ಲಕ್ಷ್ಮೀ ಹೆಬ್ಬಾಳಕರ್: ಸಮಷ್ಟಿ ಭಾವದ ನಾಯಕಿ
1975 ರಲ್ಲಿ ಬೆಳಗಾವಿ ಜಿಲ್ಲೆಯ ಹಟ್ಟಿಹೊಳಿಯಲ್ಲಿ ಜನಿಸಿದ ಲಕ್ಷ್ಮೀ ಹೆಬ್ಬಾಳಕರ್ ಮೈಸೂರು ವಿಶ್ವ ವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದಿದ್ದಾರೆ.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ಸಮರ್ಥ ಸೇವೆ ಸಲ್ಲಿಸಿರುವ ಅವರು 2013 ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ 2014 ರ ಲೋಕಸಭಾ ಚುನಾವಣೆಯಲ್ಲೂ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಯ ಹೊಂದಿದ್ದರು. ಸೋಲುಗಳಿಂದ ಧೃತಿಗೆಡದ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಮುಂದುವರೆಸಿದರು. ಶಾಸಕಿಯಲ್ಲದಿದ್ದರೂ ಓರ್ವ ಶಾಸಕರು ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಕ್ಷೇತ್ರಕ್ಕೆ ತಂದರು.
ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿದರು. ಒಟ್ಟು 1,02,040 ಮತಗಳನ್ನು ಪಡೆದ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು 51,680 ಮತಗಳ ಅಂತರದಿಂದ ಸೋಲಿಸುವ ಮೂಲಕ ಆ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತಗಳ ಅಂತರದ ಜಯ ಸಾಧಿಸಿದ ಕೀರ್ತಿಗೆ ಪಾತ್ರರಾದರು.
ಇದೇ ಅವಧಿಯಲ್ಲಿ ಮೈಸೂರು ಮಿನರಲ್ಸ್ ಚೇರಮನ್ ಆಗಿ ಕೂಡ ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಲಸ ನಿರ್ವಹಿಸಿದ್ದಾರೆ.
2019 ರಲ್ಲಿ 17 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾಯಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದರೂ ಕೂಡ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸುವಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾಗಿದ್ದು ಅವರ ಕಾರ್ಯಕ್ಷಮತೆ ಮತ್ತು ಕ್ಷೇತ್ರದ ಮೇಲಿನ ಕಾಳಜಿಗೆ ಸಾಕ್ಷಿಯಾಗಿದೆ.
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ 1.8 ಲಕ್ಷ ಮತ ಪಡೆದು, ಬಿಜೆಪಿ ಅಭ್ಯರ್ಥಿಯನ್ನು 56 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಸಾಧನೆ, ಛಲ ಮತ್ತು ಪಕ್ಷ ನಿಷ್ಠೆಗೆ ಮತ್ತೊಂದು ಹೆಸರೇ ಲಕ್ಷ್ಮೀ ಹೆಬ್ಬಾಳಕರ್ ಎನ್ನುವ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್: ಸಮಷ್ಟಿ ಭಾವದ ನಾಯಕಿ
ಪಕ್ಷ, ಜಾತಿ, ಗಡಿಗಳ ಎಲ್ಲೆ ಮೀರಿ ರಾಜ್ಯದಲ್ಲಿ ಬೆಳೆಯುತ್ತಿರುವ ಅಪರೂಪದ ನಾಯಕಿ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳಕರ್. ಅವರ ನಡೆ, ನುಡಿ, ಚಾಣಾಕ್ಷತನ, ಅಭಿವೃದ್ಧಿ, ಎಲ್ಲರೊಂದಿಗಿನ ಸೌಹಾರ್ದಯುತ ಸಂಬಂಧಗಳನ್ನು ನೋಡಿದಾಗ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಗಡಿ ಮೀರಿ ಎಲ್ಲರೂ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ನೆಚ್ಚಿಕೊಳ್ಳುತ್ತಾರೆ, ಪ್ರಶಂಸೆ ವ್ಯಕ್ತಪಡಿಸುತ್ತಾರೆ.
