ಪ್ರಗತಿವಾಹಿನಿ ಸುದ್ದಿ : ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿಕೊಂಡಿರುವ ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಈ ಮೇಳಕ್ಕೆ ಸುಮಾರು 45 ಕೋಟಿಗೂ ಅಧಿಕ ಜನ ಭಾಗಿಯಾಗುವ ಸಾಧ್ಯತೆ ಇದೆ.
ಇಂದಿನಿಂದ ಫೆಬ್ರವರಿ 26ರ ವರೆಗೆ ಸುಮಾರು ಒಂದೂವರೆ ತಿಂಗಳ ಕಾಲ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಭಕ್ತರು, ಸಾಧು – ಸಂತರು, ನಾಗಾಸಾಧುಗಳು, ಅಘೋರಿಗಳು ಸೇರಿದಂತೆ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ.
ಈ ಹಿಂದೆ ಮಹಾಕುಂಭ ಮೇಳದಲ್ಲಿ 24 ಕೋಟಿ ಮಂದಿ ಭಾಗವಹಿಸಿದ್ದರು. ಈ ಬಾರಿ ಮಹಾಕುಂಭ ಮೇಳದಲ್ಲಿ 45 ಕೋಟಿ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಅದಕ್ಕೆ ತಕ್ಕಂತೆ ಉತ್ತರ ಪ್ರದೇಶ ಸರ್ಕಾರವು ಯಾವುದೇ ಕುಂದು ಕೊರತೆಯಾಗದಂತೆ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಅಲ್ಲದೇ ಪ್ರಯಾಗರಾಜ್ ನಲ್ಲಿ ಮಹಾಕುಂಭ ನಗರ ಎಂದು ಒಂದು ತಾತ್ಕಾಲಿಕ ಜಿಲ್ಲೆಯನ್ನೇ ನಿರ್ಮಿಸಲಾಗಿದ್ದು, ಪ್ರತಿ ದಿನ ಸುಮಾರು ಒಂದು ಕೋಟಿ ಭಕ್ತರು ತಂಗುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ ಈ ಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗೆ ಬಸ್, ರೈಲು, ವಿಮಾನಗಳ ವ್ಯವಸ್ಥೆ ಕೂಡ ಮಾಡಲಾಗಿದೆ.
ಇನ್ನು ಗಂಗಾ ನದಿಯ ದಡದಲ್ಲಿ ಸುಮಾರು 1.6 ಲಕ್ಷ ಟೆಂಟ್ ಗಳನ್ನು ನಿರ್ಮಿಸಿದ್ದು 1.5 ಲಕ್ಷ ಶೌಚಾಲಯ, ಐವತ್ತು ಸಾವಿರ ಹೆಚ್ಚು ಕುಡಿಯುವ ನೀರಿನ ಪೈಪ್ ಲೈನ್ ವ್ಯವಸ್ಥೆ 67 ಸಾವಿರ ಎಲ್‌ಇಡಿ ದೀಪ, ಹಾಗೂ 2 ಸಾವಿರ ಸೌರ ದೀಪವನ್ನು ನದಿಯ ತಡದ ಬಳಿ ನಿರ್ಮಿಸಲಾಗಿದೆ.
ಮೇಳ ಆರಂಭಕ್ಕೂ ಮೊದಲೇ ತ್ರಿವೇಣಿ ಸಂಗಮದಲ್ಲಿ 25 ಲಕ್ಷ ಮಂದಿ ಭಕ್ತರು ಶಾಹಿ ಸ್ನಾನ ಮಾಡಿದ್ದು, ಪುರುಷರು, ಮಹಿಳೆಯರು ಮಕ್ಕಳೆನ್ನದೇ ಭಾರಿ ಸಂಖ್ಯೆಯಲ್ಲಿ ಭಕ್ತರು ಶಾಹೀ ಸ್ನಾನ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ತೀರ್ಥ ಸ್ನಾನ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಇನ್ನು ಮಹಾ ಕುಂಭವು ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ. ಕುಂಭದ ಪ್ರಮುಖ ಸ್ನಾನದ ಆಚರಣೆಗಳು (ಶಾಹಿ ಸ್ನಾನ) ಜನವರಿ 14 (ಮಕರ ಸಂಕ್ರಾಂತಿ), ಜನವರಿ 29 (ಮೌನಿ ಅಮಾವಾಸ್ಯೆ, ಮತ್ತು ಫೆಬ್ರವರಿ 3 (ಬಸಂತ್ ಪಂಚಮಿ) ರಂದು ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