Karnataka NewsLatestPolitics

*ಹೆಣ್ಣು ಧೈರ್ಯದಿಂದ ಇದ್ದರೆ ಮನೆಗೆ ಬೆಳಕಿದ್ದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

ಪ್ರಗತಿವಾಹಿನಿ ಸುದ್ದಿ: ಹೆಣ್ಣು ಸ್ವಾಭಿಮಾನದ ಪ್ರತೀಕ, ಹೆಣ್ಣು ಧೈರ್ಯದಿಂದ ಇದ್ದರೆ ಇಡೀ ಮನೆಗೆ ಬೆಳಕಿದ್ದಂತೆ, ಮನೆಯಲ್ಲಿರುವ ಮಕ್ಕಳು, ಗಂಡ, ಅತ್ತೆ ಮಾವ ಎಲ್ಲರೂ ಧೈರ್ಯದಿಂದ ಇರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮಹಿಳೆ ಮನೆಯಲ್ಲಿ ನಕ್ಕರೆ ಇಡೀ ಮನೆಯೇ ನಗುತ್ತಿರುತ್ತೆ, ಸ್ವಾಭಿಮಾನದಿಂದ ಇದ್ದರೆ ಮನೆಯಲ್ಲಿರುವ ಎಲ್ಲರೂ ಸ್ವಾಭಿಮಾನದಿಂದ ಇರುತ್ತಾರೆ ಎಂದರು.

ಹೆಣ್ಣಿಗೆ 5 ರೂಪಾಯಿನಲ್ಲೂ ಜೀವನ ಸಾಗಿಸಲು ಬರುತ್ತದೆ. 50 ಲಕ್ಷ ರೂಪಾಯಿಯಲ್ಲೂ ಜೀವನ ಮಾಡಲು ಬರುತ್ತದೆ, ಹೆಣ್ಣು ಆರೋಗ್ಯ ಕಾಪಾಡಿಕೊಂಡು ಸಂಸಾರ ಮಾಡಿದರೆ ಆ ಮನೆ ನಂದಗೋಕುಲ ಆಗುವುದರಲ್ಲಿ ಅನುಮಾನ ಇಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

Home add -Advt

ಇಂದಿನ ಸಮಾಜದಲ್ಲಿ ಪುರುಷರ ವಿಚಾರಧಾರೆ ಕೂಡ ಬದಲಾಗಿದೆ, ಇಂದು ಪುರುಷರು ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂದು ಪ್ರತಿಯೊಬ್ಬ ಯಶಸ್ಸಿ ಮಹಿಳೆಯ ಹಿಂದೆ ಪುರುಷರು ನಿಂತಿರುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಈ ಮೊದಲು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ಪುರುಷರಷ್ಟೇ ಗೆಲ್ಲುತ್ತಿದ್ದರು, ಇಂದು ಮಹಿಳೆಯರು ಗೆದ್ದಿದ್ದಾರೆ. ಅಂಧರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಕರ್ನಾಟಕದ ಮೂವರು ಆಟಗಾರ್ತಿಯರಿಗೆ ತಲಾ 10 ಲಕ್ಷ್ಮ ರೂಪಾಯಿ ಬಹುಮಾನ ಮೊತ್ತವನ್ನು ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಅವರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಲಾಗಿದೆ. ಮೊದಲು ಮಹಿಳೆಯರ ಕ್ರಿಕೆಟ್ ಪಂದ್ಯಗಳನ್ನು ಯಾರೂ ನೋಡುತ್ತಿರಲಿಲ್ಲ, ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು 55 ಕೋಟಿ ಜನ ಟೀವಿ ಮೂಲಕ ವೀಕ್ಷಣೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.

ಭಾರತದ ಸಂಸ್ಕೃತಿಯಲ್ಲಿ ಮಹಿಳೆಗೆ ತುಂಬಾ ಗೌರವ ಇದೆ, ಮಹಿಳೆಯರಲ್ಲಿ ಇರುವ ಸಹನೆ ಬೇರೆ ಯಾರಿಗೂ ಇರುವುದಿಲ್ಲ. ಮೊದಲು ನಾವು ಸರಿಯಾಗಿ ಇದ್ದರೆ, ನಾವು ಬೇರೆಯವರಿಗೆ ಬುದ್ದಿ ಹೇಳಬಹುದು, ಪ್ರತಿಯೊಂದು ಹೆಣ್ಣು ಏನಾದರೂ ಒಂದು ಗುಣವನ್ನು ಹೊಂದಿರುತ್ತಾಳೆ. ಯಾವುದೇ ಕೆಲಸವನ್ನು ಮಹಿಳೆಗೆ ಕೊಟ್ಟರೂ ಚಾಕಚಕ್ಯತೆಯಿಂದ ಕೆಲಸವನ್ನು ಮಾಡಿ ತೋರಿಸುತ್ತೇವೆ ಎಂದರು.

