Politics

*ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ನಾನು ಮಂತ್ರಿಯಾದ ಬಳಿಕ ಇಲಾಖೆಗೆ ಹೊಸ ಸ್ಪರ್ಶಕೊಟ್ಟಿರುವೆ ಎಂದ ಸಚಿವರು

ಪ್ರಗತಿವಾಹಿನಿ ಸುದ್ದಿ: ಮಹಿಳೆಯರ ಸಬಲೀಕರಣಕ್ಕಾಗಿಯೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ಮಾರ್ಚ್ ತಿಂಗಳಿಗೆ ಪ್ರತಿಯೊಂದು ಜಿಲ್ಲೆಯಲ್ಲೂ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ 3000 ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಗರ್ಭಿಣಿಯರಿಗೆ ಸೀಮಂತ ಮಾಡುವುದೆಂದರೆ ಅದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಭಾರತೀಯ ಸಂಸ್ಕೃತಿ ಮಹಿಳೆಗೆ ಅತ್ಯಂತ ಉನ್ನತ ಸ್ಥಾನವನ್ನು ಕೊಟ್ಟಿದೆ ಎಂದರು.

ಮಾತೃತ್ವ ಎನ್ನುವುದು ಅತ್ಯಂತ ಶ್ರೇಷ್ಟವಾದ ಮೌಲ್ಯ. ಹಿಂದಿನಿಂದಲೂ ಮಾತೃದೇವೋಭವ ಎನ್ನುತ್ತೇವೆ, ಜನನಿ ತಾನೆ ಮೊದಲ ಗುರುವು ಎನ್ನುತ್ತೇವೆ. ಅದು ಸೀಮಂತ ದಿಂದ ಆರಂಭವಾಗಿ ಮಗು ಬೆಳವಣಿಗೆ ಹೊಂದಿದಂತೆ ಮುಂದುವರಿಯುತ್ತ ಹೋಗುತ್ತದೆ. ಒಂದು ಮಗುವಿನ ಬೆಳವಣಿಗೆ ಎಂದರೆ ಅದು ಸಮಾಜದ ಬೆಳವಣಿಗೆ, ದೇಶದ ಬೆಳವಣಿಗೆ, ಮಗುವನ್ನು ಸಮಾಜದ ಆಸ್ತಿಯಾಗಿ ಬೆಳೆಸಲು ಈ ಸಂಸ್ಕಾರಗಳು ಅತ್ಯಂತ ಅಗತ್ಯ. ಮಗು ನಾಳೆಯ ಉತ್ತಮ ಪ್ರಜೆಯಾಗಬೇಕು, ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಸಚಿವರು ಕರೆ ನೀಡಿದರು.

