*ಸುಳ್ಳು ಹೇಳುವ ಮತ್ತು ಕೆಟ್ಟದ್ದನ್ನು ಮಾಡುವ ಸ್ವಭಾವ ನನ್ನದಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಸುಳ್ಳು ಹೇಳುವ ಮತ್ತು ಕೆಟ್ಟದ್ದನ್ನು ಮಾಡುವ ಸ್ವಭಾವ ನನ್ನದಲ್ಲ, ಅಧಿಕಾರ ಸಿಕ್ಕಿದಾಗ ಒಳ್ಳೆಯ ಕೆಲಸ ಮಾಡಬೇಕು ಎನ್ನುವುದು ನನ್ನ ಧ್ಯೇಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಡಸ್ ಕೆ.ಎಚ್ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಗಾಂಧೀಜಿ ಅವರು ಹೇಳಿದಂತೆ ಹಳ್ಳಿ ಸುಧಾರಣೆಯಾದಾಗ ಮಾತ್ರ ದೇಶ ಸುಧಾರಣೆಯಾಗುತ್ತದೆ. 50% ರಷ್ಟು ಮಹಿಳೆಯರಿಗೆ ಸ್ಥಾನ ನೀಡಬೇಕೆನ್ನುವುದು ರಾಜೀವ್ ಗಾಂಧಿ ಕನಸಾಗಿತ್ತು. ಮನಮೋಹನ್ ಸಿಂಗ್ ಅವರು ನರೇಗಾ ತಂದ ನಂತರ ಗ್ರಾಮ ಪಂಚಾಯತಿಗಳಿಗೆ ಹೆಚ್ಚು ಶಕ್ತಿ ಬಂದಿದೆ ಎಂದು ಅವರು ಹೇಳಿದರು.

ಈಗ ಎಲ್ಲದಕ್ಕೂ ಗ್ರಾಮ ಪಂಚಾಯತಿಗಳನ್ನು ಅವಲಂಭಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಬಲ ಬಂದಿದ್ದು, ಜನ ಸಾಮಾನ್ಯರ ಪಾಲಿಗೆ ಗ್ರಾಮ ಪಂಚಾಯಿತಿಗಳು ದೇವಾಲಯಗಳಾಗಬೇಕು ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಮಾದರಿ ಗ್ರಾಮವನ್ನಾಗಿ ಮಾಡುವುದೇ ನನ್ನ ಕನಸು. ಕ್ಷೇತ್ರದಲ್ಲಿ 65 ಸ್ಮಾರ್ಟ್ ಕ್ಲಾಸ್‌ಗಳನ್ನು ತೆರೆಯಲಾಗಿದ್ದು, ಅತೀ ಹೆಚ್ಚು ಅಂಗನವಾಡಿಗಳನ್ನು ಕಟ್ಟಿದ್ದೇನೆ, ಮುಂದೆ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲಾಗುತ್ತಿದ್ದು, ಇದರಿಂದ ಬಡ ಮಕ್ಕಳಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನನಗೆ ಮತ ಹಾಕಿದ ಜನರಿಗೆ ಸಾರ್ಥಕ ಭಾವನೆ ಮೂಡಬೇಕು. ಇಲಾಖೆಯಲ್ಲೂ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಊರನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡೋಣ ಎಂದು ಸಚಿವರು ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯತ್ ನೂತನ ಕಟ್ಟಡ ಈ ಗ್ರಾಮದ ಬಹು ದಿನಗಳ ಬೇಡಿಕೆಯಾಗಿತ್ತು. ಸಚಿವರ ಮಾರ್ಗದರ್ಶನದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಸಚಿವರು ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
25 ವರ್ಷ ಮುಂದೆ ಕ್ಷೇತ್ರ ಹೇಗಿರಬೇಕು ಎಂದು ಯೋಚಿಸಿ ಸಚಿವರು ಕೆಲಸ ಮಾಡುತ್ತಿದ್ದಾರೆ. ಹಿಂದೆಲ್ಲ ಅನುದಾನಕ್ಕಾಗಿ ಗ್ರಾಮಸ್ಥರು ಓಡಾಡುವುದೇ ಕೆಲಸ ಆಗುತ್ತಿತ್ತು. ಈಗ ನೀವು ಹೇಳಿದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಕೆಲಸ ಮಾಡುವವರಿಗೆ ಬೆಂಬಲ ಕೊಡಬೇಕು. ಆಗ ಹೆಚ್ಚಿನ ಕೆಲಸ ಮಾಡಲು ಉತ್ಸಾಹ ಬರುತ್ತದೆ ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಡಿವಾಳೇಶ್ವರ ಮಠದ ಶ್ರೀ ಪ್ರಶಾಂತ ದೇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಪ್ರದೀಪ್ ಸಾವಂತ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಾಗಪ್ಪ ಕುರುಬರ್, ಉಪಾಧ್ಯಕ್ಷರಾದ ಸುನಿಲ್ ದಳವಾಯಿ, ಸದಸ್ಯರಾದ ಗಂಗಪ್ಪ ಮುನವಳ್ಳಿ, ಶಿವಾಜಿ ಖೇಮಜಿ, ಬಂಗಾರೆವ್ವ ಅಲಾಬದಿ, ಮೌಲಾಲಿ ಯಕ್ಕುಂಡಿ, ಅಶ್ವಿನಿ ಖೇಮಜಿ, ಸುನಿತಾ ಕಲಾರಕೊಪ್ಪ ಇನಾಯತಲಿ ಅತ್ತಾರ, ಮಹಾದೇವಿ ಶೀಗಿಹಳ್ಳಿ, ಭೀಮಪ್ಪ ಹಣಮಂತ ಪೂಜೇರ, ಸಂತೋಷ ಬಂದವ್ವಗೋಳ, ಮಲ್ಲವ್ವ ಕೋಲಕಾರ, ಮಹಾದೇವಿ ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.