ಲೇಖನ : ರವಿ ಕರಣಂ
ತುಂಬಾ ಬೇಸರದಿಂದಲೇ ಹೇಳಬೇಕಿದೆ. ಜನರ ಅಜ್ಞಾನದ ಪರದೆಯನ್ನು ಕಳಚಲು ಸಾಧ್ಯವೇ ಇಲ್ಲವೇನೋ ! ಇನ್ನೂ ಎಷ್ಟು ಕಾಲ ಬೇಕೋ ಇವರ ವಿವೇಚನಾ ಶಕ್ತಿಯ ಬೆಳವಣಿಗೆಗೆ ! ಇರುವ ಕಾಡನ್ನೆಲ್ಲ ನಾಶ ಮಾಡುತ್ತಾ, ಅಲ್ಲಿ ಹೊಲ ಗದ್ದೆಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಇದ್ದ ಹೊಲ ಗದ್ದೆಗಳನ್ನೆಲ್ಲ ವಸತಿ ನಿವೇಶನಗಳನ್ನಾಗಿ ಪರಿವರ್ತನೆ ಮಾಡಿ, ಹಣ ಗಳಿಕೆಯ ಹಿಂದೆ ಬಿದ್ದಿದ್ದಾರೆ. ಇನ್ನೂ ಹೀಗೆಯೇ ಮುಂದುವರೆಯುತ್ತಿದೆ. ಇದಕ್ಕೆ ವೈಜ್ಞಾನಿಕವಾದ ಅಳತೆ ಗೋಲುಗಳಿಲ್ಲ. ಕಟ್ಟು ನಿಟ್ಟಿನ ಕ್ರಮಗಳಿಲ್ಲ. ‘ಎಮ್ಮೆಗೆ ಜ್ವರ ಬಂದರೆ, ಎತ್ತಿಗೆ ಬರೆ ಎಳೆದಂತೆ’ ಎಂಬ ಮಾತಿದೆ. ಹಾಗೆಯೇ ಆಗಿದೆ. ಇಲ್ಲೊಂದು ವಿಚಿತ್ರ ಘಟನೆ !
ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ, ಹುಲ್ಲೆಮನೆ ಕುಂದೂರು ಗ್ರಾಮದ ಜನರು ಶಾಸಕರೋರ್ವರ ಮೇಲೆ, ಬಟ್ಟೆ ಹರಿದು, ಥಳಿಸಿದ ಘಟನೆಯನ್ನು ನಮ್ಮ “ಪ್ರಗತಿ ವಾಹಿನಿ” ಯಲ್ಲಿ ಓದಿದ್ದೀರಿ. ಇದನ್ನು ಗಮನಿಸಿದಾಗ, ಕೆಲವರಿಗೆ ಸಂತೋಷ ಮತ್ತು ಕೆಲವರಿಗೆ ಅಸಮಾಧಾನ ಉಂಟಾಗಬಹುದು. ಅದು ರಾಜಕೀಯ ಕಾರಣದ ಹಿನ್ನೆಲೆಯಲ್ಲಿ. ಆದರೆ ಸಾಮಾಜಿಕ ಹಾಗೂ ಪರಿಸರ ಕಾಳಜಿ ಉಳ್ಳವರಿಗೆ ನಿಜಕ್ಕೂ ದುಃಖದ ಸಂಗತಿ !.
ಮಹಿಳೆಯೋರ್ವರು ಆನೆಗಳ ತುಳಿತಕ್ಕೆ ಸಾವನ್ನಪ್ಪಿರುವುದಕ್ಕೆ ದುಃಖವಿದೆ. ಅವರುಗಳ ದುಃಖದಲ್ಲಿ ನಾವೂ ಪಾಲುದಾರರೇ. ಏಕೆಂದರೆ ಒಂದು ಮನೆಗೆ ಆಸರೆಯಾದವರೂ, ಪ್ರೀತಿ ಪಾತ್ರರೂ ಆದವರನ್ನು ಕಳೆದುಕೊಂಡಾಗ ಆಗುವ ನೋವು, ನಷ್ಟ ಎಲ್ಲದಕ್ಕಿಂತಲೂ ತಾಯಿಯೋರ್ವರ ಅಗಲಿಕೆ ಹೇಳತೀರದು. ಅದರ ಬಗ್ಗೆ ಕಿಂಚಿತ್ತೂ ತಕರಾರಿಲ್ಲ. ಆದರೆ
ಕಾಡು ಪ್ರಾಣಿಗಳೆಲ್ಲ ಹೊಲ ಗದ್ದೆಗಳಿಗೆ ನುಗ್ಗಿ, ದಾಂಧಲೆ ಮಾಡುತ್ತವೆ. ಮನುಷ್ಯರು ಅವುಗಳ ದಾಳಿಗೆ ತುತ್ತಾಗಿ, ಮರಣ ಹೊಂದುವುದಕ್ಕೆ ಕಾರಣಕರ್ತರು ಯಾರು ? ಜನಪ್ರತಿ ನಿಧಿಗಳಾ? ಅಧಿಕಾರಿಗಳಾ? ನಮ್ಮ ತಪ್ಪಿಗೆ ಇನ್ನೊಬ್ಬರನ್ನು ಹೊಣೆಗಾರರನ್ನಾಗಿಸುವುದು ಸರಿಯೇ ?
