Kannada NewsKarnataka NewsLatest

ಲಕ್ಷ್ಮಿ ತಾಯಿ ಸೌಹಾರ್ದ ಸೊಸೈಟಿ ಮೂಲಕ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ​ – ಲಕ್ಷ್ಮಿ ಹೆಬ್ಬಾಳಕರ್

  ಲಕ್ಷ್ಮಿ ತಾಯಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ​ 

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ಲಕ್ಷ್ಮಿ ತಾಯಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಲಾಗುವುದು. ತನ್ಮೂಲಕ ರೈತರು, ಬಡವರಿಗೆ ಕೈಗೆಟಕುವ ದರದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ಒದಗಿಸಲಾಗುವುದು ಎಂದು ಸೊಸೈಟಿಯ ಗೌರವಾಧ್ಯಕ್ಷೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಸವದತ್ತಿಯಲ್ಲಿ ಭಾನುವಾರ ಸೊಸೈಟಿಯ ಮೊದಲ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಕಬ್ಬು ಬೆಳೆಗಾರರು ಸೇರಿದಂತೆ ರೈತರಿಗೆ ಅನುಕೂಲವಾಗಲೆನ್ನುವ ಉದ್ದೇಶದಿಂದ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ​ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಮತ್ತು ಹೆಚ್ಚಿನ ಬಡ್ಡಿಯಲ್ಲಿ ಠೇವಣಿ ಇಡುವುದಕ್ಕೆ ಅವಕಾಶ ನೀಡಲಾಗುವುದು. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಯೋಜನೆ ರೂಪುಸಲಾಗುತ್ತಿದೆ. ಹಾಗಾಗಿ ರೈತರು, ಬಡವರು ಮತ್ತು ಅವರ ಮಕ್ಕಳಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗುವುದು ಎಂದು ಹೆಬ್ಬಾಳಕರ್ ತಿಳಿಸಿದರು.
ರೈತರಿಗೆ ಅಗತ್ಯ ಉಪಕರಣಗಳನ್ನು ಖರೀದಿಸಲು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ನೀಡಲಾಗುವುದು ಎಂದೂ ಅವರು ಹೇಳಿದರು.
ಶಾಸಕ ಆನಂದ ಮಾಮನಿ ಮಾತನಾಡಿ, ಸವದತ್ತಿ ತಾಲೂಕಿನಲ್ಲಿ ಲಕ್ಷ್ಮಿ ತಾಯಿ ಸೌಹಾರ್ದ ಸೊಸೈಟಿ ಆರಂಭಿಸಿರುವುದು ಖುಷಿ ತಂದಿದೆ. ಇಲ್ಲಿನ ಜನರಿಗೆ ಇದರಿಂದ ಉದ್ಯೋಗಾವಕಾಶ ಹಾಗೂ ಆರ್ಥಿಕ ಅನುಕೂಲವಾಗಲಿದೆ. ಹಾಗಾಗಿ ನಾನು ಹೃತ್ಪೂರ್ವಕವಾಗಿ ಸ್ವಾಗತಿಸುವ ಜೊತೆಗೆ ನನ್ನಿಂದ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದರು.
​ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸೂಕ್ತ ಸಮಯದಲ್ಲಿ ಸಾಲಸೌಲಭ್ಯ ಸಿಗುವುದಿಲ್ಲ. ಆದರೆ ಸಹಕಾರಿ ಸಂಘಗಳಿಂದ ಬಡವರಿಗೆ ಅನುಕೂಲವಾಗುತ್ತಿದೆ. ಇಂತಹ ಸಂಘಗಳು ಹೆಚ್ಚಾದಷ್ಟು ಅನುಕೂಲ ಎಂದು ಮಾಮನಿ ಹೇಳಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ​, ಸಹಕಾರಿ ಸಂಘ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಬೈಲಹೊಂಗಲದಲ್ಲೂ ಶಾಖೆಯನ್ನು ಆರಂಭಿಸಿದರೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಹೂಲಿ ಸಾಂಬಯ್ಯನವರ ಮಠದ ಶ್ರೀ ಉಮೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. ಜೊತೆಗೆ ಸಂಸ್ಥೆಯಲ್ಲಿ ಮೊದಲ ಠೇವಣಿಯಾಗಿ ಒಂದು ಲಕ್ಷ ರೂ.ಗಳನ್ನು ನೀಡಿದರು. ಒಟ್ಟೂ 11 ಜನರು ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಠೇವಣಿ ಇರಿಸಿದರು.
ಸಂಸ್ಥೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಹಾಗೂ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ನಿರ್ದೇಶಕರೆಲ್ಲರೂ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button