ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆ ಅತ್ಯುತ್ತಮ ಯೋಜನೆಯಾಗಿದ್ದು, ಸಮಾಜದ ಕಟ್ಟ ಕಡೆಯ ರೋಗಿಗೂ ಇದರ ಫಲ ತಲುಪುವಂತಾಗಬೇಕು ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಆಯುಷ್ ಇಲಾಖೆ, ಬಿಮ್ಸ್ಆಸ್ಪತ್ರೆ ಬೆಳಗಾವಿ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಮಾ.೩ ರಂದು ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ರೂ. ೫ ಲಕ್ಷ ದವರೆಗೆ ಚಿಕಿತ್ಸೆ ವೆಚ್ಚ ಭರಿಸಲಾಗುತ್ತದೆ. ವೈದ್ಯರು ಹೆಚ್ಚಿನ ಗಮನಹರಿಸಿ ಈ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು. ರೋಗಿಗಳು ವೈದ್ಯರನ್ನುದೇವರೆಂದೇ ನಂಬಿದ್ದು ಅವರ ನಂಬಿಕೆಗಳಿಗೆ ಚ್ಯುತಿಬಾರದಂತೆ ವೈದ್ಯರು ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ವಿಶೇಷ ಆಮಂತ್ರಿತರಾಗಿ ಮಾತನಾಡಿದ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅತೀ ಮೆಚ್ಚುಗೆಗೆ ಪಾತ್ರವಾದ ಯೋಜನೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಎಸ್.ಟಿ. ಕಳಸದ ಮಾತನಾಡಿದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಹುಸೇನಸಾಬ ಖಾಜಿ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ಚಾಂದಿನಿ ಜಿ. ದೇವಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಐ.ಪಿ. ಗಡಾದ ಹಾಗೂ ರೋಗವಾಹಕ ಆಶ್ರಿತ ರೋಗಗಳನಿಯಂತ್ರಣಾಧಿಕಾರಿ ಡಾ.ಎಂ.ಎಸ್.ಪಲ್ಲೇದ, ಖಾನಾಪುರ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸಂಜೀವ ನಾಂದ್ರೆ, ಡಾ. ಸುರೇಶ ದೊಡವಾಡ, ಡಾ. ಶ್ರೀಕಾಂತಸುಣಧೋಳಿ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಪ್ಪಾಸಾಹೇಬನರಟ್ಟಿ ಸ್ವಾಗತಿಸಿದರು. ತೇಜಸ್ವಿನಿ ಎಸ್.ಕೆ ನಾಡಗೀತೆ ಹಾಡಿದರು. ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸಂಜಯ ಡುಮ್ಮಗೋಳ ವಂದಿಸಿದರು. ಸಿ.ಜಿ.ಅಗ್ನಿಹೊತ್ರಿ ನಿರೂಪಿಸಿದರು.
ಮೇಳದಲ್ಲಿ ಒಟ್ಟು 2011 ರೋಗಿಗಳನ್ನು ಪರೀಕ್ಷೆ ಮಾಡಲಾಯಿತು. ಇದರಲ್ಲಿ128 ಮೋತಿ ಬಿಂದು, 118 ದಂತ ಹಾಗೂ 26 ಹೃದಯ, ಮೂತ್ರಪಿಂಡ, ನರರೋಗ ಕಾಯಿಲೆ ಇರುವವರನ್ನು ಗುರುತಿಸಿ ಚಿಕಿತ್ಸೆ ನೀಡಲಾಯಿತು. ಮೇಳದಲ್ಲಿ 7 ಸ್ವಯಂ ಪ್ರೇರಿತ ದಾನಿಗಳು ರಕ್ತದಾನ ಮಾಡಿದರು.