ಪ್ರಾಣಿಗಳ ಜಾಗವನ್ನು ನಾವು ಅತಿಕ್ರಮಣ ಮಾಡಿದ್ದೇವೆಯೇ ಹೊರತು, ಅವುಗಳಾಗಿಯೇ ಬಂದು ಆಕ್ರಮಣ ಮಾಡುವುದೇ ಇಲ್ಲ. ಇರುವ ಭೂ ಭಾಗ ಅತೀ ಕಡಿಮೆ. ಭೂಮಿಯ ಮೇಲಿನ ಮಾನವ ಜನಸಂಖ್ಯೆಯು ಮಿತಿ ಮೀರಿದ ಪರಿಣಾಮವೇ ಇದು. “ಮಾಡಿದ್ದುಣ್ಣೋ ಮಹಾರಾಯ” ನಮ್ಮನ್ನೂ ಒಳಗೊಂಡಂತೆ ಬೇರೆ ದಾರಿಯಿರದು. ಅನುಭವಿಸಲೇ ಬೇಕು. ಇಂದಿನ ದಿನಗಳಲ್ಲಿ ಹಣದ ಹುಚ್ಚು ಅತಿರೇಕಕ್ಕೇರಿದೆ. ಭೂಕಬಳಿಕೆಯ ದಂಧೆಗೊಂದು ಹೆಸರು ‘ರಿಯಲ್ ಎಸ್ಟೇಟ್ ಬ್ಯುಸಿನೆಸ್ !’. ರಿಯಲೀ ಇದು ಪ್ರಾಣಿ ಸಂಕುಲಕೆ ಕಳಂಕವಾಗಿರುವ ಅಪ್ರತ್ಯಕ್ಷ ಮಾರ್ಗ. ಇದಕ್ಕೆ ಟಾಸ್ಕ್ ಫೋರ್ಸ್ ಮಾಡುವುದನ್ನು ಬಿಟ್ಟು, ಭೂ ಕಬಳಿಕೆದಾರರ ನಿಯಂತ್ರಣಕ್ಕೆ ಫೋರ್ಸ್ ರಚಿಸಬೇಕಿತ್ತು.
ಕಾಡಾನೆಗಳ ನಿಯಂತ್ರಣಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿರುವ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಅರಣ್ಯ ರಕ್ಷಣೆ, ಪ್ರಾಣಿ ಸಂಕುಲದ ಮಹತ್ವ ಮತ್ತು ಅವುಗಳ ಮೇಲಿನ ಮಾನವನ ದಬ್ಬಾಳಿಕೆಯ ಬಗ್ಗೆ ಆಳವಾದ ಜ್ಞಾನವಿದೆ ಎಂದು ಭಾವಿಸಿದರೂ, ಹಿಂದಿನಿಂದ ಬಂದ ಸಲಹೆ ಸೂಚನೆಗಳನ್ನು ಕೊಡುವ ಜನರ ದಡ್ಡತನಕ್ಕೆ, ಅವಿವೇಕಿಗಳ ಪಡೆಗೆ ಕಣ್ಣೀರಿಡುವಂತಾಗಿದೆ.
