Cancer Hospital 2
Beereshwara 36
LaxmiTai 5

*ಕನ್ನಡ ರಾಜ್ಯೋತ್ಸವ: ಉಡುಪಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಲಕ್ಷ್ಮೀ ಹೆಬ್ಬಾಳ್ಕರ್*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ; ಉಡುಪಿ: ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಗೌರವ ಶ್ರೀರಕ್ಷೆ ಸ್ವೀಕರಿಸಿದರು. ಈ ಸಮಯದಲ್ಲಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಸೇರಿದಂತೆ ಶಾಲಾ‌ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಪೂರೈಸಿರುವ ಈ​ ಸಂದರ್ಭದಲ್ಲಿ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡದ ಮೊದಲ ಕೃತಿಯಾದ ಕವಿರಾಜ ಮಾರ್ಗದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿ ನದಿಯವರೆಗೂ ತನ್ನ ಮೇರೆಗಳನ್ನು ಹೊಂದಿತ್ತು.

ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ನಾಡಿನ ಪರಿಪೂರ್ಣ ಪರಿಕಲ್ಪನೆ ಸಕಾರಾತ್ಮಕವಾಗಿದ್ದು, 1956 ನವೆಂಬರ್ 01 ರಂದು ಭಾಷಾವಾರು ಪ್ರಾಂತ್ಯಗಳು ರಚನೆಯೊಂದಿಗೆ ವಿಶಾಲ ಮೈಸೂರು ರಾಜ್ಯ ಉದಯವಾಯಿತು.

ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ ಪ್ರಯತ್ನದ ಫಲವಾಗಿ 1973 ರ ನವೆಂಬರ್ 01 ರಂದು ಕರ್ನಾಟಕ ಎಂದು ಮರು ನಾಮಕರಣಗೊಳ್ಳುವುದರೊಂದಿಗೆ ಈ ನಮ್ಮ ನಾಡು ಕನ್ನಡಿಗರನ್ನು ಭಾವನಾತ್ಮಕವಾಗಿ ಬೆಸೆದಿರುವುದು 50 ವಸಂತಗಳಿಗೆ ಸಾಕ್ಷಿಯಾಗಿದೆ. 

ಕನ್ನಡ ನಾಡು ಭೌಗೋಳಿಕವಾಗಿ ಬಹುತ್ವವನ್ನು ಹೊಂದಿದ್ದರೂ, ಸಾಮುದಾಯಿಕವಾಗಿ ಐಕ್ಯತೆ ಉಳಿಸಿಕೊಂಡು ಬಂದಿದೆ. ಕನ್ನಡ ಭಾಷೆಯ ಮಾಧುರ್ಯವನ್ನು ಅನೇಕ ವಚನಕಾರರು, ದಾಸರು, ಕವಿ ಪುಂಗವರು, ಹಾಡಿ ಹೊಗಳಿದ್ದಾರೆ.

ನಂದಳಿಕೆ ಲಕ್ಷ್ಮೀನಾರಾಯಣ, ಗುಲ್ವಾಡಿ ವೆಂಕಟರಾಯರು, ಕೆ.ಶಿವರಾಮ ಕಾರಂತ, ಹಾವಂಜೆ ಲಕ್ಷ್ಮೀನಾರಾಯಣಪ್ಪಯ್ಯ, ಹಟ್ಟಿಯಂಗಡಿ ನಾರಾಯಣರಾಯರು, ಐರೋಡಿ ಶಿವರಾಮಯ್ಯ, ಮೊಗೇರಿ ಗೋಪಾಲಕೃಷ್ಣ ಅಡಿಗ, ಕಡೆಕಾರು ರಾಜಗೋಪಾಲಕೃಷ್ಣರಾಯ, ಎಸ್.ಯು ಪಣಿಯಾಡಿ, ಕೊರಡ್ಕಲ್ ಶ್ರೀನಿವಾಸರಾವ್, ಪಾವೆಂ ಆಚಾರ್ಯ, ಪಿ ಗುರುರಾಜ ಭಟ್, ಮಟಪಾಡಿ ರಾಜಗೋಪಾಲಾಚಾರ್ಯ ಮುಂತಾದ ಅನೇಕ ಕವಿಗಳು ಸೇರಿದಂತೆ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಿಗೆ ಈ ಜಿಲ್ಲೆಯ ಕೊಡುಗೆ ಅನನ್ಯವಾಗಿದೆ. 

   ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ ಬೆಳೆಸುವ ಕಾಯಕದಲ್ಲಿಯೂ ಜಿಲ್ಲೆಯ ಕೊಡುಗೆ ಅಪಾರ. ನಾಡು ಹರಿದು ಹಂಚಿ ಹೋಗಿದ್ದ ಅಂದಿನ ದಿನಗಳಲ್ಲಿ ಕನ್ನಡ ನಾಡಿನಾದ್ಯಂತ ಬೇರೆ ಬೇರೆ ಭಾಗಗಳಿಗೆ ಹೋಗಿ ಬೆನಗಲ್ ರಾಮರಾಯರು, ಕೋಟ ಶಿವರಾಮ ಕಾರಂತರು, ಪಂಜೆ ಮಂಗೇಶರಾಯರು ಸೇರಿದಂತೆ ಮತ್ತಿತರ ಹಿರಿಯರು ಕನ್ನಡ ಕಹಳೆಯನ್ನು ರಾಜ್ಯಾದ್ಯಂತ ಮೊಳಗಿಸಿದರು. 

ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿ ರಾಷ್ಟ್ರೀಯ ಘನತೆಯನ್ನು ಎತ್ತಿ ಹಿಡಿಯುವ, ಅಂತಾರಾಷ್ಟ್ರೀಯ ಗುಣಮಟ್ಟದ ಶ್ರೇಷ್ಠ ಕೃತಿಗೆ 1965 ರಿಂದ 2022 ರ ವರೆಗೆ ಪ್ರಧಾನ ಮಾಡಲಾಗಿದ್ದ 62 ಜ್ಞಾನಪೀಠ ಪ್ರಶಸ್ತಿಗಳಲ್ಲಿ ಕನ್ನಡದ ಸೃಜನಶೀಲ ಸಾಹಿತ್ಯ ರಚಿಸಿದ ಎಂಟು ಸಾಹಿತಿಗಳು ಈ ಗೌರವಕ್ಕೆ ಪಾತ್ರರಾಗಿದ್ದು, ಪ್ರಶಸ್ತಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕನ್ನಡವಿದೆ.

  ಭಾಷೆ ಸಾಹಿತ್ಯವನ್ನು ನಿರ್ಮಾಣ ಮಾಡುತ್ತದೆ. ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುತ್ತದೆ. ಸಂಸ್ಕೃತಿ ಎಂಬುದು ಒಬ್ಬ ಮನುಷ್ಯನ ಸೃಷ್ಟಿಯಲ್ಲ. ಅದು ಸಮಾಜದ ಸಮೂಹ ಸೃಷ್ಟಿ. ಇದನ್ನು ಮನಗಂಡು ನಾವು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹೋರಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. 

     ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಏಳಿಗೆ ಇಲ್ಲ ಎಂಬ ಭೀತಿ ನಿರಾಧಾರವಾದುದು. ಕನ್ನಡ ಶಾಲೆಗಳಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಓದಿದ ಸರ್.ಎಂ ವಿಶ್ವೇಶ್ವರಯ್ಯ, ಪ್ರೊ. ಸಿ.ಎನ್.ಆರ್ ರಾವ್ ರವರು ಭಾರತ ರತ್ನಗಳಾಗಿ ವಿಶ್ವವಿಖ್ಯಾತರಾಗಿರುವುದು ನಮ್ಮ ಕಣ್ಣ ಮುಂದಿದೆ.

  ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಾಡಿನ ಯುವ ಸಮುದಾಯದ ಮೇಲಿದೆ. ಭಾಷೆ ನವ ಚೈತನ್ಯವನ್ನು ಮೂಡಿಸಿಕೊಂಡು ಬೆಳೆಯಬೇಕಾದರೆ ಅದು ಯುವ ಸಮುದಾಯದಿಂದ ಮಾತ್ರ ಸಾಧ್ಯ. ಯುವ ಜನರು ತಮ್ಮ ದೈನಂದಿನ ಜೀವನದಲ್ಲಿ ಕನ್ನಡ ಬಳಸುವುದರಿಂದ ಮಾತ್ರ ಸಾಧ್ಯ.          

      ನಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷೆಯೊಂದೇ ಇಲ್ಲ. ಸ್ಥಳೀಯ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ ಮತ್ತಿತರ ಭಾಷೆಗಳಿವೆ. ಇವೆಲ್ಲವನ್ನು ಬೇರೆ ಎಂದು ನಾವು ಎಂದೂ ಭಾವಿಸಿಯೇ ಇಲ್ಲ. ಈ ಅಚ್ಚ ಕನ್ನಡದ ಜಿಲ್ಲೆಯಲ್ಲಿ ಯಾರನ್ನೂ “ಇವನಾರವ ಇವನಾರವ ಎನ್ನದೇ” ಅಣ್ಣ ಬಸವಣ್ಣ ಹೇಳಿದಂತೆ“ಇವ ನಮ್ಮವ-ಇವ ನಮ್ಮವ’ ಎಂದು ಕೊಂಡಿದ್ದೇವೆ.  

ತಾಳಮದ್ದಳೆಯಲ್ಲಿ ರೂಪುಗೊಳ್ಳುವ ಸಂಭಾಷಣೆಗೆ ಕಲಾವಿದರೆ ಸ್ವಯಂ ಪ್ರತಿಭೆಯಿಂದ ಸೃಷ್ಟಿಸಿ, ಬರವಣಿಗೆಯಿಲ್ಲದೇ ಒಬ್ಬರ ಬಾಯಿಂದ  ಪರಿಚಯಿಸಿ, ಮೌಖಿಕ ಸಾಹಿತ್ಯ ರಚಿಸಿದ್ದಾರೆ. ಯಕ್ಷಗಾನ ಪ್ರಸಂಗ ಕರ್ತರು ತಮ್ಮ ಹೆಸರನ್ನು ಬಹಿರಂಗಪಡಿಸದೇ ಕನ್ನಡದಲ್ಲಿ 5,000 ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಇವುಗಳು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅಮೋಘ ಕೊಡುಗೆಯೆಂದರೆ ತಪ್ಪಾಗಲಾರದು. 

   ದೇಶದ ಭೂಪಟದಲ್ಲಿ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರ ತನ್ನದೇ ಆದ ಮಹತ್ವವನ್ನು ಹೊಂದುವ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿ, ನಮ್ಮ ಜಿಲ್ಲೆಯು ಮುಂಚೂಣಿಯಲ್ಲಿ ಇದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. 