ಲಕ್ಷ್ಮಿ ಹೆಬ್ಬಾಳಕರ್ ಏಕಾ ಏಕಿ ಬೆಳೆದು ನಿಂತ ನಾಯಕಿಯಲ್ಲ. ನಾಯಕತ್ವ ಬೆಳೆಸಿಕೊಂಡಿರುವುದರ ಹಿಂದೆ ಸಾಕಷ್ಟು ಶ್ರಮವಿದೆ, ಹಿಡಿದ ಕೆಲಸ ಬಿಡದೆ ಸಾಧಿಸುವ ಛಲ ಅವರಲ್ಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣವಿದೆ. ತಮಗೆ ಅವಮಾನ ಮಾಡಿದವರಿಗೆ ಸಾಧನೆಯ ಮೂಲಕ ಉತ್ತರಿಸುವ ಜಾಣ್ಮೆ ಇದೆ. ಅನಗತ್ಯವಾಗಿ ಯಾರ ತಂಟೆಗೂ ಹೋಗದ, ಎಲ್ಲರನ್ನೂ ಗೌರವದಿಂದ ಕಾಣುವ ಅವರು ತಮ್ಮ ದಾರಿಗೆ ಅಡ್ಡ ಬರುವವರನ್ನು ಸುಮ್ಮನೆ ಬಿಡುವ ಜಾಯಮಾನದವರಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ ಸಂದರ್ಭದಲ್ಲಿ ಹತಾಶರಾಗದೆ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಸಿದವರು, ಪಕ್ಷ ಮತ್ತೆ ಪುಟಿದೇಳುವಂತೆ ಮಾಡಿದವರು ಲಕ್ಷ್ಮಿ ಹೆಬ್ಬಾಳಕರ್. ಬಿಜೆಪಿ ಪ್ರಬಲವಾಗಿರುವ ಜಿಲ್ಲೆಯಲ್ಲಿ ಒನ್ ವುಮೆನ್ ಆರ್ಮಿಯಂತೆ ಕೆಲಸ ಮಾಡಿ ಕಾಂಗ್ರೆಸ್ ಪಕ್ಷ ಧೂಳು ಕೊಡವಿ ಮೇಲೇಳುವಂತೆ ಮಾಡಿದವರು. ಬೆಂಗಳೂರು ಬಿಟ್ಟರೆ ಬೆಳಗಾವಿಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿಯಾದ ಸ್ಥಾನ ಸಿಗುವ ರೀತಿಯಲ್ಲಿ ಬೆಳೆಸಿದರು.
ಮಹಿಳಾ ಕಾಂಗ್ರೆಸ್ ಎಂದರೆ ಮೂಗು ಮುರಿಯುವ ಸನ್ನಿವೇಶದಲ್ಲೂ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ, ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಘಟಕವನ್ನು ಹೇಗೆ ಕಟ್ಟಿ ಬೆಳೆಸಬಹುದು ಎಂದು ತೋರಿಸಿದರು.
ತಾವು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮಾದರಿಯಾಗಿ ಕೆಲಸ ಮಾಡಿ ತೋರಿಸಿದ್ದಾರೆ ಲಕ್ಷ್ಮೀ ಹೆಬ್ಬಾಳಕರ್. ವಿರೋಧಿಗಳ ಬಗ್ಗೆ, ಅನಗತ್ಯ ರಾಜಕೀಯ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವಿಶ್ರಾಂತವಾಗಿ ಕೆಲಸ ಮಾಡಿದ್ದಾರೆ. ಪ್ರವಾಹ, ಕೊರೋನಾದತಂಹ ಪ್ರಕೃತಿ ವಿಕೋಪಗಳ ಅಟ್ಟಹಾಸದ ಮಧ್ಯೆಯೂ ಎದೆಗುಂದದೆ, ರಾಜ್ಯದಲ್ಲಿ ಯಾವ ಪಕ್ಷದ ಆಡಳಿತವಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾವಿರಾರು ಕೋಟಿ ರೂ.ಗಳ ಕೆಲಸವನ್ನು ತಂದು ಕ್ಷೇತ್ರದ ಮನೆಯ ಮಗಳಾಗಿ ಪ್ರೀತಿ ಗಳಿಸಿದರು.
ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಚನ್ನರಾಜ ಹಟ್ಟಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಅರ್ಜುನನ ಬಾಣದ ಗುರಿ ಪಕ್ಷಿಯ ಕಣ್ಣಿನಲ್ಲಿ ನೆಟ್ಟಂತೆ ಕಾಂಗ್ರೆಸ್ ಅಭ್ಯರ್ಥಿಯ ಗೆಲವೊಂದೇ ತಮ್ಮ ಗುರಿ ಎಂದು ಹಗಲು, ರಾತ್ರಿ ಶಕ್ತಿ, ಯುಕ್ತಿಯನ್ನು ಬಳಸಿ ಗೆಲುವನ್ನು ಸಾಧಿಸಿ ತೋರಿಸಿದರು. ಸವಾಲೆಸೆದವರಿಗೆಲ್ಲ ಮಣ್ಣು ಮುಕ್ಕಿಸಿದರು. ತನ್ಮೂಲಕ ಅಭಿವೃದ್ಧಿ ಕೆಲಸಗಳಿಗೆ ತಮ್ಮ 2 ಕೈಗಳಿಗೆ ಮತ್ತೆರಡು ಕೈಗಳನ್ನು ಸೆರಿಸಿಕೊಂಡರು.
ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದಲ್ಲಿ ಲಿಂಗಾಯತ ನಾಯಕಿಯಾಗಿ ಬೆಳೆದಿದ್ದಾರೆ. ಹಾಗಂತ ತೀರಾ ಜಾತೀಯ ವಾದಿಯಾಗದೆ, ಸರ್ವ ಜನಾಂಗದ ಪ್ರೀತಿಯನ್ನೂ ಗಳಿಸಿಕೊಂಡಿದ್ದಾರೆ. ಹಲವು ಮಠಾಧೀಶರ ಒಲವು ಬಿಜೆಪಿ ಕಡೆಗಿದ್ದರೂ ಲಕ್ಷ್ಮೀ ಹೆಬ್ಬಾಳಕರ್ ವಿಷಯ ಬಂದಾಗ ಅವೆಲ್ಲ ಗೌಣವಾಗುತ್ತವೆ. ಎಲ್ಲರೂ ‘ಅವರು ನಮ್ಮವರು’ ಎನ್ನುವ ಮನೋಭಾವ ಮೂಡುವಂತೆ ಕೆಲಸ ಮಾಡುತ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್ ಕೇವಲ ರಾಜಕೀಯವಾಗಿ ಮಾತ್ರ ಬೆಳೆದು ನಿಂತಿಲ್ಲ. ಸಾಮಾಜಿಕ ಮುಂದಾಳುವಾಗಿದ್ದಾರೆ, ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳನ್ನು ಕಟ್ಟಿ ನಿಲ್ಲಿಸಿದ್ದಾರೆ. ರಿಯಲ್ ಎಸ್ಟೇಟ್ ನಲ್ಲೂ ಛಾಪು ಮೂಡಿಸಿದ್ದಾರೆ. ಸಹಕಾರಿ ಸಂಘ ಕಟ್ಟಿ ಬೆಳೆಸುತ್ತಿದ್ದಾರೆ. ಕ್ಷೇತ್ರದ ಜನರ ಆರೋಗ್ಯಕ್ಕೆ ಬೆಂಬಲವಾಗಿ ನಿಲ್ಲಲು ಆಸ್ಪತ್ರೆಯೊದನ್ನು ಕಟ್ಟುವ ಬೃಹತ್ ಯೋಜನೆಯನ್ನು ಹೊಂದಿದ್ದಾರೆ.
https://pragati.taskdun.com/https-pragativahini-com-cabinet-complete-tomorrow-24-mlas-take-oath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