ಕದಳಿ ಮಹಿಳಾ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿಕೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳೆಗೆ ಹೋರಾಟವೇ ಮನೋಬಲ. ಮಹಿಳೆಯರು ತಮ್ಮ ಅಗತ್ಯತೆಯನ್ನು ಹೋರಾಟದಿಂದಲೇ ಪಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕದಳಿ ಮಹಿಳಾ ಸಮಾವೇಶ ಹಾಗೂ ಕದಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು, ನಾನು ಇಂದು ಈ ಮಟ್ಟಿಗೆ ಬೆಳೆಯಬೇಕಾದರೆ ನನ್ನ ಹೋರಾಟವೇ ಮೂಲ ಕಾರಣ ಎಂದರು. ನನಗೆ ಹೋರಾಟವೇ ಸ್ಫೂರ್ತಿ
ಮಹಿಳಾ ಸ್ವಾವಲಂಬನೆ ಇಂದಿನ ಅತ್ಯಂತ ಪ್ರಮುಖ ಅಗತ್ಯ ಎಂದು ನನಗೆ ಅನಿಸುತ್ತಿದೆ. ಮಹಿಳೆ ಸದ್ದುದ್ದೇಶಕ್ಕಾಗಿ, ಸದುದ್ದೇಶದಿಂದ ತನಗಿಷ್ಟ ಬಂದ ಹಾಗೆ ತಾನು ನಡೆದುಕೊಳ್ಳುವುದಕ್ಕೆ, ತನಗಿಷ್ಟ ಬಂದ ಹಾಗೆ ತಾನು ಖರ್ಚು ಮಾಡುವುದಕ್ಕೆ ಸಾಧ್ಯವಾದರೆ ಅದೇ ಸ್ವಾವಲಂಬನೆ ಎಂದು ಸಚಿವರು ತಿಳಿಸಿದರು.
ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು, ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ.
ಮಹಿಳೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದ ಸಚಿವರು, ನನ್ನ ಬಗ್ಗೆ ಹೇಳುವುದಾದರೆ ನಾನು 1999ರಲ್ಲಿ ರಾಜಕೀಯ ಪ್ರವೇಶಿಸಿದೆ. ಎರಡು ಬಾರಿ ಚುನಾವಣೆಯಲ್ಲಿ ಸೋತರೂ ನನ್ನ ಅಕ್ಕ ತಂಗಿಯರು ನನಗೆ ಸ್ಫೂರ್ತಿ ತುಂಬಿದದ್ದರಿಂದಲೇ ಇಂದು ಎರಡನೇ ಬಾರಿ ಶಾಸಕಿ ಆಗಿ ಮಂತ್ರಿಯಾಗಿದ್ದೇನೆ ಎಂದರು.
ಸಾಮಾನ್ಯ ಕುಟುಂಬದಿಂದ, ಸಾಮಾನ್ಯ ಹಳ್ಳಿಯಿಂದ, ಸಾಮಾನ್ಯ ಬಸ್ ನಲ್ಲಿ ಓಡಾಡಿ, ಸಾಮಾನ್ಯ ಕಾಲೇಜಿನಲ್ಲಿ ಓದಿ ಬೆಳೆದು ಬಂದ ನಾನು ಇಂದು ಮಂತ್ರಿ ಸ್ಥಾನಕ್ಕೆ ತಲುಪಲು ಸಾಧಿಸಬೇಕೆನ್ನುವ ಛಲವೇ ಇದಕ್ಕೆ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸಾಕಷ್ಟು ಅವಮಾನಗಳನ್ನು ಎದುರಿಸಿದ್ದೇನೆ, ಟೀಕೆಗಳನ್ನು ಎದುರಿಸಿದ್ದೇನೆ. ಆದರೆ ಯಾವುದಕ್ಕೂ ಹಿಂಜರಿಯಲಿಲ್ಲ, ಅವಮಾನಗಳನ್ನು, ಟೀಕೆಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಬೆಳೆದಿದ್ದೇನೆ ಎಂದರು.
ಕದಳಿ ಮಹಿಳಾ ವೇದಿಕೆಗೆ ಸಹಕಾರ
ಕದಳಿ ಮಹಿಳಾ ವೇದಿಕೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ತಿಳಿಸಿದರು. ಸರ್ಕಾರದಿಂದ ಅನುದಾನ ಕೊಡಿಸುವಂತೆ ಆಯೋಜಕರ ಮನವಿಗೆ ಸ್ಪಂದಿಸಿದ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದಲೇ ಅನುದಾನ ನೀಡಲು ಅವಕಾಶವಿದ್ದರೆ ಖಂಡಿತವಾಗಿಯೂ ಸ್ಪಂದಿಸುವುದಾಗಿ ಹೇಳಿದರು. ಜೊತೆಗೆ ಅನುದಾನದ ಕುರಿತು ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಗಮನಕ್ಕೆ ತರಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ವೈಜಯಂತಿ ಕಾಶಿ, ಸಂಗೀತಾ ಕಟ್ಟಿಗೆ ಪ್ರಶಸ್ತಿ ಪ್ರದಾನ
ನೃತ್ಯಗಾರ್ತಿ ವೈಜಯಂತಿ ಕಾಶಿಗೆ ‘ಕದಳಿ’ ಪ್ರಶಸ್ತಿ ಹಾಗೂ ಗಾಯಕಿ ಸಂಗೀತಾ ಕಟ್ಟಿಗೆ ಬೆಳ್ಳಿ ಹಬ್ಬ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ನಾಡೋಜ ಡಾ.ಗೊ.ರು.ಚನ್ನಬಸಪ್ಪ, ಪ್ರಸಿದ್ಧ ನೃತ್ಯಗಾರ್ತಿ ವೈಜಯಂತಿ ಕಾಶಿ, ಪ್ರಸಿದ್ಧ ಗಾಯಕರಾದ ಸಂಗೀತಾ ಕಟ್ಟಿ ಕುಲಕರ್ಣಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಪ್ಪರಾವ ಅಕ್ಕೋಣೆ, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಪ್ರಮೀಳಾ ಗರಡಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