ಯಥೇಚ್ಛವಾಗಿ ಕಾಡಿರುವುದು ನಮ್ಮ ರಾಜ್ಯದಲ್ಲಿಯೇ. ಅದರಲ್ಲೂ ಬನ್ನೇರುಘಟ್ಟ, ನಾಗರಹೊಳೆ, ಬಂಡೀಪುರ, ದಾಂಡೇಲಿ, ಕುದುರೆಮುಖ ಕಾಡುಗಳಲ್ಲಿ ಹುಲಿಗಳ ಸಂತತಿ ಇದೆ. ಅವುಗಳ ವ್ಯಾಪ್ತಿಯಲ್ಲಿ, ಆನೆ, ಕಾಡೆಮ್ಮೆ, ಜಿಂಕೆ, ಕಾಡು ಹಂದಿ ಇಂತಹ ಪ್ರಾಣಿಗಳ ವಾಸ ತೀರಾ ಕಷ್ಟಕರ. ಜೀವ ಭಯದಲ್ಲೇ ಬದುಕು ಸಾಗಿಸುತ್ತವೆ. ಕಾರಣ ಅವುಗಳ ಬೇಟೆಗೆ ಇವು ಸುಲಭವಾಗಿ ತುತ್ತಾಗಿ ಬಿಡುತ್ತವೆ. ದೈತ್ಯ ದೇಹ ಹೊಂದಿದ ಆನೆಗಳೂ ಕೆಲವೊಮ್ಮೆ ಅವುಗಳ ದಾಳಿಗೆ ತೀವ್ರ ತರವಾಗಿ ಗಾಯಗೊಳ್ಳುತ್ತವೆ. ಒಂದು ಹುಲಿ ತನ್ನ ಚಲನ ವಲನಕ್ಕೆ ತನ್ನ ಸುತ್ತಲೂ, ಸರಿ ಸುಮಾರು ಮೂವತ್ತು ಕಿ ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ. ಮತ್ತೆ ಉಳಿದವುಗಳು ರಕ್ಷಣೆಗಾಗಿ ಇತ್ತ ಕಡೆಯೇ ಬಂದು ಬಿಡುತ್ತವೆ. ಇಲ್ಲಿ ನಾವಿದ್ದೇವೆ. ಅವೆಲ್ಲಿಗೆ ಹೋಗಿರಬೇಕು ? ನೀವೇನೇ ತರ್ಕಿಸಿದರೂ ಉತ್ತರ ಒಂದೇ. ಅವುಗಳ ಆವಾಸ ಸ್ಥಾನ ನಮ್ಮ ಕಪಿ ಮುಷ್ಟಿಯಲ್ಲಿದೆ !
ಇಂತಹ ಅವಘಡಗಳಿಗೆ ಕಾರಣ ಕರ್ತರು ಯಾವ ಪಕ್ಷದ, ಯಾವ ರಾಜಕಾರಣಿಯದೂ ಅಲ್ಲ. ಇದು ಭಾರತದಲ್ಲಿರಬಹುದಾದ ನೂರ ಮೂವತ್ತೈದು ಕೋಟಿ ಜನರೂ ಸೇರಿದಂತೆ, ಅರಣ್ಯ ಜೀವಿಗಳಿಗೆ ಮಾಡಿದ ಅಪಚಾರವೇ! ಕಾರಣ ಕೆಲವೇ ಬೆರಳೆಣಿಕೆಯಷ್ಟು ಜನರು ಮಾಡುವುದನ್ನು ನೋಡಿಕೊಂಡು ಸುಮ್ಮನೆ ಇದ್ದೇವಲ್ಲ. ಅದೇ ಅತ್ಯಂತ ಘೋರವಾದುದು. ಕೊಲೆ ಮಾಡಿರುವ ವ್ಯಕ್ತಿಯನ್ನು ಮುಚ್ಚಿಡುವುದು ಎಷ್ಟು ಘೋರ ಅಪರಾಧವೋ ಹಾಗೆಯೇ ಇದೂ ಕೂಡಾ. ಯಾರೂ ಜಾರಿಕೊಳ್ಳಲಾಗದು.
