*ವೀರಶೈವ ಲಿಂಗಾಯತ ಧರ್ಮ ಗುರುಗಳ ತಂಗುದಾಣಕ್ಕೆ 5 ಕೋಟಿ ರೂ. ಕೊಡಿ: ಲಕ್ಷ್ಮೀ ಹೆಬ್ಬಾಳಕರ್ ಮನವಿ*

ಗುರುಪರಂಪರೆ, ಸಂಸ್ಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ದಾಸೋಹ, ಕಾಯಕ, ಸತ್ಯನಿಷ್ಠೆ ಹಾಗೂ ಪ್ರಾಮಾಣಿಕತೆಯಂತಹ ಮೌಲ್ಯಗಳನ್ನು ಸಮಾಜಕ್ಕೆ ನೀಡಿರುವ ವೀರಶೈವ-ಲಿಂಗಾಯತ ಧರ್ಮದ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜ ಎಂದಿಗೂ ಯಾರಿಗೂ ಕೆಟ್ಟದ್ದನ್ನು ಬಯಸಿದ ಅಥವಾ ಅನ್ಯಾಯ ಮಾಡಿದ ಸಮಾಜವಲ್ಲ. ವ್ಯಕ್ತಿಗೆ ವ್ಯಕ್ತಿಯೊಂದಿಗೆ, ವ್ಯಕ್ತಿಗೆ ಸಮಾಜದೊಂದಿಗೆ ಉತ್ತಮ ಸಂಬಂಧ ಇರಬೇಕು ಎಂಬುದನ್ನು ನಮ್ಮ ಪರಂಪರೆ ಕಲಿಸಿದೆ ಎಂದರು.
ವಿಶೇಷವಾಗಿ ಯುವಕರು ನಮ್ಮ ಹಿರಿಯರು ಹಾಗೂ ಗುರುಗಳು ಹಾಕಿಕೊಟ್ಟಿರುವ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಯುವಜನರ ಮೇಲೂ ಇದೆ ಎಂದು ಹೇಳಿದರು.

ದಾಸೋಹ, ಕಾಯಕ, ಸತ್ಯನಿಷ್ಠೆ, ಪ್ರಾಮಾಣಿಕತೆ ನಮ್ಮ ಪರಂಪರೆಯ ಶಕ್ತಿ
ವೀರಶೈವ-ಲಿಂಗಾಯತ ಧರ್ಮವು ಸಮಾಜಕ್ಕೆ ದಾಸೋಹ, ಕಾಯಕ, ಸತ್ಯನಿಷ್ಠೆ ಹಾಗೂ ಪ್ರಾಮಾಣಿಕತೆಯಂತಹ ಶ್ರೇಷ್ಠ ಮೌಲ್ಯಗಳನ್ನು ನೀಡಿದೆ. ಇವು ಕೇವಲ ಹೇಳಿಕೆಗಳಲ್ಲ; ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳು. ಈ ಪರಂಪರೆಯನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಮ್ಮ ಸಮಾಜ ಕೇವಲ ತನ್ನ ಒಳಿತನ್ನು ಬಯಸುವ ಸಮಾಜವಲ್ಲ. ಸಕಲ ಜೀವಿಗಳ ಒಳಿತನ್ನು ಬಯಸುವ ವಿಶಾಲ ಮನೋಭಾವವನ್ನು ಹೊಂದಿರುವ ಸಮಾಜ. ಹಿಂದೆ ಇಡೀ ಜಗತ್ತಿನ ಎಲ್ಲ ಧರ್ಮಗಳು, ಎಲ್ಲ ಸಮಾಜಗಳು ಹಾಗೂ ಸಕಲ ಜೀವರಾಶಿಗಳ ರಕ್ಷಣೆಯಾಗಬೇಕು ಎಂಬ ಸಂದೇಶವನ್ನು ನಮ್ಮ ಪರಂಪರೆ ನೀಡಿದೆ ಎಂದು ಅವರು ಹೇಳಿದರು.
