Belagavi NewsBelgaum NewsKarnataka NewsLatestPolitics

*ರಾಜಕೀಯಕ್ಕೂ ಸಹಕಾರ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವ ಸಮಾರೋಪ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಸಹಕಾರಿ ಕ್ಷೇತ್ರ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಜಿ.ಎನ್.ಎಂ.ಸಿ ಡಾ.ಬಿ.ಎಸ್ ಜಿರಗೆ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಶಾಸನಬದ್ಧ ಸಹಕಾರಿ ಸಂಸ್ಥೆಯ ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸಹಕಾರ ಕ್ಷೇತ್ರದಿಂದ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದರು.

ರಾಜಕೀಯ ಕ್ಷೇತ್ರಕ್ಕೂ ಸಹಕಾರ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಬಹುತೇಕ ಸಹಕಾರಿಗಳು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಾರೆ. ಇತ್ತೀಚೆಗೆ ರಾಜಕಾರಣಿಗಳು ಸಹಕಾರಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ಇಡೀ ದೇಶಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

Home add -Advt

ಸಹಕಾರ ಅಂದರೆ ಎಲ್ಲರೊಂದಿಗೆ ಒಟ್ಟುಗೂಡಿ, ಜಾತಿ ಮತ, ಧರ್ಮ ಎನ್ನದೆ ಒಗ್ಗಟ್ಟಾಗಿ ಹೋಗುವುದು. ಪ್ರತಿಯೊಂದು ಕ್ಷೇತ್ರದವರಿಗೂ ಉತ್ತಮ ಸೇವೆ ನೀಡುವ ಕ್ಷೇತ್ರ ಸಹಕಾರ ಕ್ಷೇತ್ರ. ಸಹಕಾರಿ ರಂಗದಲ್ಲಿ ಮಾಡುವ ಕೆಲಸ ಕೂಡ ದೇವರ ಕೆಲಸಕ್ಕೆ ಸಮಾನ ಎಂದರು.

ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸ ಬಹಳ ಮುಖ್ಯ, ಜನರು ಸಹಕಾರ ಕ್ಷೇತ್ರದಲ್ಲಿ ನಂಬಿಕೆ ಇಟ್ಟು ಬಂಡವಾಳವನ್ನು ಹೂಡಿಕೆ ಮಾಡುತ್ತಾರೆ. ಸಣ್ಣಪುಟ್ಟ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಆಗುತ್ತಿದೆ. ಸಹಕಾರ ಕ್ಷೇತ್ರ ಉಳಿಸಿಕೊಂಡು ಬಂದಿರುವ ವಿಶ್ವಾಸವೇ ಇದಕ್ಕೆ ಸಾಕ್ಷಿ. ನಾನು ಕೂಡ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ಇರುವುದರಿಂದ ಕಠಿಣ ಸವಾಲುಗಳನ್ನು ನೋಡಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶಣ್ಣ ಜಾರಕಿಹೊಳಿ, ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪ್ರಭಾಕರ್ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಶಾಸಕರಾದ ಆಸಿಫ್ ಸೇಠ್, ಎಸ್. ಎಸ್. ಪಾಟೀಲ, ಕಲ್ಲಪ್ಪ ಬಬ್ಬನಗೋಳ, ಮನೋಹರ ಮಸ್ಕಿ, ಎಸ್.ಆರ್.ಸತೀಶ್ಚಂದ್ರ, ಹೆಚ್.ವಿ. ರಾಜೀವ್, ಸಿ.ಎನ್ ಪರಶಿವ ಮೂರ್ತಿ, ಅನೂಪ್ ದೇಶಪಾಂಡೆ, ಜಿ. ನಂಜನಗೌಡ, ವಿಶ್ವನಾಥ ಹಿರೇಮಠ, ಗುರುನಾಥ ಜ್ಯಾಂತಿಕರ್, ಬಿ.ಎಚ್ ಕೃಷ್ಣರೆಡ್ಡಿ, ಸಚಿನ ಪಾಟೀಲ, ಶರಣಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button