Home add -Advt

ಅಂಗನವಾಡಿಗೆ ಹೈಟೆಕ್ ಸ್ಪರ್ಶ

ನಾನು ಮಂತ್ರಿಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೊಸರೂಪ ಕೊಡುತ್ತಿದ್ದೇನೆ. ಅಂಗನವಾಡಿ ಇಲಾಖೆಗೆ ಹೈಟೆಕ್ ಸ್ಪರ್ಶ ಕೊಟ್ಟಿದ್ದು, ಸರ್ಕಾರಿ ಮಾಂಟೆಸರಿ ತರಗತಿಗಳನ್ನು ಆರಂಭಿಸಲಾಗಿದೆ. ಇದೀಗ ಇಲಾಖೆ ವತಿಯಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸೀಮಂತದ ಮೌಲ್ಯ ವಿವರಿಸಿದ ಸಚಿವರು…
ತಾಯ್ತನದ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ, ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ನಿಭಾಯಿಸಿ, ಮಗುವಿಗೆ ಉತ್ತಮ ಸಂಸ್ಕಾರ ಕೊಟ್ಟು, ಬೆಳೆಸಿ ಎನ್ನುವುದನ್ನು ಹೇಳುವುದಕ್ಕಾಗಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಹಾಭಾರತದಲ್ಲಿ ಸೌಭದ್ರೆ ಗರ್ಭವತಿಯಾದಾಗ ಶ್ರೀಕೃಷ್ಣ ತನ್ನ ತಂಗಿಯನ್ನು ನೋಡಲು ಬರುತ್ತಾನೆ. ತಂಗಿಗೆ ಚಕ್ರವ್ಯೂಹದೊಳಗೆ ನುಗ್ಗುವುದು ಹೇಗೆ ಎನ್ನುವ ಕಥೆ ಹೇಳಲು ಆರಂಭಿಸುತ್ತಾನೆ. ಆದರೆ ಕಥೆ ಕೇಳುತ್ತಾ ಸೌಭದ್ರೆ ನಿದ್ರೆಗೆ ಜಾರುತ್ತಾಳೆ. ಆಗ ಗರ್ಭದೊಳಗಿದ್ದ ಮಗು ಕಥೆ ಕೇಳುತ್ತ ಪ್ರತಿಕ್ರಿಯಸಲು ಆರಂಭಿಸುತ್ತದೆ. ಆಗ ಶ್ರೀಕೃಷ್ಣನಿಗೆ ಗೊತ್ತಾಗುತ್ತದೆ, ತನ್ನ ತಂಗಿಯ ಗರ್ಭದಲ್ಲಿರುವುದು ಸಾಮಾನ್ಯ ಮಗುವಲ್ಲ ಎಂದು. ಆಗಲೇ ಗರ್ಭದಲ್ಲಿರುವಾಗಲೇ ಅಭಿಮನ್ಯು ಶ್ರೀ ಕೃಷ್ಣ ಹೇಳಿದ ಕಥೆ ಕೇಳುತ್ತ ಚಕ್ರವ್ಯೂಹ ಭೇದಿಸುವಂತಹ ದೊಡ್ಡ ಯುದ್ಧ ವಿದ್ಯೆಯನ್ನು ಕಲಿತಿದ್ದ… ಹಾಗಾಗಿ, ಗರ್ಭಿಣಿಯಾಗಿದ್ದಾಗ ದೃಶ್ಯ ಮತ್ತು ಶ್ರವ್ಯ ಎರಡೂ ಉತ್ತಮವಾಗಿರಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

100 ವಿಕಲ ಚೇತನರಿಗೆ ವೀಲ್‌ಚೇರ್
ಕ್ಷೇತ್ರದ 100 ಮಂದಿಗೆ ವಿಕಲ ಚೇತನರಿಗೆ ಬ್ಯಾಟರಿ ಚಾಲಿತ ವೀಲ್‌ಚೇರ್, ಬ್ರೆöÊಲ್ ವಾಚ್, ಲ್ಯಾಪ್‌ಟಾಪ್‌ಗಳನ್ನು ನೀಡಲಾಗಿದೆ. ಇಲ್ಲಿ ಆಗಮಿಸಿರುವ ವಿಕಲ ಚೇತನರಿಗೂ, ಹಿರಿಯ ನಾಗರಿಕರಿಗೂ ಉತ್ತಮ ಆರೋಗ್ಯ, ನೆಮ್ಮದಿಯನ್ನು ಹಾರೈಸುತ್ತೇನೆ. ಹಿರಿಯ ನಾಗರಿಕರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅವರ ವರ್ಷಪೂರ್ತಿ ಉತ್ತಮ ಕೆಲಸಗಳು ನಡೆದಿವೆ. ಹೀಗೆಯೇ ಉತ್ತಮ ಕೆಲಸಗಳು ಮುಂದುವರಿಯಲಿ ಎಂದು ಸಚಿವರು ಹೇಳಿದರು.

