Kannada NewsKarnataka NewsLatestPolitics

*ಬಿಜೆಪಿ‌‌ ಏಜೆಂಟ್ ಆಗಿರುವ ಚುನಾವಣಾ ಆಯೋಗ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ‌ಟೀಕೆ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದೆ.‌ ಮತಗಳ್ಳತನಕ್ಕೆ ಬಿಜೆಪಿಗೆ ಬೆಂಬಲವಾಗಿ ನಿಂತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು. ‌

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ “ ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ ” ಕಾರ್ಯಕ್ರಮದ ಅಂಗವಾಗಿ ಕ್ಲಾಕ್ ಟವರ್ ನ ಗಾಂಧಿ ಪ್ರತಿಮೆ ಬಳಿ ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಚುನಾವಣೆಯನ್ನು ನಿಷ್ಪಕ್ಷಪಾತ, ನಿರ್ಭಿತಿಯಿಂದ ನಡೆಸಬೇಕು.‌ ಆದರೆ, ಚುನಾವಣಾ ಆಯೋಗದ ಧೋರಣೆಯನ್ನು ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದರು.

ಬಿಜೆಪಿ ಹಾಗೂ ಚುನಾವಣಾ ಆಯೋಗ ಸಂವಿಧಾನದ ಹಕ್ಕನ್ನು ಕಸಿಯುತ್ತಿವೆ. ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲುವುದೇ ಬಿಜೆಪಿಗರ ಹುನ್ನಾರವಾಗಿದೆ‌. ಬಿಜೆಪಿ ವಿರುದ್ಧ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ನಮ್ಮ ನಾಯಕ ರಾಹುಲ್ ಗಾಂಧಿ ಸಾಕ್ಷಿ ಸಮೇತ ಚುನಾವಣಾ ಆಯೋಗದ ಅವ್ಯವಹಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಮತದಾನದ ಹಕ್ಕನ್ನು ನೀಡಿದರೆ, ಇಲ್ಲಿ ಒಬ್ಬ ವ್ಯಕ್ತಿ ನಾಲ್ಕು ಬಾರಿ ಮತದಾನ ಮಾಡಿದ ಉದಾಹರಣೆಗಳಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟೀಕಿಸಿದರು.

Home add -Advt

ವಿರೋಧ ಪಕ್ಷದ ನಾಯಕರ ಮೇಲೆ ಇಡಿ, ಐಟಿ‌‌ ದಾಳಿ ಮಾಡಿಸುವ ಕೇಂದ್ರದ ಬಿಜೆಪಿ ನಾಯಕರು, ಇದೀಗ ಮತಗಳ್ಳತನಕ್ಕೂ ಕೈ‌ಹಾಕಿದ್ದಾರೆ. ಚುನಾವಣೆ ಆದ ತಕ್ಷಣ‌ ರಾಹುಲ್ ಗಾಂಧಿಯವರು ಮತದಾನ ಪಟ್ಟಿ ಕೇಳಿದರೂ ಕೊಡಲಿಲ್ಲ. ನಮ್ಮ ಹೋರಾಟದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಬಿಜೆಪಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಈ ವೇಳೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಪ್ರಸಾದ್ ಕಾಂಚನ್, ರಮೇಶ್ ಕಾಂಚನ್, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳಕೆಬೈಲ್, ಗಣೇಶ್ ನೆರ್ಗಿ ಉಪಸ್ಥಿತರಿದ್ದರು. ‌

Related Articles

Back to top button