Kannada News

ಖಂಡಿತ ಕರ್ನಾಟಕದಲ್ಲಿ ಸುವರ್ಣ ಯುಗ ಆರಂಭವಾಗಲಿದೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಒಂದೆಡೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಬದುಕು ಪಾತಾಳಕ್ಕೆ ಕುಸಿಯುತ್ತಿದೆ. ಜನರ ಸಮಸ್ಯೆಯತ್ತ ಗಮನ ಹರಿಸದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಯುವಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಇದು ರೈತರು, ಬಡವರು, ಜನಸಾಮಾನ್ಯರು ಬದುಕುವ ಕಾಲ ಅಲ್ಲ, ಆದರೆ ಕಾಂಗ್ರೆಸ್ ಪಕ್ಷ ತಮ್ಮ ಶ್ರಮಕ್ಕೆ, ಬೆವರಿಗೆ ಬೆಲೆ ಕೊಟ್ಟೆ ಕೊಡುತ್ತೆ. ಜನರ ಆಶಿರ್ವಾದದೊಂದಿಗೆ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ. ಜನರ ಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ಭವಿಷ್ಯ ನಮ್ಮ ಭವಿಷ್ಯ. ಕಾಂಗ್ರೆಸ್ ಯಾವತ್ತಿದ್ದರೂ ಜನಸಾಮಾನ್ಯರ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತದೆ. ಮಹಾತ್ಮ ಗಾಂಧಿಜಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಈ ದೇಶಕ್ಕಾಗಿ, ಜನರಿಗಾಗಿ ಪ್ರಾಣವನ್ನೇ ಕೊಟ್ಟವರು. ಆದರೆ ಬಿಜೆಪಿಯ ಯಾರಾದರೂ ಒಬ್ಬರೇ ಒಬ್ಬರು ಈ ದೇಶಕ್ಕಾಗಿ, ಜನರಿಗಾಗಿ ಪ್ರಾಣತ್ಯಾಗ ಮಾಡಿದ ಯಾರಾದರೂ ಇದ್ದಾರಾ? ವಿಚಾರ ಮಾಡಿ. ಇಂತವರಿಂದ ಏನೂ ಸಾಧ್ಯವಿಲ್ಲ, ಯಾವ ಪ್ರಗತಿಯೂ ಸಾಧ್ಯವಿಲ್ಲ, ಅಭಿವೃದ್ಧಿಯೂ ಸಾಧ್ಯವಿಲ್ಲ. ಬಿಜೆಪಿಯವರಿಂದ ಸಾಧ್ಯ ಎನ್ನುವುದು ಏನಾದರೂ ಇದ್ದರೆ ಅದು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜದ ಸುಂದರ ವಾತಾವರಣವನ್ನು ಕೆಡಿಸುವುದಷ್ಟೇ ಎಂದು ಕಿಡಿಕಾರಿದರು.

ಮೊನ್ನೆ ಸಿ.ಟಿ.ರವಿಯವರು ಹೇಳುತ್ತಿದ್ದರು, ವೀರಶೈವ ಲಿಂಗಾಯಿತರಿಗೆ ಅಂತಹ ಪ್ರಾಮುಖ್ಯತೆಯನ್ನು ಕೊಡುವುದು ಬೇಡ ಎಂದು. ಸಿ.ಟಿ.ರವಿ ಅಣ್ಣನವರೇ ನಿಮಗೆ ನಾಚಿಕೆಯಾಗಬೇಕು. ಅಧಿಕಾರದ ಅಮಲು ಯಾವ ಮಟ್ಟಕ್ಕೆ ಏರಿದೆ ನಿಮಗೆ… ಯಡಿಯೂರಪ್ಪನವರ ಹೆಸರು ಹೇಳಿ ಅಧಿಕಾರಕ್ಕೆ ಬಂದಂತಹ ನೀವು ಇಂದು ವೀರಶೈವ ಲಿಂಗಾಯಿತ ಸಮುದಾಯಕ್ಕೆ ಪ್ರಾಮುಖ್ಯತೆ ಕೊಡುವುದು ಬೇಡ ಎನ್ನುತ್ತಿದ್ದೀರಾ. ಇಂದು ನಿಮಗೆ ವೀರಶೈವ ಲಿಂಗಾಯಿತರು ಬೇಡವಾಗಿದ್ದಾರೆ… ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು.

ಬಿಜೆಪಿಯ ಒಬ್ಬರು ಹೇಳ್ತಾರೆ ಮುಂಬರುವ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಬಾಂಧವರ ಮದರಸಾಗಳನ್ನು ಮುಚ್ಚಿ ಹಾಕುತ್ತೇವೆ ಎಂದು, ಇನ್ನೊಬ್ಬರು ಹೇಳ್ತಾರೆ ವೀರಶೈವ ಲಿಂಗಾಯಿತರಿಗೆ ಪ್ರಾಮುಖ್ಯತೆ ಕೊಡಬೇಡಿ ಎಂದು, ಮತ್ತೊಬ್ಬರು ಹೇಳುತ್ತಾರೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಅಂತಾ… ಬಿಜೆಪಿಯವರು ರಾಮ ರಾಮ ಎಂದು ಬಾಯಲ್ಲಿ ಹೇಳುತ್ತಾ ರಾವಣನ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೆಲ್ಲರೂ ಸ್ವಾಭಿಮಾನಿಗಳು, ಬೆಲೆ ಏರಿಕೆಯಿಂದಾಗಿ ನಿವೆಲ್ಲರೂ ತತ್ತರಿಸಿದ್ದೀರಿ. ಇನ್ನು ಕೇವಲ 50 ದಿನಗಳಲ್ಲಿ ಚುನಾವಣೆ ಬರಲಿದೆ. ಚುನಾವಣೆಯಲ್ಲಿ ನೀವೆಲ್ಲರೂ ಕಾಂಗ್ರೆಸ್ ಗೆ ಮತವನ್ನು ನೀಡಿ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ಖಂಡಿತವಾಗಿಯೂ ನಾವು ಕರ್ನಾಟಕ ರಾಜ್ಯದಲ್ಲಿ ಸುವರ್ಣಯುಗವನ್ನು ಪ್ರಾರಂಭಮಾಡುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button