Kannada NewsLatestNational

*ಮಹಿಳಾ ಕಾನ್ಸ್ ಟೇಬಲ್ ಹತ್ಯೆ ಕೇಸ್; ಹೆಡ್ ಕಾನ್ಸ್ ಟೇಬಲ್ ಸೇರಿ ಮೂವರು ಅರೆಸ್ಟ್*

ನವದೆಹಲಿ: ಮಹಿಳಾ ಕಾನ್ಸ್ ಟೇಬಲ್ ಹತ್ಯೆಗೈದು, ಚರಂಡಿಯಲ್ಲಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹೆಡ್ ಕಾನ್ಸ್ ಟೇಬಲ್ ಸೇರಿದಂತೆ ಮೂವರು ಆರೋಪಿಗಳನ್ನು ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.

2021ರಲ್ಲಿ ನಡೆದಿದ್ದ ಪ್ರಕರಣವನ್ನು ಇದೀಗ ಭೇದಿಸಿರುವ ಪೊಲೀಸರು ಹೆಡ್ ಕಾನ್ಸ್ ಟೇಬಲ್ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ. 2021ರ ಸೆ.8ರಂದು ದೆಹಲಿಯಲ್ಲಿ ಮಹಿಳಾ ಕಾನ್ಸ್ ಟೆಬಲ್ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ಹೆಡ್ ಕಾನ್ಸ್ ಟೇಬಲ್ ಸುರೇಂದ್ರ, ಆತನ ಸೋದರ ಮಾವ ರವಿನ್ ಹಾಗೂ ಸ್ನೇಹಿತ ರಾಜ್ ಪಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಸುರೇಂದ್ರ 2012ರಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ನೇಮಕಗೊಂಡಿದ್ದ. ಪತ್ನಿ ಹಾಗೂ 12 ವರ್ಷದ ಮಗನೊಂದಿಗೆ ಅಲಿಪುರದಲ್ಲಿ ವಾಸವಾಗಿದ್ದರು. ಪಿಸಿಆರ್ ನಲ್ಲಿ ಸುರೇಂದ್ರ ಕಾರ್ಯನಿರ್ವಹಿಸುತ್ತಿದ್ದರು. ಪಿಸಿ ಆರ್ ನಲ್ಲಿ ಪೋಸ್ಟಿಂಗ್ ಆಗಿದ್ದ ಮಹಿಳಾ ಕಾನ್ಸ್ ಟೇಬಲ್ ಓರ್ವರನ್ನು 2019ರಲ್ಲಿ ಸುರೇಂದ್ರ ಭೇಟಿಯಾಗಿದ್ದರು. ಕೆಲವೇ ತಿಂಗಳಲ್ಲಿ ಮಹಿಳಾ ಕಾನ್ಸ್ ಟೇಬಲ್ ಯುಪಿ ಪೊಲೀಸ್ ನಲ್ಲಿ ಎಸ್ ಐ ಹುದ್ದೆಗೆ ಆಯ್ಕೆಯಾದರು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ಯುಪಿಗೆ ತೆರಳಿದ್ದರು.

