದು ಬೆಳಗ್ಗೆ ಕಚೇರಿಗೆ ಬಂದ ಚರಣ್ ಮೇಲೆ ಲಾಂಗ್ ಮತ್ತು ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದರು.

ಚರಣ್ ಮತ್ತು ಕಿರಣ್ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಕೆಲವು ವ್ಯವಹಾರಗಳ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಚರಣ್ ತನಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಕಿರಣ್ ಆರೋಪಿಸಿದ್ದ. ಬಳಿಕ ವ್ಯವಹಾರದಿಂದ ಹೊರಬಂದಿದ್ದ ಕಿರಣ್, ಚರಣ್ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ.

ನವೆಂಬರ್ 13ರಂದು ಚರಣ್ ಕಚೇರಿಗೆ ಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಪತ್ನಿಯ ಕಣ್ಣೆದುರೇ ನಡೆದ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚರಣ್ ಮೃತಪಟ್ಟಿದ್ದರು.

ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಸುಪಾರಿ ಹತ್ಯೆಯ ಹಿಂದಿರುವ ಸಂಪೂರ್ಣ ಸಂಚು ಹಾಗೂ ಇತರರ ಪಾತ್ರದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Related Articles

Back to top button