ಜನರ ಹೃದಯದಲ್ಲಿ ಸರ್ಕಾರ

ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರ್ಕಾರ ಜನರಿಗೆ ಮತ್ತಷ್ಟು ಹತ್ತಿರ ಆಗುತ್ತದೆ. ಜನರ ಹೃದಯದಲ್ಲಿ ಸರಕಾರ ಇರಬೇಕು. ಒಂದು ತಿಂಗಳು ಪೂರ್ತಿ ಮುಂದಿನ ವರ್ಷ ದಿಂದ ಎಲ್ಲ ಜಿಲ್ಲೆಗಳಲ್ಲೂ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗರ್ಭಿಣಿಯರೊಂದಿಗೆ ಊಟ ಮಾಡಿದ ಸಚಿವರು
ಕಾರ್ಯಕ್ರಮದ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗರ್ಭಿಣಿಯರಿಗೆ ಹೋಳಿಗೆ ಊಟ ಬಡಿಸಿದರು. ಬಳಿಕ ಅವರೊಂದಿಗೆ ಊಟ ಮಾಡುವ ಮೂಲಕ ಗಮನಸೆಳೆದರು. ಗರ್ಭಿಣಿಯರ ಜೊತೆ ಸೆಲ್ಫಿಗೂ ಫೋಸ್ ಕೊಟ್ಟರು. ಈ ವೇಳೆ ಸಚಿವರಿಗೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಸಾಥ್ ನೀಡಿದರು.

ಮಳಿಗೆಗಳಿಗೆ ಸಚಿವರಿಂದ ಚಾಲನೆ
ಸಮಾರಂಭಕ್ಕೂ ಮುನ್ನ ಸ್ತ್ರೀಶಕ್ತಿ ಗುಂಪುಗಳನ್ನು ಉತ್ತೇಜಿಸಲು ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಕಾರವಾರ, ಗದಗ ಹಾಗೂ ಧಾರವಾಡ ಹೀಗೆ 7 ಜಿಲ್ಲೆಗಳ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್ ಎನ್.ಆರ್.ಎಲ್.ಎಮ್ ಅಡಿ ಸ್ತ್ರೀ ಶಕ್ತಿ ಗುಂಪುಗಳು ಪಾಲ್ಗೊಂಡು ಸದರಿ ಮಳಿಗೆಗಳಲ್ಲಿ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ, ಬಟ್ಟೆ ವ್ಯಾಪಾರ, ತಿಂಡಿ-ತಿನಿಸುಗಳ ವ್ಯಾಪಾರ, ಲಂಬಾಣಿ ಉಡುಪು, ಬಿದಿರಿನಿಂದ ತಯಾರಿಸಿದ ವಸ್ತುಗಳು, ವಿವಿಧ ರೀತಿಯ ಬ್ಯಾಗ್ ಗಳು ಇತ್ಯಾದಿ ವಸ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಇಲಾಖೆ ಸಿಬ್ಬಂದಿಗೆ ಶಹಬ್ಬಾಶ್ ಗಿರಿ ಕೊಟ್ಟ ಸಚಿವರು
ಇಲಾಖೆಯ ಉಪ ನಿರ್ದೇಶಕ ನಾಗರಾಜ್ ಅವರ ಸಾರಥ್ಯದಲ್ಲಿ ಈ ಬೃಹತ್ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿದ್ದು, ಇದಕ್ಕಾಗಿ ಹಗಲಿರುಳು ಶ್ರಮಿಸಿದ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜೊತೆಗೆ ಗರ್ಭಿಣಿಯರು, ಹಿರಿಯ ನಾಗರೀಕರು, ವಿಕಲ ಚೇತನರಿಗೆ ಹಾಗೂ ಸಾಮಾನ್ಯ ಜನರಿಗೆ ಪ್ರತ್ಯೇಕ ಊಟದ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಚಿವರ ವಿಶೇಷ ಕಾಳಜಿಯಿಂದ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಜನರ ಮೆಚ್ಚುಗೆಗೂ ಪಾತ್ರವಾಯಿತು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಸಚಿವರ ಸಹೋದರಿಯರು, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್.ಆರ್, ದಲಿತ ಮುಖಂಡ ಮಲ್ಲೇಶ ಚೌಗಲೆ, ಜಯಶ್ರೀ ಮಾಳಗಿ, ಯುವರಾಜ ಕದಂ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Back to top button