
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವರ ಪ್ರತಿಕ್ರಿಯೆ
ಪ್ರಗತಿವಾಹಿನಿ ಸುದ್ದಿ: ನಾವು ಕೂಡ ರೈತರು, ಕಾರ್ಖಾನೆ ಇದ್ದ ಕಾರಣಕ್ಕೆ ರೈತರ ಕಷ್ಟ ಗೊತ್ತಿಲ್ಲ ಅಂತಲ್ಲ. ರೈತರಿಗೂ ಅನ್ಯಾಯ ಆಗಬಾರದು, ಕಾರ್ಖಾನೆ ಮಾಲೀಕರಿಗೂ ಅನ್ಯಾಯ ಆಗಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.
ಕಬ್ಬು ಬೆಲೆ ಹೆಚ್ಚಳಕ್ಕೆ ರೈತರ ಪ್ರತಿಭಟನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ನಾನು ಬ್ಯೂಸಿ ಇದ್ದ ಕಾರಣ ಮೀಟಿಂಗ್ ನಲ್ಲಿ ಇರಲಿಲ್ಲ. ನನ್ನ ತಮ್ಮ ಹಾಗೂ ಮಗ ರೈತರ ಸಂಪರ್ಕದಲ್ಲಿದ್ದಾರೆ ಎಂದರು.
ಕಾರ್ಖಾನೆ ಮಾಲೀಕರು, ರೈತರು ಸೇರಿ ಸಭೆ ಮಾಡುತ್ತೇವೆ. ದರದ ಬಗ್ಗೆ ಮಾತನಾಡಲು ಹೋದರೆ ಬೇರೆ ರೀತಿ ಆಗುತ್ತೆ. ರೈತರಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ರೈತರ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ರೈತರ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಲಿ, ರಾಜಕೀಯ ಬಿಟ್ಟು ಪ್ರತಿಭಟನೆಗೆ ಹೋಗಲಿ. ರೈತರ ಬಗೆಗಿನ ಬಿಜೆಪಿ ಹೋರಾಟ ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ ಎಂದರು.
ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ಹೇಗೆಲ್ಲಾ ಹತ್ತಿಕ್ಕಿತು. ಈ ಹೋರಾಟದಲ್ಲಿ ಎಷ್ಟು ಜನ ರೈತರು ತೀರಿಕೊಂಡರು ಎನ್ನುವುದು ಗೊತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇರಲಿ. ಸದ್ಯಕ್ಕೆ ನಾನು ಈ ಬಗ್ಗೆ ಏನೂ ಮಾತನಾಡಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದರು.
ರಾಹುಲ್ ಗಾಂಧಿ ಭಾಗಿ ನಿರೀಕ್ಷೆ
ನವೆಂಬರ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಹುಲ್ ಗಾಂಧಿ ಅವರ ಬಳಿ ನವೆಂಬರ್ 19 ಮತ್ತು 20ಕ್ಕೆ ಸಮಯ ಕೊಡಿ ಅಂತ ಕೇಳಿದ್ದೇವೆ. ಬೆಂಗಳೂರಿನಲ್ಲಿ ಟೆಕ್ ಶೃಂಗ ಸಭೆ ನಡೆಯಲಿದ್ದು, ಸಮಯ ಹೊಂದಿಸಿಕೊಂಡು ಹೇಳುವುದಾಗಿ ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಅಂಗನವಾಡಿಗಳನ್ನ ಪ್ರಥಮ ಬಾರಿಗೆ ಮೈಸೂರಲ್ಲಿ ಆರಂಭ ಮಾಡಿದ್ದು ಇಂದಿರಾ ಗಾಂಧಿ, ಎಲ್ಲಾ ಬಡ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಕೊಡಬೇಕು ಅಂತ ಆರಂಭಿಸಲಾಯಿತು. ಇದೀಗ ಐವತ್ತು ವರ್ಷ ಪೂರೈಸಿದ್ದು, ಇಂತಹ ಒಂದು ಸುವರ್ಣ ಸಂಭ್ರಮವನ್ನ ಕಂಠೀರವ ಕ್ರೀಡಾಂಗಣದಲ್ಲಿ ಮಾಡಲಾಗುತ್ತಿದೆ ಎಂದರು.
					
				
					
					
					
					
					
					
					

