Karnataka NewsLatest

*ಪ್ರಕರಣ ಮುಚ್ಚಿಡುವ ಪ್ರಶ್ನೆಯೇ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

ಬೆಳಗಾವಿಯಲ್ಲಿ ಬಾಣಂತಿಯರು ಹಸಿಗೂಸುಗಳ ಸಾವಿನ ಪ್ರಕರಣ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ (ಬಿಮ್ಸ್)‌ ಸಂಭವಿಸಿರುವ ಬಾಣಂತಿಯರು ಹಸಿಗೂಸುಗಳ ಸಾವಿನ ಪ್ರಕರಣವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬಿಮ್ಸ್‌ನಲ್ಲಿ ಬಾಣಂತಿಯರು, ಹಸಿಗೂಸುಗಳ ಸಾವಿನ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣ ಕುರಿತು ಈಗಾಗಲೇ ನಾನು ಅಧಿಕಾರಿಗಳ ಜೊತೆ ಮಾತನಾಡಿರುವೆ. ಯಾಕೆ ಸಮಸ್ಯೆಯಾಗಿದೆ, ಎಲ್ಲವನ್ನೂ ಕೂಡ ಚರ್ಚೆ ಮಾಡಿದ್ದೇನೆ ಎಂದರು.

ಯಾವ ಕಾರಣಕ್ಕೆ ಸಾವಿನ ಪ್ರಕರಣಗಳು ಸಂಭವಿಸಿವೆ. ಸಾವನ್ನ ತಡೆಯಲು ಯಾವ ಕ್ರಮಕೈಗೊಳ್ಳಬೇಕು. ಏನೆಲ್ಲ ಮಾಡಬೇಕು ಅದನ್ನ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ 54 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ಅಂಕಿ ಅಂಶ ಹೆಚ್ಚಾಗಿ ಕಾಣುತ್ತಾ ಇದೆ. ಕಾರವಾರ ಸೇರಿದಂತೆ ಅನೇಕ ಕಡೆಗಳಿಂದ ಆಸ್ಪತ್ರೆಗೆ ಬೆಳಗಾವಿಗೆ ಬರುತ್ತಾರೆ ಎಂದು ತಿಳಿಸಿದರು.

ಬಾಣಂತಿರು, ಹಸಿಗೂಸುಗಳ ಸಾವಿಗೆ ಬಹಳಷ್ಟು ಕಾರಣಗಳಿವೆ. ಬಳ್ಳಾರಿ ಪ್ರಕರಣಗಳಿಗೂ, ಬ್ರಿಮ್ಸ್ ಗೂ ಸಂಬಂಧ ಇಲ್ಲ. ಕಬ್ಬಿನಾಂಶ ಕೊರತೆ, ಪ್ರೀ ಮೆಚ್ಯುರ್‌ ಬೇಬಿ ಹೀಗೆ ಅನೇಕ ಕಾರಣಗಳಿವೆ. ಒಂದು ಲಕ್ಷ ಮಕ್ಕಳು ಹುಟ್ಟಿದರೆ 28 ಮಕ್ಕಳು ಅದರಲ್ಲಿ ತೀರಿಕೊಳ್ಳುತ್ತಿದ್ದಾರೆ. ಇಡೀ ದೇಶಕ್ಕೆ 6ನೇ ಅತ್ಯುತ್ತಮ ಆಸ್ಪತ್ರೆ ಎಂದು ಬಿಮ್ಸ್‌ ಪಾತ್ರವಾಗಿದೆ. ಬಾಣಂತಿಯರು, ಹಸಿಗೂಸುಗಳ ಸಾವಿಗೆ ಇಂಥದ್ದೇ ಕಾರಣ ಅಂತ ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button