
ಪಿಎಸ್ ಐ ಅನ್ನಪೂರ್ಣಗೆ ಅತ್ಯುನ್ನತ ಪದಕ ನೀಡಲು ಶಿಫಾರಸು
ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಹೊತ್ತೊಯ್ದು ಅತ್ಯಾಚಾರವೆಸಗಿ ಹತ್ಯೆಗೈದ ಕಾಮುಕನನ್ನು ಎನ್ ಕೌಂಟ್ ರನಲ್ಲಿ ಕೊಂದ ಪಿಎಸ್ ಐ ಅನ್ನಪೂರ್ಣ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಿಎಸ್ ಐ ಅನ್ನಪೂರ್ಣ ಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶ್ಲಾಘಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣದಲ್ಲಿ ಪಿಎಸ್ ಐ ಅನ್ನಪೂರ್ಣ ಅವರ ಕ್ರಮಕ್ಕೆ ಅಭಿನಂದಿಸುತ್ತೇನೆ. ಅವರ ನಡೆ ಬೇರೆ ಅಧಿಕಾರಿಗಳಿಗೆ ದಾರಿದೀಪವಾಗಲಿ ಎಂದರು.
ಇದೇ ವೇಳೆ ಪಿಎಸ್ ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಶಿಫಾರಸು ಮಾಡುತ್ತೇನೆ ಎಂದು ಹೇಳಿದರು.
ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಪ್ರಕರಣಗಳಲ್ಲಿ ಆರೋಪಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ನಾನು ಮೊದಲಿನಿಂದ ಪ್ರತಿಪಾದಿಸುತ್ತಾ ಬಂದಿದ್ದೇನೆ. ದೌರ್ಜನ್ಯಕ್ಕೆ ಒಳಗಾದವರಿಗೆ ತಕ್ಷಣ ನ್ಯಾಯ ಸಿಗುವಂತಾಗಬೇಕು ಎಂದರು.
ನಿಪ್ಪಾಣಿಯಲ್ಲಿ ಸರ್ಕಾರದಿಂದ ಕಾರ್ಯಕ್ರಮ
ನಿಪ್ಪಾಣಿಗೆ ಅಂಬೇಡ್ಕರ್ ಭೇಟಿ ನೀಡಿ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯವರು ಭೀಮ ಹೆಜ್ಜೆ ಹೆಸರಿನಲ್ಲಿ ಸಮಾವೇಶ ಮಾಡುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಶ್ರದ್ಧಾ, ಭಕ್ತಿಯಿಂದ ನಂಬಿದೆ. ನಿಪ್ಪಾಣಿಯಲ್ಲಿ ಕಾರ್ಯಕ್ರಮ ಆಯೋಜನೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಆಗಿದ್ದು, ಸರ್ಕಾರದಿಂದ ಕಾರ್ಯಕ್ರಮ ಮಾಡಲಾಗುವುದು ಎಂದರು.
ಜಾತಿ ಗಣತಿಗೆ ವಿರೋಧವಿಲ್ಲ
ಜಾತಿ ಗಣತಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಾತಿ ಗಣತಿಗೆ ನಮ್ಮ ವಿರೋಧ ಯಾವತ್ತೂ ಇಲ್ಲ. ವೀರಶೈವ- ಲಿಂಗಾಯತರನ್ನು ಪ್ರತ್ಯೇಕ ಮಾಡಿ ಗಣತಿ ಮಾಡಲಾಗಿದೆ. ಅದನ್ನು ಸರಿಪಡಿಸಿ ಇನ್ನೊಮ್ಮೆ ಗಣತಿಯನ್ನು ಇನ್ನೊಮ್ಮೆ ಮಾಡಬೇಕು. ಎಲ್ಲಾ ಜಾತಿಯಲ್ಲಿ ಜನರು ಹೆಚ್ಚಾಗಿದ್ದಾರೆ. ಅದರಂತೆ ನಮ್ಮ ವೀರಶೈವ, ಲಿಂಗಾಯತರಲ್ಲಿಯೂ ಜನ ಹೆಚ್ಚಾಗಿದ್ದಾರೆ. ಹೀಗಾಗಿ ವೀರಶೈವ- ಲಿಂಗಾಯತರು ಒಡೆದು ಹೋಗಿದ್ದು ಅಂಕಿ ಅಂಶ ಕಡಿಮೆ ಕಾಣಿಸುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.