ಗುರುಪರಂಪರೆ ಉಳಿಸುವ ಕಾರ್ಯಕ್ಕೆ ಸರ್ಕಾರದ ಸಹಕಾರ ಅಗತ್ಯ
ಗುರುಪರಂಪರೆಯನ್ನು ಉಳಿಸಬೇಕು, ಮಠಗಳನ್ನು ಬೆಳೆಸಬೇಕು ಎಂಬ ಚಿಂತನೆ ಉಳ್ಳವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು. ನಮ್ಮ ಮಠಾಧೀಶರ ತಂಗುದಾಣ ನಿರ್ಮಾಣಕ್ಕೆ ಒಂದು ಎಕರೆ ಜಾಗ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಸಮಾಜದ ಎಲ್ಲರೂ ಕೈ ಜೋಡಿಸುತ್ತೇವೆ. ಜೊತೆಗೆ ಈ ನಿಟ್ಟಿನಲ್ಲಿ ಸರ್ಕಾರವೂ ಅಗತ್ಯ ಸಹಕಾರ ನೀಡಬೇಕು. 5 ಕೋಟಿ ರೂಪಾಯಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಮಾಜದ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಿ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಪರಿಶ್ರಮ ಎಂದರೆ ಏನೆಂದು ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ಕಲಿಯಬೇಕು. ಒಂದು ನಿಮಿಷವೂ ಸುಮ್ಮನೆ ಕುಳಿತುಕೊಳ್ಳುವವರಲ್ಲ ಅವರು. ಸರ್ವ ಜನಾಂಗದವರಿಗೂ ಅನುಕೂಲವಾಗುವಂತೆ ಸರಕಾರ ನಡೆಸುತ್ತಿದ್ದಾರೆ ಎಂದು ಹೆಬ್ಬಾಳಕರ್ ಪ್ರಶಂಸಿಸಿದರು.
ಯುವಕರು, ಮಹಿಳೆಯರು, ರೈತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೂ ಸೌಲಭ್ಯ ನೀಡುತ್ತಿದ್ದಾರೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪಬೇಕು ಎಂಬ ಆಶಯದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಹಿಳೆಯರಿಗೆ ಸಮಾನ ಅವಕಾಶ ನೀಡಿದ ಪರಂಪರೆ
ವೀರಶೈವ- ಲಿಂಗಾಯತ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಗೌರವ ನೀಡಲಾಗಿದೆ. ಮಹಿಳೆಯರಿಗೆ ಶಿಕ್ಷಣ ಎಷ್ಟು ಅಗತ್ಯವೋ, ಸಮಾಜ ಹಾಗೂ ರಾಜ್ಯದ ನಿರ್ಮಾಣದಲ್ಲಿಯೂ ಅವರಿಗೆ ಅಷ್ಟೇ ಮಹತ್ವ ನೀಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
‘ಕಾಯಕವೇ ಕೈಲಾಸ’ ಬದುಕಿನ ಮಾರ್ಗವಾಗಲಿ
ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾಯಕ, ಪರಿಶ್ರಮ ಮತ್ತು ಜನಸೇವೆ ಕೇವಲ ಭಾಷಣದ ಪದಗಳಾಗಬಾರದು. ಅವು ನಮ್ಮ ನಡವಳಿಕೆಯಲ್ಲಿ ಕಾಣಿಸಬೇಕು.
ನಮ್ಮ ಹಿರಿಯರು ಹಾಗೂ ಗುರುಗಳು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯಬೇಕು. ನಮ್ಮ ಪರಂಪರೆಯನ್ನು ಕೇವಲ ಆಚರಣೆಗಳಲ್ಲಿ ಉಳಿಸದೆ, ನಮ್ಮ ನಡವಳಿಕೆ, ಕಾಯಕ, ಪ್ರಾಮಾಣಿಕತೆ ಮತ್ತು ದಾಸೋಹದ ಮೂಲಕ ಜೀವಂತವಾಗಿಡಬೇಕು ಎಂದು ಅವರು ಕರೆ ನೀಡಿದರು.
“ನಮ್ಮ ಸಂಸ್ಕೃತಿಯನ್ನು ಉಳಿಸೋಣ, ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸೋಣ. ಎಲ್ಲರನ್ನೂ ಗೌರವಿಸಿ, ಸಕಲ ಜೀವಿಗಳ ಒಳಿತನ್ನು ಬಯಸುವ ಸಮಾಜವಾಗಿ ಮುಂದೆ ಸಾಗೋಣ” ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಿಎಂ ಡಿ ಕೆ ಶಿವಕುಮಾರ್ ಅವರು ಸಮ್ಮೇಳನ ಉದ್ಘಾಟಿಸಿದರು.
ಸಮ್ಮೇಳನದಲ್ಲಿ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು,
ಉಜ್ಜಯನಿ ಪೀಠದ ಶ್ರೀಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಹಿಮವತ್ ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕಾಶಿ ಪೀಠದ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಷ.ಬ್ರ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳು, ಡಾ. ಜಯಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿಗಳು, ಸೊಲ್ಲಾಪುರದ ಶ್ರೀ ಡಾ. ಜಯಸಿದ್ದ ಶಿವಾಚಾರ್ಯ ಸ್ವಾಮಿಗಳು, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಸಚಿವರಾದ ಈಶ್ವರ ಖಂಡ್ರೆ, ವಿಜಯಾನಂದ ಕಾಶಪ್ಪನವರ್, ವೀಣಾ ಕಾಶಪ್ಪನವರ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