ನಾನು ಎರಡು ಬಾರಿ ಚುನಾವಣೆಯಲ್ಲಿ ಸೋತೆ, ಆದರೆ, ದೃತಿಗೆಡದೆ ಹಗಲಿರುಳು ಶ್ರಮಿಸಿದೆ. ಇವಳಿಗೆ ಟಿಕೆಟ್‌ ಕೊಡದಿದ್ದರೆ ಬೇರೆಯವರನ್ನು ಸೋಲಿಸುತ್ತಾಳೆ ಅನ್ನುವಷ್ಟರ ಮಟ್ಟಿಗೆ ಬೆಳೆದೆ. ಇವತ್ತು 34 ಜನರಲ್ಲಿ ಏಕೈಕ ಮಹಿಳಾ ಮಂತ್ರಿಯಾಗಿರುವೆ. ರಾಜ್ಯದ ಮಹಿಳೆಯರ, ಮಕ್ಕಳ, ಹಿರಿಯರ, ವಿಕಲಚೇತನರ ಸೇವೆಯನ್ನು ಮಾಡುತ್ತಿರುವೆ. ಸಾಧನೆಯ ಹಾದಿಯಲ್ಲಿ ಟೀಕೆ ಟಿಪ್ಪಣಿ, ಅಡ್ಡದಾರಿಗಳು ಬರುತ್ತವೆ. ಒಂದು ಗುರಿಯನ್ನು ಹಿಡಿದು ಮುಂದೆ ಸಾಗಬೇಕು ಎಂದು ಹೇಳಿದರು.

ಗೃಹಲಕ್ಷ್ಮೀ ಯೋಜನೆ ಬಗ್ಗೆ ಬಿಜೆಪಿಗರಿಂದ ಅಪಪ್ರಚಾರ

ಗೃಹಲಕ್ಷ್ಮೀ ಯೋಜನೆ ಬಗ್ಗೆ ಬಿಜೆಪಿಗರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಕಳೆದ ವರ್ಷದ ಫೆಬ್ರವರಿ, ಮಾರ್ಚ್‌ ತಿಂಗಳ ಹಣ ಹಾಕಿಲ್ಲ ಅಂತ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಹಣಕಾಸು ಇಲಾಖೆ ಅನುಮತಿ ಕೊಟ್ಟಿಲ್ಲ, ಹೀಗಾಗಿ ಹಣ ಹಾಕಲು ಆಗಿಲ್ಲ. ನಾನು 5 ಸಾವಿರ ಕೋಟಿ ರೂ. ಹಗರಣ ಮಾಡಿದ್ದರೆ ಮೋದಿ ಸರ್ಕಾರದ ಇಡಿ ನಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿತ್ತು. ಮಾತಿನ ಚಪಲಕ್ಕೆ ಯೋಜನೆ ಬಗ್ಗೆ ಟೀಕೆ ಮಾಡುತ್ತಾರೆ. ನಾನು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸಾಗುತ್ತಿದ್ದೇನೆ. ನಾನು ಸಚಿವೆಯಾದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ವಿವಿಧ ಪ್ರಶಸ್ತಿಗಳ ಪ್ರದಾನ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಅತ್ಯುತ್ತಮ ಸ್ತೀಶಕ್ತಿ ಗುಂಪುಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಬಿಡುಗಡೆ ಮಾಡಲಾಯಿತು. ಇದೇ ವೇಳೆ ಸ್ತ್ರೀ ಶಕ್ತಿ ಗುಂಪುಗಳ ಯಶಸ್ವಿ ಕಥೆಗಳ ಅಂತರಾಳ-21 ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವರು ಬಹುಮಾನ ವಿತರಿಸಿದರು‌.

ಈ ವೇಳೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪದ್ಮಾವತಿ, ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಅಡಿವೇಶ ಇಟಗಿ, ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕರಾದ‌ ಮಹೇಶ್ ಬಾಬು, ವಿಶೇಷ ಕರ್ತವ್ಯಾಧಿಕಾರಿ ನಿಶ್ಚಲ್. ಬಿ.ಎಚ್, ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಸಿಬ್ಬಂದಿ ವರ್ಗದವರು‌ ಉಪಸ್ಥಿತರಿದ್ದರು.

Related Articles

Back to top button