Cancer Hospital 2
Bottom Add. 3

ಬಳ್ಳಾರಿ ಜಿಲ್ಲೆಗಿಲ್ಲ ಒಂದೂ ರಾಜ್ಯೋತ್ಸವ ಪ್ರಶಸ್ತಿ: ಜನತೆ ಅಸಮಾಧಾನ

ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ: ಈ ಬಾರಿ ಬಳ್ಳಾರಿ ಜಿಲ್ಲೆಗೆ ಒಂದೂ ರಾಜ್ಯೋತ್ಸವ ಪ್ರಶಸ್ತಿ ಘೋಷಿಸದ ರಾಜ್ಯಸರಕಾರದ ವಿರುದ್ಧ ಜಿಲ್ಲೆಯ ಜನತೆ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗೆ ಕನಿಷ್ಠ ಒಂದಾದರೂ ಪ್ರಶಸ್ತಿ ಘೋಷಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿಯಂಥ ಕಲೆ, ಸಾಂಸ್ಕೃತಿಕ ಶ್ರೀಮಂತಿಕೆ ಇರುವ, ನಾನಾ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮೆರೆದಿರುವ ಜಿಲ್ಲೆಯನ್ನು ಕಡೆಗಣಿಸಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ, ವಿಜಯನಗರ ಜಿಲ್ಲೆಯಿಂದ ವಿವಿಧ ಕ್ಷೇತ್ರಗಳ 39 ಸಾಧಕರಿಗೆ ಪ್ರಶಸ್ತಿಗಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಇವರಲ್ಲಿ ಕನಿಷ್ಠ ಪಕ್ಷ ಒಬ್ಬರನ್ನೂ ಪರಿಗಣಿಸದೆ ಮಲತಾಯಿ ಧೋರಣೆ ತೋರಲಾಗಿದೆ ಎಂದು ಕಲಾವಿದರು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಖಂಡರು ದೂರಿದ್ದಾರೆ.

ವಿಜಯನಗರ ಜಿಲ್ಲೆಯ ‘ಹಂದಿಜೋಗಿ’ ಎಂದೇ ಹೆಸರಾದ ದಳವಾಯಿ ಸಿದ್ದಪ್ಪ ಅವರಿಗೆ ಯಕ್ಷಗಾನ ಮತ್ತು ಬಯಲಾಟ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಲಾಗಿದೆ. ವಿಜಯನಗರ ಜಿಲ್ಲೆಯವರೇ ಆದ ಡೊಳ್ಳು ಕುಣಿತ ಕಲಾವಿದ ಎಚ್‌.ಕೆ.ಕಾರಮಂಚಪ್ಪ ಅವರಿಗೂ ಪ್ರಶಸ್ತಿ ಘೋಷಿಸಲಾಗಿದೆ. ಆದರೆ ಇವರನ್ನು ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಬಳ್ಳಾರಿಯ ಕಲಾವಿದರೆಂದು ನಮೂದಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆಯಾಗಿರುವುದು ಗೊತ್ತಿಲ್ಲವೇ ಎಂದು ಹಲವರು ಕಿಡಿ ಕಾರಿದ್ದಾರೆ.

Bottom Add3
Bottom Ad 2

You cannot copy content of this page