ಬಳಿಕ ಮುಖರ್ಜಿ ನಗರದ ಪಿಜಿಯಲ್ಲಿದ್ದುಕೊಂಡು ಮಹಿಳಾ ಕಾನ್ಸ್ ಟೇಬಲ್ ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಹೆಡ್ ಕಾನ್ಸ್ ಟೇಬಲ್ ಸುರೇಂದ್ರ ತಾನು ಅವಿವಾಹಿತ ಎಂದು ಪರುಚಯಿಸಿಕೊಂಡಿದ್ದ. ಮಹಿಳಾ ಕಾನ್ಸ್ ಟೇಬಲ್ ಸ್ನೇಹ ಬೆಳೆಸಿ ಆಕೆಯನ್ನು ಭೇಟಿಯಾಗುತ್ತಿದ್ದ. ಮಹಿಳಾ ಕಾನ್ಸ್ ಟೇಬಲ್ ಯುಪಿಎಸ್ ಸಿ ಯಲ್ಲಿ ದೊಡ್ಡ ಹುದ್ದೆಗೆ ಆಯ್ಕೆಯಾಗುತ್ತಾರೆ ಎಂದು ಆಕೆಯನ್ನು ವಿವಾಹವಾಗಲು ನಿರ್ಧರಿಸಿದ್ದ. ಈ ವೇಳೆ ಮಹಿಳಾ ಕಾನ್ಸ್ ಟೇಬಲ್ ಗೆ ಸುರೇಂದ್ರ ಅದಾಗಲೇ ಒಂದು ವಿವಾಹವಾಗಿರುವ ಸಂಗತಿ ಗೊತ್ತಾಗಿದೆ. ಇದರಿಂದ ಆತನಿಂದ ದೂರವಿರಲು ತೀರ್ಮಾನಿಸಿದ್ದರು. ಆದರೆ ಸುರೇಂದ್ರ ತನ್ನ ಪ್ರೇಯಸಿಯ ಮನಗೆಲ್ಲಲು ನಾನಾ ಕಸರತ್ತು ನಡೆಸಿದ್ದ. ಮಹಿಳಾ ಕಾನ್ಸ್ ಟೇಬಲ್ ಆತನ ಕುಟುಂಬದ ಜೊತೆ ಮಾತನಾಡಲು ಬಯಸಿದ್ದಳು. ಈ ವಿಚಾರ ಆತನಿಗೆ ಇರಿಸುಮುರಿಸು ಉಂಟು ಮಾಡಿತ್ತು. ಆದಾಗ್ಯೂ ತನ್ನ ಪ್ರೇಯಸಿಯನ್ನು ಅಲಿಪುರಕ್ಕೆ ಆಟೋದಲ್ಲಿ ಕರೆದೊಯ್ದಿದ್ದ. ಅರ್ಧ ದಾರಿಯಲ್ಲಿ ಆಟೋ ಇಳಿದು ಆಟೋ ಚಾಲಕನನ್ನು ವಾಪಸ್ ಕಳುಹಿಸಿದ್ದ. ಬಳಿಕ ಕಾಲ್ನಡಿಗೆಯಲ್ಲಿಯೇ ಸುರೇಂದ್ರ ತನ್ನ ಪ್ರೇಯಸಿಯೊಂದಿಗೆ ಅಲಿಪುರದತ್ತ ಹೆಜ್ಜೆಹಾಕಿದ್ದ. ಕೆಲ ದೂರ ಹೋಗುತ್ತಿದ್ದಂತೆ ಆಕೆಯನ್ನು ಯಮುನಾ ನದಿ ತೀರಕ್ಕೆ ಕರೆದೊಯ್ದು ಕತ್ತು ಹಿಸುಕಿ ಪ್ರೇಯಸಿಯನ್ನು ಸಾಯಿಸಿದ್ದ. ಬಳಿಕ ಚರಂಡಿಯಲ್ಲಿ ಶವವನ್ನು ಹೂತು ಹಾಕಿ ವಾಪಸ್ ಆಗಿದ್ದ.

ಇತ್ತ ಮಹಿಳಾ ಕಾನ್ಸ್ ಟೇಬಲ್ ಕುಟುಂಬದವರು ತಮ್ಮ ಮಗಳು ಕಾಣೆಯಾಗಿದ್ದಾಳೆ, ಆಕೆಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳಾ ಕಾನ್ಸ್ ಟೇಬಲ್ ಬಗ್ಗೆ ಶೋಧ ನಡೆಸುತ್ತಿದ್ದರು. ಆದರೆ ಆಕೆ ಸುಳಿವಿರಲಿಲ್ಲ. ಈ ನಡುವೆ ಪ್ರಕರಣದ ದಿಕ್ಕು ತಪ್ಪಿಸಲು ಸುರೇಂದ್ರ, ತನ್ನ ಸೋದರ ಮಾವ ಹಾಗೂ ಸ್ನೇಹಿತನ ಜೊತೆ ಸೇರಿ ಹರುಯಾಣ, ಡೆಹ್ರಾಡೂನ್ , ರಿಷಿಕೇಶ್, ಮಸ್ಸೂರಿ ಸೇರಿದಂತೆ ವಿವಿಧೆಡೆ ತೆರಳಿ ಅಲ್ಲಿಂದ ಮಹಿಳಾ ಕಾನ್ಸ್ ಟೇಬಲ್ ಕುಟುಂಬದವರಿ ಫೋನ್ ಮಾಡಿ, ನಾವು ಮದುವೆಯಾಗಿದ್ದೇವೆ. ಆದರೆ ನಮ್ಮ ಕುಟುಂಬದ ಬೆದರಿಕೆ ಇದೆ. ಹಾಗಾಗಿ ಕೆಲ ದಿನಗಳ ಬಳಿಕ ನಾವೇ ವಾಪಸ್ ಊರಿಗೆ ಬರುವುದಾಗಿ ಹೇಳಿದ್ದ. ಹೀಗೆ 5 ಬಾರಿ ಸುರೇಂದ್ರ ಫೋನ್ ಮಾಡಿದ್ದ. ಮಹಿಳಾ ಕಾನ್ಸ್ ಟೇಬಲ್ ಕುಟುಂಬದವರು ತಮ್ಮ ಮಗಳು ಬದುಕಿದ್ದಾಳೆ. ಫೋನ್ ಬಂದಿರುವುದಾಗಿ ಪೊಲಿದ್ಸರಿಗೆ ಮಾಹಿತಿ ನೀಡಿದ್ದರು. ಕುಟುಂಬದವರಿಗೆ ಬಂದ ಫೋನ್ ನಂಬರ್ ಸಂಖ್ಯೆಯನ್ನು ಟ್ರೇಸ್ ಮಾಡಿದ್ದ ಪೊಲೀಸರಿಗೆ ಹೆಡ್ ಕಾನ್ಸ್ ಟೇಬಲ್ ಸುರೇಂದ್ರ ಬಗ್ಗೆ ಗೊತ್ತಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button