    ಜಿಲ್ಲೆಯು ನಿತ್ಯ ಉತ್ಸವಗಳ ನಾಡು. ಮಳೆಗಾಲದಲ್ಲಿ ಎರಡು ಮೂರು ತಿಂಗಳು ಹೊರತುಪಡಿಸಿ, ಉಳಿದ ದಿನಗಳಲ್ಲಿ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಯಕ್ಷಗಾನವು ಜಿಲ್ಲೆಯಲ್ಲಿ ಬಹು ಬಲವಾಗಿ ಬೀಡು ಬಿಟ್ಟಿರುವುದರ ಜೊತೆಗೆ ಸಂಗೀತ, ಚಿತ್ರಕಲೆ, ನಾಟ್ಯ, ನಾಟಕ, ಸಾಹಿತ್ಯ, ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿವೆ. 

    ಜಿಲ್ಲೆಯ ರಮಣೀಯ ಪ್ರಕೃತಿ ಸೌಂದರ್ಯ, ಕಡಲ ಕಿನಾರೆಗಳು, ಹಳ್ಳ-ಕೊಳ್ಳಗಳು, ಧಾರ್ಮಿಕ ಕ್ಷೇತ್ರಗಳು, ಸುದೀರ್ಘವಾದ ಹಾಗೂ ಅತ್ಯಂತ ವೈವಿಧ್ಯವಾದ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯನ್ನು ತುಂಬಿರುವ ಉಡುಪಿ ಜಿಲ್ಲೆ, ಇಲ್ಲಿನ ಐತಿಹಾಸಿಕ ಸಂಸ್ಕೃತಿ, ಭಾಷೆ, ವೈವಿಧ್ಯತೆ, ಜನಪದ ಆಚರಣೆ, ನಂಬಿಕೆಗಳು, ಇಲ್ಲಿನ ಪರಿಸರ ಬಹು ಹಿಂದಿನಿಂದಲೂ ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಲೇ ಬಂದಿದೆ. ಇದಕ್ಕನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ಧಿಗಳನ್ನು ಕೈಗೊಳ್ಳಲಾಗುತ್ತಿದೆ. 

  ನಾಡಿನ ನೆಲ, ಜಲ, ಭಾಷೆಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳದೇ ನಾಡಿನ ಹಿತರಕ್ಷಣೆ ಮಾಡುವ ಜವಾಬ್ದಾರಿ ಹೊಣೆಗಾರಿಕೆ ನಮ್ಮ ಮೇಲಿದೆ. ಇದಕ್ಕೆ ಕನ್ನಡಿಗರೆಲ್ಲರ ಸಹಕಾರ, ಒಗ್ಗಟ್ಟು ಮುಖ್ಯವಾಗಿದೆ. 

   ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಿ 1 ನೇ ನವೆಂಬರ್ 2023 ಕ್ಕೆ 50 ವರ್ಷ ಪೂರ್ಣಗೊಳ್ಳುವ ಶುಭ ಸಂದರ್ಭದಲ್ಲಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ನಾಮದೊಂದಿಗೆ ವರ್ಷಪೂರ್ತಿ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡುನುಡಿಗೆ ಸಂಬಂಧಿಸಿದಂತೆ ಹಾಗೂ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. 

ವಿವಿಧ ಸಂಸ್ಕೃತಿ, ಭಾಷೆ ವೈವಿಧ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರಾಂತ್ಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂಬ ಕನಸು ಮಹಾತ್ಮ ಗಾಂಧೀಜಿಯವರದ್ದಾಗಿತ್ತು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು,ಸ್ಥಳೀಯ ಭಾಷೆಯ ಮೂಲಕ ಆಡಳಿತ ನಡೆಸಬೇಕೆಂಬುದು ಅವರ ಆಶಯವೂ ಆಗಿತ್ತು. ಅದರಂತೆ ನಮ್ಮ ಸರ್ಕಾರ ರಾಜ್ಯದ ಆಡಳಿತ ಹಾಗೂ ಶಿಕ್ಷಣವನ್ನು ಕನ್ನಡದಲ್ಲಿ ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ. 

ಪ್ರಕೃತಿ ಏರುಪೇರುಗಳಿಂದಾಗಿ ವಾಡಿಕೆ ಮಳೆ ಬಾರದೇ ರಾಜ್ಯದ 220ಕ್ಕೂ ಹೆಚ್ಚುತಾಲೂಕುಗಳಲ್ಲಿ ಮಳೆಯು ಕುಂಠಿತವಾಗಿ ಬರದ ಛಾಯೆ ಕಾಣಿಸುತ್ತಿದೆ. ತಾಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಿ, ಬರ ನಿರ್ವಹಣೆಗೆ ಮುಂದಾಗಲಾಗುವುದು. ನಮ್ಮ ರೈತರು ನೀರು ಸಂರಕ್ಷಣೆ, ಮಳೆ ಕೊಯ್ಲು, ಜಲ ಮರು ಸಂರಕ್ಷಣೆ, ವನ ಸಂರಕ್ಷಣೆಗೆ ಒತ್ತು ನೀಡಬೇಕು.

         ಶಕ್ತಿ ಯೋಜನೆಯು ಮಹಿಳೆಯರ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಠಿ ನೀಡಿದ್ದು, ಪ್ರತಿದಿನ ಸರಾಸರಿ 50 ರಿಂದ 60 ಲಕ್ಷ ಮಹಿಳೆಯರಿಗೆ ಇದರಿಂದ ಅನುಕೂಲವಾಗುತ್ತಿದೆ.

  ಗೃಹಜ್ಯೋತಿಯ ಮೂಲಕ ಪ್ರತಿಯೊಂದು ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈವರೆಗೆ 1.49 ಕೋಟಿ ಗ್ರಾಹಕರು ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ.

   ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ 5 ಕೆ.ಜಿ ಅಕ್ಕಿಯ ಬದಲಿಗೆ 1.04 ಕೋಟಿ ಕುಟುಂಬಗಳು ನಗದು ಸೌಲಭ್ಯ ಪಡೆಯುತ್ತಿವೆ. ಉಳಿದ ಕುಟುಂಬಗಳಿಗೆ ಶೀಘ್ರದಲ್ಲಿಯೇ ಹಣ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

    ಗೃಹಲಕ್ಷ್ಮೀ ಯೋಜನೆಯ ಮೂಲಕ ಮಾಸಿಕ ರೂ. 2000 ಹಣವನ್ನು ಕುಟುಂಬದ ಯಜಮಾನಿಯರಿಗೆ ವರ್ಗಾಯಿಸಲು ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಯೋಜನೆಗೆ ಆಗಸ್ಟ್ 30 ರಂದು ಚಾಲನೆ ನೀಡಲಾಗಿದೆ. ಈಗಾಗಲೇ 1.08 ಕೋಟಿ ಕುಟುಂಬಗಳ ಯಜಮಾನಿಯರು ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.

    ಗೃಹಲಕ್ಷ್ಮೀಯೋಜನೆಯಡಿ ನೀಡಲಾಗುವ 2000 ರೂ. ಮಾಸಿಕ ಸಹಾಯಧನ ಸೌಲಭ್ಯವನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ನೀಡಲು ಅನುಮೋದನೆ ನೀಡಲಾಗಿದೆ.

   ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಾ ಪಡೆದವರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲು ಉದ್ದೇಶಿಸಲಾಗಿರುವ ಯುವನಿಧಿ ಯೋಜನೆಯು 2022-23 ರ ಶೈಕ್ಷಣಿಕ ವರ್ಷ ಅಂತ್ಯಗೊಂಡ 6 ತಿಂಗಳ ನಂತರ ಜಾರಿಯಾಗಲಿದೆ. 

 ಶೋಷಿತ ವರ್ಗದ ಶ್ರೇಯೋಭಿವೃದ್ಧಿಗೆ ಪಿ.ಟಿ.ಸಿ.ಎಲ್ ಕಾಯಿದೆಗೆ ಮಾಡಲಾಗಿರುವ ತಿದ್ದುಪಡಿಯಿಂದಾಗಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಹಂಚಿಕೆಯಾದ ಭೂಮಿಯ ಅಕ್ರಮ ಪರಭಾರೆ ವಿರುದ್ಧ ದೂರು ನೀಡಲು ಯಾವುದೇ ಕಾಲಮಿತಿ ಇರುವುದಿಲ್ಲ.

    ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೃಷಿ ಭಾಗ್ಯ ಅನುಗ್ರಹ ಯೋಜನೆ, ವಿದ್ಯಾಸಿರಿ, ಅಲ್ಪಸಂಖ್ಯಾತ ವಿದಾರ್ಥಿಗಳಿಗೆ ಸ್ಥಗಿತಗೊಂಡಿರುವ ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಯೋಜನೆಗಳನ್ನು ಮುಂದುವರೆಸಲಾಗಿದೆ. 

ರಾಜ್ಯದಾದ್ಯಂತ 40 ಕೋಟಿ ರೂ. ವೆಚ್ಚದಲ್ಲಿ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಯ ಉದ್ಧೇಶದಿಂದ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ.

ರಾಜ್ಯದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

  ರಾಜ್ಯದಲ್ಲಿ ಸಮೃದ್ಧ ಹಸಿರು ಮತ್ತು ಸ್ವಚ್ಛ ಪರಿಸರವನ್ನು ತರಲು, ನೈಸರ್ಗಿಕ ಅನಿಲದ ಬಳಕೆಯನ್ನು ಹೆಚ್ಚಿಸಲು ಅನಿಲ ಆಧಾರಿತ ಆರ್ಥಿಕತೆಯ ಅಭಿವೃದ್ಧಿಗಾಗಿ ನಗರ ಅನಿಲ ವಿತರಣಾ ಜಾಲದ ಅಭಿವೃದ್ಧಿ ರಾಜ್ಯ ನೀತಿಗೆ ಅನುಮೋದನೆ ನೀಡಲಾಗಿದೆ. 

 30,000 ಕ್ಕಿಂತ ಕಡಿಮೆ ಜನಸಂಖ್ಯೆಯಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎನ್.ಜಿ.ಟಿ ಪರಿಸರ ಪರಿಹಾರ ನಿಧಿಯಡಿ ಒಟ್ಟು 110 ಮಲ ತ್ಯಾಜ್ಯ ಸಂಸ್ಕರಣಾ ಸ್ಥಾವರಗಳನ್ನು 400  ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

     ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಯು 4418 ಮಿ.ಮೀ ಇದ್ದರೆ, 3332 ಮೀ.ಮಿ ರಷ್ಟು ಮಳೆಯಾಗಿ ಶೇ. 25 ಮಳೆಯ ಕೊರತೆಯಾಗಿದೆ. ಈಗಾಗಲೇ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳನ್ನು ಪೂರ್ಣ ಬರ ಪೀಡಿತ ಹಾಗೂ ಬ್ರಹ್ಮಾವರ ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಕಾರ್ಕಳದಲ್ಲಿ  4103 ಹೆ., ಹೆಬ್ರಿಯಲ್ಲಿ  1283.00 ಹೆ. ಹಾಗೂ ಬ್ರಹ್ಮಾವರ ತಾಲೂಕಿನ 8551.00 ಹೆ. ಒಟ್ಟಾರೆ 13937.00 ಹೆ. ಭತ್ತದ ಬೆಳೆ ಹಾನಿ ಅಂದಾಜಿಸಿದ್ದು, 11.85 ಕೋಟಿ ರೂ. ಪರಿಹಾರ ಅನುದಾನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 

      ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು, ಬಜೆ ಡ್ಯಾಂ ಹೂಳು ತೆಗೆಯಲು ಟೆಂಡರ್ ಕರೆಯಲಾಗಿದೆ. ವಾರಾಹಿಯಿಂದ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ಫೆಬ್ರವರಿಯಲ್ಲಿ ಮುಗಿಸಲು ಸೂಚಿಸಲಾಗಿದೆ. ಜನಸಾಮಾನ್ಯರೂ ಸಹ ನೀರಿನ ಮಿತ ಬಳಕೆಗೆ ಮುಂದಾಗಬೇಕು. 

Emergency Service

      ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 28,387  ಅಂತ್ಯೋದಯ ಕಾರ್ಡ್ ಹಾಗೂ 1,68,833 ಆದ್ಯತಾ ಪಡಿತರ ಚೀಟಿಯಲ್ಲಿ , 6,77,004 ಫಲಾನುಭವಿಗಳಿಗೆ 05 ಕೆಜಿ ಅಕ್ಕಿ ಹಾಗೂ ಅಂತ್ಯೋದಯ ಕಾರ್ಡಿಗೆ 35 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಇವುಗಳ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ. ಯಂತೆ ಆಹಾರಧಾನ್ಯದ ಬದಲಾಗಿ  ನೇರ ನಗದು ವರ್ಗಾವಣೆಯಡಿ ಫಲಾನುಭವಿಗಳಿಗೆ ಕಳೆದ ಮೂರು ತಿಂಗಳಿನಿಂದ ಈವರೆಗೆ 35.45 ಕೋಟಿ ರೂ. ಅನುದಾನವನ್ನು ಅವರ ಖಾತೆಗಳಿಗೆ ವರ್ಗಾಯಿಸಲಾಗಿದೆ.

        ಜಿಲ್ಲೆಯಲ್ಲಿ 3,67,343 ವಿದ್ಯುತ್ ಗೃಹ ಬಳಕೆದಾರರಿದ್ದು, ಅವರುಗಳಲ್ಲಿ 306106 ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಂಡು ಕಳೆದ ಆಗಸ್ಟ್-ಸೆಪ್ಟಂಬರ್ ಮಾಹೆಯ ಒಟ್ಟು 34.82 ಕೋಟಿ ರೂ ಮೊತ್ತ ರಿಯಾಯಿತಿ ನೀಡಲಾಗಿದ್ದು, ಇದನ್ನು ರಾಜ್ಯ ಸರ್ಕಾರವೇ ಭರಿಸಿದೆ. 

ಗೃಹಲಕ್ಷ್ಮೀಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 2.13 ಲಕ್ಷ ಫಲಾನುಭವಿಗಳ ನೋಂದಣಿಯಾಗಿದ್ದು, 1.77 ಲಕ್ಷ ಫಲಾನುಭವಿಗಳ ಖಾತೆಗೆ 40.67 ಕೋಟಿ ರೂ. ಹಣ ಜಮಾ ಮಾಡಿ, ಶೇ. 88 ರಷ್ಟು ಸಾಧನೆ ಮಾಡಲಾಗಿದೆ. 

ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಕಳೆದ ಜೂನ್ ಮಾಹೆಯಿಂದ ಈವರೆಗೆ 43.20 ಲಕ್ಷ ಮಹಿಳಾ ಪ್ರಯಾಣಿಕರು ಸದುಪಯೋಗ ಪಡೆದುಕೊಂಡಿದ್ದು, ಇದಕ್ಕೆ ಸರ್ಕಾರ 15.84 ಲಕ್ಷ ರೂ. ಭರಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಐ.ಸಿ.ಡಿ.ಎಸ್ ಯೋಜನೆಯಡಿ ಒಟ್ಟು 62,246 ಫಲಾನುಭವಿಗಳ ಗುರಿಯಿದ್ದು, 55,200 ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಿ ಶೇ.89 ರಷ್ಟು ಸಾಧನೆ ಮಾಡಲಾಗಿದೆ. ಅಂತೆಯೇ ಮಾತೃಪೂರ್ಣ ಯೋಜನೆಯಡಿ ಒಟ್ಟು 11,763 ಫಲಾನುಭವಿಗಳ ಗುರಿಯಿದ್ದು, 11,282 ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಿ ಶೇ.86 ರಷ್ಟು ಸಾಧನೆ ಮಾಡಲಾಗಿರುತ್ತದೆ.  

ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ ಯೋಜನೆಯ ಸೇವೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಕದ್ರಿಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಪುಷ್ಪಾರವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಸಚಿವರು ಕಳೆದ ಅಕ್ಟೋಬರ್ 10 ರಂದು ದೆಹಲಿಯಲ್ಲಿ ಸನ್ಮಾನಿಸಿರುವುದು ಹೆಮ್ಮೆಯ ವಿಷಯ.

     ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಸರ್ಕಾರದ ಪ್ರಮುಖ ಯೋಜನೆಯಾದ ಪಶ್ಚಿಮವಾಹಿನಿ ಯೋಜನೆಯಡಿ ಸುಮಾರು 450 ಕೋಟಿ ರೂ. ಅಂದಾಜು ಮೊತ್ತದಲ್ಲಿ 56 ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದ ಸುಮಾರು 2476.70 ಹೆಕ್ಟೇರ್ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. 

    ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆಗಾಗಿ ಸುಮಾರು  ರೂ. 26.46 ಕೋಟಿ ಮೊತ್ತದಲ್ಲಿ 5.20 ಕಿ.ಮೀಟರ್ ಉದ್ದಕ್ಕೆ ನದಿದಂಡೆ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೆರೆ ಆಧುನೀಕರಣ ಯೋಜನೆಯಡಿ ಸುಮಾರು ರೂ. 4.00 ಕೋಟಿ ಅಂದಾಜು ಮೊತ್ತದಲ್ಲಿ 2 ಕೆರೆಗಳನ್ನು ಅಭಿವೃದ್ಧಿಪಡಿಸಿ ಸುಮಾರು 12 ಹೆಕ್ಟೇರ್ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.

    ಸಮುದ್ರದ ಹಿನ್ನೀರಿನಿಂದಾಗಿ ಕೃಷಿ ಭೂಮಿಗಳು ಲವಣಯುಕ್ತವಾಗುವುದನ್ನು ಸಂರಕ್ಷಿಸುವ ಸಲುವಾಗಿ ಸುಮಾರು 24 ಕೋಟಿ ರೂ ಮೊತ್ತದ ಖಾರ್‌ಲ್ಯಾಂಡ್ ಯೋಜನೆಗಳನ್ನು ಕೈಗೊಳ್ಳಲಾಗುವುದು. ಹಾಗೂ ಸುಮಾರು ರೂ. 81.90 ಕೋಟಿ ಮೊತ್ತದ ಎರಡೂ ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಯೋಜನೆಯ ಅನುಷ್ಟಾನದಿಂದಾಗಿ ಸುಮಾರು 325 ಹೆಕ್ಟೇರ್ ಕೃಷಿ ಭೂಮಿಗಳಿಗೆ ನಿರಾವರಿ ಸೌಲಭ್ಯ ಒದಗಿಸಬಹುದಾಗಿದೆ. 

ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ  ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು 525 ಕಾಮಗಾರಿಗಳನ್ನು 735.78 ಕೋಟಿ ರೂ. ಗಳಲ್ಲಿ ಕೈಗೊಳ್ಳಲಾಗಿದ್ದು, 2,47,190 ಮನೆಗಳ ನಳ ಸಂಪರ್ಕ ಗುರಿ ಹೊಂದಿ, ಪ್ರಸಕ್ತ 1,92,065 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಉಳಿದ ಕಾಮಗಾರಿಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿವೆ. 

ಜಿಲ್ಲೆಯ 122 ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ 1600  ಕೋಟಿ ರೂ ಮೊತ್ತದ ಕಾಮಗಾರಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಹಾಗೂ 59 ಗ್ರಾಮಗಳಿಗೆ 585 ಕೋಟಿ ರೂ ಮೊತ್ತದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. 

ಜಿಲ್ಲೆಯ 155 ಗ್ರಾಮ ಪಂಚಾಯತಿಗಳಲ್ಲಿ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ ಕಲ್ಪಿಸಲಾಗಿದ್ದು, 87 ಗ್ರಾಮ ಪಂಚಾಯತಿಗಳಲ್ಲಿ ಒಣ ತ್ಯಾಜ್ಯಗಳ ನಿರ್ವಹಣೆ ಮಾಡಲಾಗುತ್ತಿದೆ. 

   ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನ 9 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಿ, ಈವರೆಗೆ 5.34 ಲಕ್ಷ ಮಾನವ ದಿನಗಳನ್ನು ಸೃಜಿಸುವುದರೊಂದಿಗೆ ಶಾಶ್ವತ ಕಾಮಗಾರಿಗಳನ್ನು ಕೈಗೊಂಡು, ಕೂಲಿ ಉದ್ಯೋಗವನ್ನು ಒದಗಿಸಿ, 32.89 ಕೋಟಿ ಮೊತ್ತವನ್ನು ವಿನಿಯೋಗಿಸಿದೆ. 

 ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗೆ ಗರಿಷ್ಠ ಮಟ್ಟದ ಮೊತ್ತವನ್ನು 2.50 ಲಕ್ಷಗಳಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸಿದೆ. 

 ಸಂಜೀವಿನಿ ಸ್ವ-ಸಹಾಯ ಗುಂಪುಗಳ ಮೂಲಕ ಜಿಲ್ಲೆಯಾದ್ಯಂತ 1000 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡಲಾಗಿದೆ. ಗ್ರಾಮೀಣ ಮಹಿಳೆಯರ ಉತ್ತಮ ಜೀವನೋಪಾಯ ಕಂಡುಕೊಳ್ಳಲು ವಿವಿಧ ಚಟುವಟಿಕೆಗಳನ್ನು ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. 

     ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಪರೀಕ್ಷೆಗಳಾದ ಜೆ.ಇ.ಇ, ನೀಟ್ ಹಾಗೂ ಸಿ.ಇ.ಟಿ ಪರೀಕ್ಷೆಗಳಿಗೆ ಎದುರಿಸಲು ಆನ್‌ಲೈನ್ ಮೂಲಕ ಉತ್ತಮ ಶಿಕ್ಷಕರಿಂದ ಶಿಕ್ಷಣವನ್ನು ಜಿಲ್ಲೆಯ ಎಲ್ಲಾ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆ ಸಭಾಂಗಣದಲ್ಲಿ ತರಬೇತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

     ಲೋಕೋಪಯೋಗಿ ಇಲಾಖೆಯ ರಸ್ತೆ ಹಾಗೂ ಸೇತುವೆ ಕಾಮಗಾರಿ ಯೋಜನೆಯಡಿ ಪ್ರಸಕ್ತ ಸಾಲಿಗೆ 627.37 ಕೋಟಿ ರೂ. ಮೊತ್ತದಲ್ಲಿ 355 ರಸ್ತೆ ಕಾಮಗಾರಿಗಳನ್ನು ಹಾಗೂ 69.89 ಕೋಟಿ ರೂ. ಮೊತ್ತದಲ್ಲಿ 16 ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 25 ಕೋಟಿ ರೂ ಮೊತ್ತದಲ್ಲಿ  468 ಕಾಲು ಸಂಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 

     ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 10,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಯೋಜನೆಯ ಪ್ರಾರಂಭದಿಂದ ಈವರೆಗೆ  505.84 ಕೋಟಿ ರೂ. ಪ್ರೋತ್ಸಾಹಧನವನ್ನು 1,53,801 ಮಂದಿ ರೈತರ ಖಾತೆಗೆ ವರ್ಗಾಯಿಸಲಾಗಿದೆ. 

      ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ಕೃಷಿಯಲ್ಲಿ ನೀರಿನ ಮಿತ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೂಕ್ಷ್ಮ ನೀರಾವರಿ ಘಟಕಗಳಾದ ಹನಿ ಮತ್ತು ತುಂತುರು ನೀರಾವರಿಗೆ 2 ಹೆ. ವಿಸ್ತೀರ್ಣದವರೆಗೆ ಎಲ್ಲಾ ವರ್ಗದ ರೈತರಿಗೆ ಶೇ. 90 ರ ಸಹಾಯಧನವನ್ನು ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 1278 ಹೆ. ಪ್ರದೇಶದಲ್ಲಿ ತುಂತುರು ನೀರಾವರಿ ಸೌಲಭ್ಯ ಅಳವಡಿಕೆಗೆ 216 ಲಕ್ಷ ರೂ. ಅನುದಾನ ನಿಗಧಿಪಡಿಸಲಾಗಿದೆ.

      ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಗೆ 9,77,298 ಫ್ಲಾಟ್‌ಗಳಲ್ಲಿ 9,70,011 ಸಂಖ್ಯೆಯ ಫ್ಲಾಟ್‌ಗಳಲ್ಲಿ ಬೆಳೆ ಸಮೀಕ್ಷೆ ಕೈಗೊಂಡು ಶೇ. 99.25 ರಷ್ಟು ಪ್ರಗತಿ ಸಾಧಿಸಲಾಗಿದೆ. ಬೆಳೆ ಸಮೀಕ್ಷೆಯ ಮಾಹಿತಿಯನ್ನು ಬೆಳೆ ಹಾನಿ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ, ಪಹಣಿಯಲ್ಲಿ ಬೆಳೆ ದಾಖಲಾತಿ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬಳಸಲಾಗುತ್ತದೆ. 

  ಮಲ್ಪೆ ಮೀನುಗಾರಿಕಾ ಬಂದರು ಏಷ್ಯದ ಅತಿ ದೊಡ್ಡ ಸರ್ವಋತು ಮೀನುಗಾರಿಕೆ ಬಂದರು, 2 ಲಕ್ಷಕ್ಕೂ  ಹೆಚ್ಚು ಜನರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1950 ರ ಮೊದಲು ನಮ್ಮ ದೇಶದ ಒಟ್ಟು ಮೀನುಗಾರಿಕೆ ರಫ್ತು 5 ಕೋಟಿ ರೂ. ಗಳಾಗಿದ್ದರೆ ಪ್ರಸ್ತುತ 57,586 ಕೋಟಿ ರೂಪಾಯಿಗಳನ್ನು ಮೀರಿದೆ. ಇದರಲ್ಲಿ ಜಿಲ್ಲೆಯ ಮೀನುಗಾರರ ಪಾತ್ರವೂ ಸಹ ಇದೆ. 

 ಪೋಷಣ್ ಶಕ್ತಿ ನಿರ್ಮಾಣ್ –ಮಧ್ಯಾಹ್ನ ಉಪಾಹಾರ ಯೋಜನೆಗೆ ಅಕ್ಷರ ದಾಸೋಹದ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ 898 ಸರ್ಕಾರಿ ಹಾಗೂ ಅನುದಾನಿತ ಶಾಲೆಯ 82,257 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಲಾಗುತ್ತಿದೆ.

     ಜಿಲ್ಲೆಯಲ್ಲಿ 7,955 ಮೋಟಾರೀಕೃತ  ಆಳ ದೋಣಿಗಳು, ಯಾಂತ್ರೀಕೃತ ದೋಣಿಗಳು ಹಾಗೂ ಪಾತೀ ದೋಣಿಗಳ ಮೂಲಕ ಮೀನುಗಾರಿಕೆ ಮಾಡುತ್ತಿರುವವರಿಗೆ ಮೀನುಗಾರಿಕೆ ಚಟುವಟಿಕೆಗೆ ಅನುಕೂಲವಾಗುವಂತೆ ಮಾರಾಟ ಕರ ರಹಿತ ದರದಲ್ಲಿ ಡೀಸೆಲ್ ಅನ್ನು ವಿತರಿಸಲಾಗುತ್ತಿದೆ. ಮೋಟಾರೀಕೃತ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಮಾಸಿಕ 300 ಕೆ.ಎಲ್.ಸೀಮೆಎಣ್ಣೆಯನ್ನು ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 4,714 ಪರ್ಮೆಂಟ್‌ಗಳನ್ನು ವಿತರಣೆ ಮಾಡಲಾಗಿದೆ. 

