

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು 24 ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ರಾಜಭವನದಲ್ಲಿ ಅದ್ದೂರಿಯಾಗಿ ನಡೆದಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವರಾಗಿ ಮೊದಲ ಬಾರಿ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದೇ ವೇಳೆ ನೂತನ ಸಚಿವರಾಗಿ ಹೆಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ, ಪಿರಿಯಾಪಟ್ಟಣ ವೆಂಕಟೇಶ್, ಡಾ.ಹೆಚ್.ಸಿ.ಮಹದೇವಪ್ಪ, ಈಶ್ವರ ಖಂಡ್ರೆ, ಕೆ.ಎನ್.ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪೂರ, ಶಿವಾನಂದಪಾಟೀಲ್, ಎಸ್ ಎಸ್ ಮಲ್ಲಿಕಾರ್ಜುನ, ಶಿವರಾಜ್ ತಂಗಡಗಿ, ಡಾ.ಶರಣಪ್ರಕಾಶ್ ಪಾಟೀಲ್ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಕಾಂಗ್ರೆಸ್ ಶಾಸಕರು, ನೂತನ ಸಚಿವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.