ಪ್ರಗತಿವಾಹಿನಿ ಸುದ್ದಿ: ಪಂಚಮಸಾಲಿ ಟ್ರ್ಯಾಕ್ಟರ್ ರ್ಯಾಲಿಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಜಿಲ್ಲಾಡಳಿತ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಿರ್ಬಂಧ ಹೇರಬಾರದು, ಇದು ಪ್ರಜಾಪ್ರಭುತ್ವ. ಪಂಚಮಸಾಲಿ ಮೀಸಲಾತಿಗಾಗಿ ನಾನು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇನೆ ಎಂದರು.
ಈಗ ಕಬ್ಬಿನ ಸೀಜನ್, ಟ್ರ್ಯಾಕ್ಟರ್ ಓಡಾಡುತ್ತಿರುತ್ತವೆ. ಅಧಿವೇಶನ ವೇಳೆ ಯಾವುದೇ ಅಪಘಾತ, ದುರ್ಘಟನೆ ಆಗಬಾರದು ಅಂತಾ ಮುಂಜಾಗ್ರತಾ ಕ್ರಮ ಕೈಗೊಂಡಿರಬಹುದು ಎಂದು ಹೇಳಿದರು.
ನಾನು ಗುರುಗಳ ಜೊತೆ ಮಾತನಾಡಿದ್ದೇನೆ. ಇಂದು ಸಂಜೆ 4 ಗಂಟೆಗೆ ನಾನು ಸ್ವಾಮೀಜಿಗಳು, ಸಿ.ಸಿ.ಪಾಟೀಲ್, ಬೆಲ್ಲದ ಸೇರಿದಂತೆ ಎಲ್ಲರೂ ಸಭೆ ಮಾಡ್ತೀವಿ. ಎಲ್ಲರೂ ಸೇರಿ ಸಭೆ ಮಾಡಿ ನಿರ್ಣಯ ಕೈಗೊಳ್ಳುತ್ತೇವೆ. ಅಪಘಾತ, ದುರ್ಘಟನೆ ಆಗಬಾರದು ಎಂದು ಟ್ರ್ಯಾಕ್ಟರ್‌ಗಳಿಗೆ ನಿಷೇಧ ಹೇರಿರಬಹುದು. ಈ ಬಗ್ಗೆ ನಮಗೂ ನೋವಾಗಿದೆ, ನಾವು ಕರೆದು ಮಾತನಾಡುತ್ತೇವೆ
ನಾನು ಸ್ವಾಮೀಜಿ ಜೊತೆ ಹಾಗೂ ನಮ್ಮ ಸಮಾಜದ ಇತರ ಪಕ್ಷಗಳ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಇಂತಹ ಗುರುಗಳು ಸಿಕ್ಕಿದ್ದು ನಮ್ಮ ಪುಣ್ಯ. ನಾಳೆ ಸಮಾವೇಶದಲ್ಲಿ ನಾನು ಖಂಡಿತವಾಗಿ ಭಾಗಿಯಾಗುತ್ತೇನೆ. ನಾನು ಸಚಿವೆ ಇರುವುದರಿಂದ ವಿಧಾನಸಭೆ ಕಲಾಪದಲ್ಲಿ ಬಾವಿಗೆ ಇಳಿದು ಧರಣಿ ಮಾಡಕ್ಕಾಗಲ್ಲ. ವಿಧಾನಸಭೆಯಲ್ಲಿ ಯಾರಾದರೂ ವಿಷಯ ಪ್ರಸ್ತಾಪಿಸಿದಾಗ ಧ್ವನಿಯಾಗಿ ಇರ್ತೀನಿ. ನಾನೂ ಹಾಗೂ ಚನ್ನರಾಜ ಹಟ್ಟಿಹೊಳಿ ಧ್ವನಿಯಾಗಿ ಇರ್ತೀವಿ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