*ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮಹಿಳೆಯರ ಸ್ವಾಭಿಮಾನ ಎತ್ತಿಹಿಡಿದು, ಆರ್ಥಿಕ ಸ್ವಾವಲಂಬನೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಮಹಿಳೆ ಅಭಿವೃದ್ಧಿಯಾದರೆ ಮನೆ, ಗ್ರಾಮ, ರಾಜ್ಯ, ದೇಶ ಅಭಿವೃದ್ಧಿಯಾದಂತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಂಗ್ರಾಳಿ ಕೆ.ಎಚ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ನಡೆದ ಮಹಿಳಾ ಸಾಧನಾ ಸಮಾವೇಶ ಹಾಗೂ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಮಹಿಳೆಯರನ್ನು ಸ್ವಾವಲಂಬಿಯಾಗಿಸಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಾದರಿ ಕೆಲಸ ಮಾಡುತ್ತಿದ್ದಾರೆ ಎಂದರು.
ಮಹಿಳೆಯರು ಅಭಿವೃದ್ಧಿಯಾಗಬೇಕು ಎಂಬುದೇ ವೀರೇಂದ್ರ ಹೆಗ್ಗಡೆ ಅವರ ಕನಸಾಗಿದೆ, ಇದು ನನ್ನ ಕನಸೂ ಕೂಡ ಆಗಿದೆ. ಹಳ್ಳಿಯಿಂದ ಬಂದು, ಸರ್ಕಾರಿ ಶಾಲೆಯಲ್ಲಿ ಕಲಿತು, ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ. ನಿಮ್ಮ ಕಷ್ಟ ಸುಖದಲ್ಲಿ ಜೊತೆಗೆ ನಿಲ್ಲುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಒಳ್ಳೆಯ ಉದ್ದೇಶದಿಂದ ಗೃಹಲಕ್ಷ್ಮೀ ಗ್ಯಾರಂಟಿ ಬ್ಯಾಂಕ್ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬರೂ ಶೇರ್ ಪಡೆಯಬೇಕು, ಅದರಿಂದ ಸಾಲ ನೀಡಲಾಗುವುದು. ಇದಕ್ಕೆ ಧರ್ಮಸ್ಥಳ ಸಂಘವೇ ಆದರ್ಶ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಜೊತೆಗೆ ಶಿಕ್ಷಣ, ಉದ್ಯೋಗಕ್ಕಾಗಿ ಸಾಲ ನೀಡುವ ವ್ಯವಸ್ಥೆ ಇರಲಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ಮಹಿಳೆಯರಿಗೆ ಜ್ಞಾನ ನೀಡುವ ಮೂಲಕ ಅದನ್ನು ಇಡೀ ಸಮಾಜಕ್ಕೆ ವಿಸ್ತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಹಿಳೆಯರು ಜ್ಞಾನವನ್ನು ಪಡೆದು ತಮ್ಮ ಮಕ್ಕಳಿಗೆ ಅದನ್ನು ನೀಡುವ ಮೂಲಕ ಇಡೀ ಸಮಾಜಕ್ಕೆ ಜ್ಞಾನವನ್ನು ವಿಸ್ತಾರ ಮಾಡುವಂತಹ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸಕಾರ್ಯಕ್ರಮ ಒಂದು ಆದರ್ಶವಾದ ಕಾರ್ಯಕ್ರಮವಾಗಿದೆ. ಮಹಿಳೆಯರನ್ನ ಆರ್ಥಿಕ ಸ್ವಾವಲಂಬನೆ ಮಾಡುವುದರ ಜೊತೆಗೆ ಈ ರೀತಿಯ ಜ್ಞಾನವಿಕಾಸವನ್ನು ಮಾಡುವಂತಹ ಕೆಲಸವನ್ನು ಮಾಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಲ್ಲಪ್ಲ ಪಾಟೀಲ್, ಜಿ.ಆರ್.ಸೊನೇರ್, ಸತೀಶ್ ನಾಯ್ಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನೂರಾರು ಮಹಿಳೆಯರು ಉಪಸ್ಥಿತರಿದ್ದರು.