*ಕಾಂಗ್ರೆಸ್ ನಾಯಕರ ಬಗ್ಗೆಯೇ ನಾಲಿಗೆ ಹರಿಬಿಟ್ಟ ಎಲ್.ಆರ್.ಶಿವರಾಮೇಗೌಡಗೆ ಸಂಕಷ್ಟ: ಆಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಂಸದ, ಕಾಂಗ್ರೆಸ್ ನಾಯಕ, ಕೆಪಿಸಿಸಿ ವಕ್ತಾರ ಎಲ್.ಆರ್ ಶಿವರಾಮೇಗೌಡಗೆ ಸಂಕಷ್ಟ ಎದುರಾಗಿದೆ. ಅವರನ್ನು ಕಾಂಗ್ರೆಸ್ ನಿಂದ ವಜಾಗೊಳಿಸುವಂತೆ ಒತ್ತಾಯಗಳೂ ಕೇಳಿಬಂದಿವೆ.
ಶಿವರಾಮೇಗೌಡ ಕಾರ್ಯಕರ್ತನೊಬ್ಬನೊಂದಿಗೆ ಪೋನ್ ಕರೆ ಮಾಡಿದ್ದ ವೇಳೆ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಭಾರಿ ವೈರಲ್ ಆಗಿದೆ. ನಟ ದಿ. ಅಂಬರೀಶ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಂಸದ ಮಾದೇಗೌಡ, ಚಲುವರಾಯಸ್ವಾಮಿ ಸೇರಿದಂತೆ ಹಲವು ನಾಯಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಕಾಂಗ್ರೆಸ್ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ಪತ್ರ ಬರೆದು, ಶಿವರಾಮೇಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪಕ್ಷದ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ಕಾಂಗ್ರೆಸ್ ಪಕ್ಷದ ಗೌರವಕ್ಕೆ ಧಕ್ಕೆಯಾಗಿದ್ದು, ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಆಡಿಯೋವನ್ನು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ. ಇದು ತನ್ನ ವಿರುದ್ಧ ಮಾಡಿರುವ ಷಡ್ಯಂತ್ರ ಎಂದು ಎಲ್.ಆರ್. ಶಿವರಾಮೇಗೌಡ ತಿಳಿಸಿದಾರೆ. ಆದರೆ ಮಂಡ್ಯ ಕಾಂಗ್ರೆಸ್ ನಾಯಕರು ಇದನ್ನು ಒಪ್ಪುತ್ತಿಲ್ಲ. ಶಿವರಾಮೇಗೌಡ ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗಲೂ ಇದೇ ರೀತಿಯ ಆಡಿಯೋ ವಿವಾದದಲ್ಲಿ ಸಿಲುಕಿದ್ದರು.ಬಳಿಕ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.



