*ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿ ದೆಸೆಯಲ್ಲೆ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಗುರಿ ಇಟ್ಟುಕೊಂಡು ಸಾಧನೆ ಮಾಡುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರ ಪ್ರಯತ್ನದಿಂದಾಗಿ ಮಂಜೂರಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ನೂತನ ವಸತಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ತುಂಬಾ ಕಾಳಜಿ ವಹಿಸುತ್ತಾರೆ. ವಿದ್ಯಾರ್ಥಿಗಳು ಪಾಲಕ ಆಶಯವನ್ನು ನೆನಪಿನಲ್ಲಿಟ್ಟುಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದರು.

ವಿದ್ಯೆ ಇಲ್ಲದವ ಹದ್ದಿಗಿಂತ ಕಡೆ ಎನ್ನುವ ಮಾತಿದೆ, ಪ್ರತಿಯೊಬ್ಬರೂ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ವಸತಿ ನಿಲಯ ನಿಮ್ಮ ಸ್ವಂತದ್ದೆಂದು ತಿಳಿದು ಬಳಸಿಕೊಳ್ಳಿ, ಕಲಿಯುವ ಅವಕಾಶವಿದೆ ಸಿಕ್ಕಿದೆ, ತಂದೆ ತಾಯಿ ಆಸೆ ಪೂರೈಸಿ, ನಿಮ್ಮ ಕಾಲ ಮೇಲೆ ನಿಂತುಕೊಳ್ಳಿ ಎಂದು ಸಚಿವರು ಹಾರೈಸಿದರು.
ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಜೀವನದಲ್ಲಿ ದೊಡ್ಡ ಸ್ಥಾನಕ್ಕೇರಿ. ಆಗದು ಎಂದರೆ ಸಾಧ್ಯವಿಲ್ಲ, ಆಗದು ಎನ್ನಬೇಡಿ. ಸಾಧನೆ ಮಾಡಿ, ಶಿಸ್ತು ಅಳವಡಿಸಿಕೊಳ್ಳಿ. ಜೀವನದಲ್ಲಿ ವಿಫಲರಾಗಬೇಡಿ, ವಿಫಲರಾದರೆ ಯಾರೂ ಮಾತನಾಡಿಸುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ವಿದ್ಯಾರ್ಥಿಗಳು ಸ್ವಾಭಿಮಾನದಿಂದ ಜೀವನ ನಡೆಸಬೇಕು. ನಿಮ್ಮ ಜೊತೆ ನಾನು ಸೆಲ್ಫಿ ತೆಗೆದುಕೊಳ್ಳುವಂತೆ ಬೆಳೆಯಿರಿ, ಸಾಧನೆಯೊಂದೇ ಎಲ್ಲರಿಗೂ ಗುರಿಯಾಗಿರಲಿ. ಜಾತಿ ಬೀಜ ಬಿತ್ತಲು ಹೋಗಬೇಡಿ, ಎಲ್ಲರಿಗೂ ಗೌರವ ಕೊಡಿ, ವಿದ್ಯೆ ಕಲಿಯದಿದ್ದರೆ ನಿಮ್ಮ ಜೀವನಕ್ಕೆ ನೀವೇ ವೈರಿಯಾಗುತ್ತೀರಿ ಎಂದು ಸಚಿವರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ಎಂ.ಎಲ್ಸಿ ಸಾಬಣ್ಣ ತಳವಾರ್, ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಹಿತ್ತಲಮನಿ, ಬಾಳು ದೇಸೂರಕರ್, ಬಸವರಾಜ ಕುರಿಹುಲಿ, ವಿಠ್ಠಲ ದೇಸಾಯಿ, ರಾಹುಲ್ ಉರನಕರ್, ಅಶೋಕ ಕಾಂಬಳೆ, ಅಧಿಕಾರಿಗಳು ಉಪಸ್ಥಿತರಿದ್ದರು.


