*ವಿವಿಧೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರ: ಎಲ್ಲೆಡೆ ಭಾರೀ ಬೆಂಬಲ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರ ನಡೆಸಿ, ಬೆಳಗಾವಿ ಜಿಲ್ಲೆಗೆ ದ್ರೋಹ ಮಾಡಿದವರಿಗೆ ಯಾವುದೇ ಕಾರಣದಿಂದ ಬೆಂಬಲ ನೀಡಬೇಡಿ, ಸ್ಥಳೀಯ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಪಂತ ಬಾಳೆಕುಂದ್ರಿ, ಮುತಗಾ, ಬೆಳಗಾವಿ ದಕ್ಷಿಣ ಕ್ಷೇತ್ರ ಮಜಗಾವಿ ಮತ್ತಿತರ ಕಡೆಗಳಲ್ಲಿ ಮತಯಾಚನೆ ನಡೆಯಿತು. ಎಲ್ಲ ಕಡೆ ಜನರು ಸ್ವಯಂ ಸ್ಫೂರ್ತಿಯಿಂದ ಮುಂದೆ ಬಂದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೇ ಮತ ನೀಡುತ್ತೇವೆ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸರಕಾರವೊಂದು ನಮ್ಮ ಕೈ ಹಿಡಿದಿದೆ. ನಮ್ಮ ಸಂಕಷ್ಟದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ನೆರವು ನೀಡಿದೆ ಎಂದು ತಿಳಿಸಿದರು.
ಮೊದಲು ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ದುರ್ಗಾದೇವಿ ಮಂದಿರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಆಶೀರ್ವಾದ ಪಡೆದ ಸಚಿವರು, ಸ್ಥಳೀಯರೊಂದಿಗೆ, ಈಚೇಗೆ ನಡೆದ ದೇವಸ್ಥಾನದ ವಾಸ್ತುಶಾಂತಿ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗಳ ಕುರಿತು ಚರ್ಚಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಹ ಜೊತೆಗಿದ್ದರು.

ಮುತಗಾ ಗ್ರಾಮದ ನೆಹರು ಗಲ್ಲಿಯಲ್ಲಿ ಲೋಕಸಭೆಯ ಚುನಾವಣೆಯ ಪ್ರಚಾರ ಕೈಗೊಂಡ ಸಚಿವರು, ಕಡ್ಡಾಯವಾಗಿ ಮತದಾನ ಮಾಡಿ, ಕಾಂಗ್ರೆಸ್ ಅಭ್ಯರ್ಥಿಗೇ ಮತ ನೀಡಿ ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ಮುಖಂಡರಾದ ನಾಗೇಶ ದೇಸಾಯಿ, ಶ್ಯಾಮ್ ಮುತಗೇಕರ್, ಮಾರುತಿ ಪೂಜಾರ, ರಾಯಣ್ಣ ಮಲ್ಲವ್ವಗೋಳ, ಪಿಂಟು ಮಲ್ಲವ್ವಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂತರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಜಗಾವಿಯಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು, ಮತ ಯಾಚಿಸಿದರು. ಜನರು ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು. ಕ್ಷೇತ್ರಕ್ಕೆ ಬೃಹತ್ ಯೋಜನೆಗಳನ್ನು ತರಲಾಗುವುದು. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಅವಕಾಶ ಸೃಷ್ಟಿಸಲಾಗುವುದು. ಉದ್ಯಮಗಳನ್ನು ಆರಂಭಿಸುವವರಿಗೆ ಪ್ರೋತ್ಸಾಹ, ಸಹಕಾರ ನೀಡಲಾಗುವುದು. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರ ಹಸ್ತದ ಗುರುತಿಗೇ ಮತ ನೀಡಿ ಎಂದು ಸಚಿವರು ಮನವಿ ಮಾಡಿದರು.
ಈ ಸಮಯದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