     ಜಿಲ್ಲೆಯಲ್ಲಿ 2,516 ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 32.95 ಕೋಟಿ ರೂ. ಸಾಲ ಸೌಲಭ್ಯವನ್ನು ವಿತರಿಸಲಾಗಿದೆ. ಕಿರು ಆಹಾರ ಸಂಸ್ಕರಣ ಘಟಕ ಯೋಜನೆಯಡಿ 70.06 ಲಕ್ಷ ಸಾಲವನ್ನು ಸಹ ಮಂಜೂರು ಮಾಡಲಾಗಿದೆ. 

    ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಲ್ಲಿ 18 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿರುವ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡಲಾಗಿದೆ.

     ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಅಭಾ ಕಾರ್ಡ್) ಸೃಜನೆಯಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ. ಆಯುಷ್ಮಾನ್ ಭವ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸೆಪ್ಟಂಬರ್ 19 ರಿಂದ ಡಿಸೆಂಬರ್ 1 ರ ವರೆಗೆ ಪ್ರತೀ ಮಂಗಳವಾರದಂದು ಜನಸಾಮಾನ್ಯರಿಗೆ ಉಚಿತವಾಗಿ ವಿವಿಧ ಆರೋಗ್ಯ ಸೇವೆಗಳನ್ನು ತಲುಪಿಸಲು ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರ, 62 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 249 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಆರೋಗ್ಯ ಮೇಳವನ್ನು ನಡೆಸಲಾಗುತ್ತಿದೆ. 

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಶೇಷ ಚೇತನ ಯೋಜನೆ, ವಿಧವಾ ವೇತನ, ಸಂಧ್ಯಾಸುರಕ್ಷಾ, ಮನಸ್ವಿನಿ ಯೋಜನೆ ಹಾಗೂ ಮೈತ್ರಿ ಯೋಜನೆಯಡಿ ಒಟ್ಟು 1,48,143 ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದೆ ಎಂದರು.

 

ಜಿಲ್ಲೆಯ ನಾಗರಿಕರಿಂದ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸಲು ಪ್ರತೀ ತಿಂಗಳು ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಎರಡು ತಿಂಗಳಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ 232 ಅಹವಾಲು ಸ್ವೀಕೃತವಾಗಿದ್ದು, 173 ವಿಲೇವಾರಿಯಾಗಿ 59 ಅಹವಾಲುಗಳು ತನಿಖಾ ಹಂತದಲ್ಲಿವೆ. 

 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ನಗರೋತ್ಥಾನ ನಾಲ್ಕನೇ ಹಂತದಲ್ಲಿ 80 ಕೋಟಿ ರೂ. ಅನುದಾನದಲ್ಲಿ 71 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ 32 ಕಾಮಗಾರಿಗಳು ಮುಕ್ತಾಯಗೊಂಡು ಬಾಕಿ ಉಳಿದ 39 ಕಾಮಗಾರಿಗಳು ಪ್ರಗತಿಯಲ್ಲಿವೆ. 

  ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ಒದಗಿಸಲು ನಾಲ್ಕು ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿ, ಉಪಹಾರ ಹಾಗೂ ಊಟ ಲಭಿಸುವಂತೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕಾಪು, ಬೈಂದೂರು ವ್ಯಾಪ್ತಿಯಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. 

  ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಉತ್ಸವವು ಜನವರಿಯಲ್ಲಿ ಜರುಗಲಿದ್ದು, ಇಲ್ಲಿಗೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

 ಒಟ್ಟಾರೆಯಾಗಿ ಕನ್ನಡ ನಾಡನ್ನು ಬಲಿಷ್ಠವಾಗಿ ಕಟ್ಟಿ ಕನ್ನಡಿಗರಿಗೆ ಉತ್ತಮ ಭವಿಷ್ಯವನ್ನು ರೂಪಿಸಲು, ನೆಮ್ಮದಿ ಜೀವನ ಸಾಗಿಸುವ ಕಾಯಕದಲ್ಲಿ ನಮ್ಮ ಸರ್ಕಾರ ದೃಢವಾದ ಹೆಜ್ಜೆಗಳನ್ನಿಡುತ್ತಾ ಸಾಗಿದೆ ಎಂದರು.

ನಾಡು-ನುಡಿಗಳ ಸೇವೆಗಾಗಿ ನಾವು ಈ ನೆಲದಿಂದ ಸ್ಪೂರ್ತಿ ಪಡೆಯೋಣ. ನಮ್ಮ ಪರಮೋಚ್ಛ ಕನ್ನಡಭಾಷೆ, ಸಂಸ್ಕೃತಿಯನ್ನು ಉಳಿಸೋಣ-ಬೆಳೆಸೋಣ. ನಮ್ಮ ಕನ್ನಡ ನಾಡು ಸಮೃದ್ಧವಾಗಿ ಬೆಳೆಯಲಿ ಎಂದು ಹಾರೈಸುತ್ತಾ ತಮ್ಮೆಲ್ಲರಿಗೂ ಮತ್ತೊಮ್ಮೆ 68 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ, ರಾಷ್ಟ್ರಕವಿ ಕುವೆಂಪು ರವರ ಕವನದ ಸಾಲುಗಳೊಂದಿಗೆ ನನ್ನ ಮಾತುಗಳಿಗೆ ವಿರಾಮ ಹಾಡುತ್ತೇನೆ.

ಕನ್ನಡ ನೆಲದಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳಿದರು.

Bottom Add3
Bottom Ad 2