*ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಕ್ಷೇತ್ರದ ಜನತೆಯಿಂದ ಕೃತಜ್ಞತೆಯ ಹೃದಯಸ್ಪರ್ಶಿ ಸನ್ಮಾನ*


ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕೆರೆ ತುಂಬಿಸುವ ಬೃಹತ್ ಯೋಜನೆ ಮಂಜೂರು ಮಾಡಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ಶನಿವಾರ ತಮ್ಮ ಕ್ಷೇತ್ರದ ಶಾಸಕರೂ ಆಗಿರುವ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಕೃತಜ್ಞತೆಯಿಂದ ಹೃದಯಸ್ಪರ್ಶಿ ಸನ್ಮಾನ ನೆರವೇರಿಸಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರ ಗೃಹಕಚೇರಿಗೆ ಆಗಮಿಸಿದ ವಿವಿಧ ಗ್ರಾಮಗಳ ಸಾವಿರಾರು ಜನರು ಹೆಬ್ಬಾಳಕರ್ ಅವರನ್ನು ಸನ್ಮಾನಿಸಿ, ನಿಮ್ಮಿಂದಾಗಿ ಗ್ರಾಮೀಣ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಇತಿಹಾಸದಲ್ಲೇ ಎಂದೂ ಕಾಣದ ಅಭಿವೃದ್ಧಿ ಕಾಣುತ್ತಿದ್ದೇವೆ. ಈಗ ಸಚಿವರಾದ ನಂತರ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಕ್ಕಿದೆ. ನೀವು ಮುಂದೆ ಹೋಗಿ, ನಾವು ನಿಮ್ಮ ಜೊತೆಗಿದ್ದೇವೆ ಎಂದು ಭರವಸೆಯ ಹಾರೈಕೆ ಮಾಡಿದರು.

ಈ ವೇಳೆ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ, ಇಂತಹ ದೊಡ್ಡ ಕೆಲಸ ತಂದಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಚಿವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ ಯೋಜನೆ ತಂದಿದ್ದಾರೆ. ಅವರ ಇಚ್ಚಾಶಕ್ತಿಯೇ ಇದಕ್ಕೆ ಕಾರಣವಾಗಿದೆ. ಈಗ ಕೆರೆ ತುಂಬಿಸುವುದಕ್ಕಾಗಿಯೇ 810 ಕೋಟಿ ರೂ ಯೋಜನೆ ಮಂಜೂರು ಮಾಡಿಸಿದ್ದಾರೆ. ಇನ್ನೂ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ದೊಡ್ಡ ಉಪಕಾರವಾಗಿದೆ ಎಂದರು.
ನೀವು ಮುಂದೆ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ. ನಿಮ್ಮ ಜೊತೆಗೆ ನಾವಿದ್ದೇವೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮೃಣಾಲ ಹೆಬ್ಬಾಳಕರ್ ಅವರಿಗೆ ಟಿಕೆಟ್ ನೀಡಬೇಕು. ಇದರಿಂದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂದೂ ಅವರು ಹೇಳಿದರು.
ಮುಖಂಡ ಮಲ್ಲೇಶ ಚೌಗಲೆ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ನಿರಂತರ ಅಭಿವೃದ್ಧಿಯಾಗುತ್ತಿದೆ. ಸಚಿವರಾದ ನಂತರ ಅಭಿವೃದ್ಧಿಗೆ ಇನ್ನಷ್ಟು ವೇಗ ಬಂದಿದೆ ಎಂದರು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮೃಣಾಲ ಹೆಬ್ಬಾಳಕರ್ ಅವರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಮಾತನಾಡಿ, ಬಿಜಿಪಿಯ ಭ್ರಷ್ಟಾಚಾರದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರಕಾರ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ ಯೋಜನೆ ತಂದಿದ್ದಾರೆ. ಈಗ ಬಂದಿರುವ ಕೆರೆ ತುಂಬುವ ಯೋಜನೆ ವಿಶೇಷವಾಗಿದ್ದು, ಗ್ರಾಮೀಣ ಭಾಗದ ಇತಿಹಾಸದಲ್ಲೇ ಇಂತಹ ಯೋಜನೆ ಬಂದಿರಲಿಲ್ಲ. ನಿಮ್ಮ ಸಹಕಾರ ನಿರಂತರ ಇರಲಿ ಎಂದು ಕೋರಿದರು.ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್,
ನಿನ್ನೆ ಯುವರಾಜ ಕದಂ ಅವರು ನಮ್ಮ ಸ್ವಪ್ನ ಸಾಕಾರವಾಗಿದೆ, ನಿಮಗೆ ಕೃತಕ್ಷತೆ ಸಲ್ಲಿಸಲು ಬರುತ್ತಿದ್ದೇವೆ ಎಂದರು. ನಾನು ನನಗೆ ಸನ್ಮಾನ ಬೇಡ, ಜನರಿಗೆ ನಾನು ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದೆ. ಆದರೆ ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ನೀವೆಲ್ಲ ಬಂದಿದ್ದೀರಿ. ನಮ್ಮೆಲ್ಲರ ಸಹಕಾರದಿಂದ ನಾನು ಮಂತ್ರಿಯಾಗಿದ್ದೇನೆ. ನಿಮಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ಅವಕಾಶ ಸಿಕ್ಕಿದೆ. ಹಾಗಾಗಿ
ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಮಾಡಬೇಕಾಗಿದೆ. ಗೃಹಲಕ್ಷ್ಮೀ ಯೋಜನೆ ಸಮರ್ಪಕ ಜಾರಿ ನಂತರ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗಿದೆ. ಈಗಾಗಲೆ ಸಾಕಷ್ಟು ಯೋಜನೆ ಮಂಜೂರಾಗಿದ್ದು ಅವುಗಳ ಟೆಂಡರ್ ಪ್ರಕ್ರಿಯೆ ನಡೆದು ಕೆಲಸ ಆರಂಭವಾಗಬೇಕಿದೆ. ನಮಗೆ ಜನರಲ್ಲಿ ಗೌರವ, ದೇವರಲ್ಲಿ ಭಕ್ತಿ ಇದೆ. ಕೇವಲ ಮಂದಿರವಲ್ಲ, ರಾಮರಾಜ್ಯವಾಗಬೇಕೆನ್ನುವ ಕನಸು ನಮ್ಮದು. ನೋಟು ಅಮಾನ್ಯೀಕರಣ, ಜಿಎಸ್ ಟಿ, ಕೊರೋನ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಇವುಗಳಿಂದ ಜನರನ್ನು ರಕ್ಷಿಸಲು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ಪಂಚ ಗ್ಯಾರಂಟಿ ಘೋಷಣೆ ಮಾಡಿದ್ದಷ್ಟೇ ಅಲ್ಲ, ಕೇಂದ್ರ ಸರಕಾರದ ಸಹಕಾರವಿಲ್ಲದೆ ಸಮರ್ಪಕವಾಗಿ ಜಾರಿಗೊಳಿಸಲಾಗಿದೆ ಎಂದೂ ಅವರು ತಿಳಿಸಿದರು.

