*ಬಿಜೆಪಿಗರಿಂದ ಕೋಮು ಸೌಹಾರ್ದ ಕದಡುವ ಕೆಲಸ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಜನಪ್ರಿಯತೆಯನ್ನು ಸಹಿಸದ ಬಿಜೆಪಿ ನಾಯಕರು ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿದ್ದು, ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.
ನೀರೆ ಗ್ರಾಮ ಪಂಚಾಯತ್ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರವನ್ನ ಹಿಂದು ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸರ್ಕಾರದ ವಿರುದ್ಧ ಆರೋಪ ಮಾಡಲು ವಿಪಕ್ಷಗಳಿಗೆ ಬೇರೆ ವಿಚಾರ ಇಲ್ಲ. ರಾಜ್ಯ ಸರ್ಕಾರ ಬೀಳುತ್ತದೆ, ಗ್ಯಾರಂಟಿ ಯೋಜನೆಗಳು ಜಾರಿ ಆಗಲ್ಲ, ಒಂದು ವೇಳೆ ಜಾರಿಯಾದರೂ ನಾಲ್ಕು ತಿಂಗಳಿಗೆ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಅಪಪ್ರಚಾರ ಮಾಡಲಾಯಿತು. ರಾಜ್ಯದ ಜನತೆಗೆ ನಮ್ಮ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ
ಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ಧ ಎಫ್ ಐಆರ್ ದಾಖಲಿಸಿರುವುದಕ್ಕೆ ವಿಪಕ್ಷಗಳು ಖಂಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ದ್ವೇಷಪೂರಿತ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲು ವಿಧಾನಸಭೆಯಲ್ಲಿ ಶಾಸನ ತರಲಾಗಿದೆ. ದ್ವೇಷ ಪೂರಿತ ಭಾಷಣವನ್ನು ಬಿಜೆಪಿ- ಕಾಂಗ್ರೆಸ್ ನಾಯಕರು ಯಾರೇ ಆಗಲಿ ಕ್ರಮ ಕೈಗೊಳ್ಳಲಾಗುತ್ತದೆ. ನಾಳೆ ಕಾಂಗ್ರೆಸ್ಸಿಗರು ಮಾತನಾಡಿದರು ಕ್ರಮ ಆಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ!? ಶಾಂತಿಯನ್ನು ಕದಡುವ ಕೆಲಸ ಮಾಡಿದರೆ ಖಂಡಿತ ಎಫ್ ಐ ಆರ್ ಆಗುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಧರ್ಮಸ್ಥಳ ನಮ್ಮೆಲ್ಲರ ಆರಾಧ್ಯ ಸ್ಥಳ
ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ, ಧರ್ಮಸ್ಥಳ ನಮ್ಮೆಲ್ಲರ ಆರಾಧ್ಯ ಸ್ಥಳ, ಬಹಳಷ್ಟು ಭಕ್ತಿಯಿಂದ ನಡೆದುಕೊಳ್ಳುವ ಸ್ಥಳ. ಏನೆಲ್ಲಾ ಷಡ್ಯಂತ್ರ ಆಗಿದೆ, ಇದೆಲ್ಲಾ ಹೊರ ಬರುತ್ತೆ ಸ್ವಲ್ಪ ಕಾಯಿರಿ. ಎಸ್ಐಟಿ ತನ್ನ ಕೆಲಸ ಮಾಡುತ್ತಿದೆ. ಇದನ್ನು ಸಾರ್ವಜನಿಕವಾಗಿ ಹೇಳಲು ಬರಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲಾ ಸತ್ಯಾಸತ್ಯತೆ ಹೊರಬರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.