ನಿಮ್ಮೆಲ್ಲರ ವಿಶ್ವಾಸ ನಮ್ಮ ಮೇಲಿದೆ. ನಾನು ರಾಜ್ಯದ ಎಲ್ಲೇ ಇದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಯೋಚನೆಯಲ್ಲೇ ಇರುತ್ತೇನೆ. ನಿರಂತರ ದೂರವಾಣಿ ಸಂಪರ್ಕ ಮಾಡುತ್ತ ಕ್ಷೇತ್ರದ ಸಮಸ್ಯೆಗೆ ಸದಾ ಸ್ಪಂದಿಸುತ್ತಿರುತ್ತೇನೆ ಎಂದ ಅವರು, ಮೃಣಾಲ ಹೆಬ್ಬಾಳಕರ್ ಅವರನ್ನು ಲೋಕಸಭೆಗೆ ನಿಲ್ಲಿಸಬೇಕೆಂದು ನೀವೆಲ್ಲ ಆಗ್ರಹಿಸಿದ್ದೀರಿ. ಅವನ ಹಣೆ ಬರಹ ಏನಿದೆ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಹೈಕಮಾಂಡ್ ಈ ಕುರಿತು ನಿರ್ಧರಿಸುತ್ತದೆ. ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಲು ನಿಮ್ಮ ಸಹಕಾರ ಇರಲಿ ಎಂದು ವಿನಂತಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ, ಮಲ್ಲೇಶ ಚೌಗಲೆ, ಮನು ಬೆಳಗಾಂವಕರ್, ಸಾತೇರಿ ಬೆಳವಟ್ಕರ್, ಬಾಳು ದೇಸೂರಕರ್, ಕಲ್ಲಪ್ಪ ಕಡೋಲ್ಕರ್, ಪದ್ಮರಾಜ ಪಾಟೀಲ, ಪುಂಡಲೀಕ ಬಾಂದುರ್ಗೆ, ಅಮೋಲ್ ಬಾತಖಾಂಡೆ, ಅಶೋಕ ಚೌಗಲೆ, ಎಸ್,ಎಲ್,ಚೌಗಲೆ, ಯಲ್ಲಪ್ಪ ಕಲಕಾಮ್ಕರ್, ವಿಠ್ಠಲ ದೇಸಾಯಿ, ಗಜಾನನ ಕಾಕತ್ಕರ್, ಅಶೋಕ ಕಾಂಬ್ಳೆ, ರಘು ಖಾಂಡೇಕರ್, ಅರವಿಂದ ಪಾಟೀಲ, ಸಿದ್ದಪ್ಪ ಛತ್ರಿ, ಮಾರುತಿ ಡುಕರೆ, ಮಲ್ಲಪ್ಪ ಲೋಕೂರ್, ಜಿ.ಕೆ.ಪಾಟೀಲ, ರಘುನಾಥ ಪಾಟೀಲ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