ಕೇವಲ ಆನೆಗಳೊಂದೇ ಅಲ್ಲ. ಹುಲಿ, ಚಿರತೆ, ಕರಡಿಗಳೂ ಮನುಷ್ಯನಿರುವ ಕಡೆ ನುಗ್ಗಿ ಬರುತ್ತಲೇ ಇರುತ್ತವೆ. ಅವುಗಳಿಗೆ ತುತ್ತಾಗಿ ಮರಣ ಹೊಂದಿದವರೂ ಅನೇಕ. ಪತ್ರಿಕೆ, ದೂರದರ್ಶನದಲ್ಲಿ ಎಲ್ಲ ಓದಿ, ನೋಡಿಯೂ ಪಾಠ ಕಲಿಯದ ಜನ ನಾವು ! ಸರ್ಕಾರಗಳಂತೂ ಮೇಧಾವಿಗಳ ಪಡೆಯನ್ನೇ ಪಕ್ಕಕ್ಕಿಟ್ಟುಕೊಂಡು ಜಾರಿಗೆ ತರುವ ಕಾನೂನುಗಳು ಒಬ್ಬ ಸಾಮಾನ್ಯ ಪ್ರಜೆಯ ವಿವೇಚನಾ ಶಕ್ತಿಗಿಂತ ತೀರಾ ಕಳಪೆಯಾಗಿರುತ್ತವೆ. ಎಲ್ಲಿಯ ಪರಿಹಾರ ಕ್ರಮಗಳು ? ಎಲ್ಲಿಯ ನೀತಿ ನಿಯಮಗಳು ?
ಈ ಜನರ ಸುಧಾರಣೆಗೆ ತರಬೇತಿ ಕೊಡುವುದು ಅವಶ್ಯಕ.
ಹೊಲ ಗದ್ದೆಗಳನ್ನು ಕೋಟಿ ಕೋಟಿ ಹಣ ಮಾಡುವ ಉದ್ದೇಶದಿಂದ ಮಾರಾಟ ಮಾಡುತ್ತಿರುವ ದಂಧೆಗೆ ಮೊದಲು ತಡೆ ಹಾಕಬೇಕು. ಒಂದು ವೇಳೆ ನಾನಾ ಕಾರಣಗಳಿಂದಾಗಿ, ಭೂ ಮಾಲಿಕನು ಮಾರಾಟ ಮಾಡಲೇ ಬೇಕಾದ ಸ್ಥಿತಿ ಇದ್ದರೆ, ಅದನ್ನು ಸರ್ಕಾರವೇ ತನ್ನ ಸುಪರ್ದಿಗೆ ತೆಗೆದುಕೊಂಡು ಖರೀದಿಸಬೇಕು. ಆಗಲೇ ನೋಡಿ. ಭೂಮಿ ಮಾರಾಟ ತಕ್ಷಣವೇ ಸ್ಥಬ್ಧವಾಗುತ್ತದೆ. ಕಾರಣ ಸರ್ಕಾರ ನಿಗದಿ ಪಡಿಸಿದ ಬೆಲೆಗೆ ಯಾರೂ ಮಾರಾಟ ಮಾಡಲು ಮುಂದಾಗದೇ, ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ. ಒಂದು ವೇಳೆ ಯಾರಾದರೂ ಹಣಕ್ಕಾಗಿ ಭೂಮಿ ಒತ್ತೆ ಇಟ್ಟುಕೊಂಡಲ್ಲಿ, ಎಲ್ಲವೂ ನ್ಯಾಯಾಲಯದ ಮತ್ತು ಬ್ಯಾಂಕ್ ಮೂಲಕವೇ ಪ್ರತಿಯೊಂದು ಜರುಗುವಂತೆ ನೋಡಿಕೊಳ್ಳಬೇಕು. ಹಣ ಕೊಟ್ಟವನ ಆರ್ಥಿಕ ವ್ಯವಹಾರದ ಹಿನ್ನೆಲೆಯನ್ನು ಪರಿಶೀಲಿಸಬೇಕು. ಮತ್ತು ಭೂಮಿ ಒತ್ತೆ ಇಡಲು ನ್ಯಾಯಾಲಯದಲ್ಲಿ ಲಿಖಿತ ಪ್ರಮಾಣ ಪತ್ರ ಸಲ್ಲಿಸಬೇಕು. ಹಿಂಬದಿಯ ವ್ಯವಹಾರ ಕಂಡು ಬಂದಿದ್ದೇ ಆದರೆ, ಅದಕ್ಕೆ ಕಠಿಣಾತಿಕಠಿಣ ಶಿಕ್ಷೆ ಎಂದು ಮಾಡಿ ನೋಡಲಿ. ಅದರ ಚಿತ್ರಣವೇ ಬೇರೆಯಾಗುತ್ತದೆ. ಇದಕ್ಕೆ ಪೂರಕವಾದ ಅಥವಾ ಇನ್ನೂ ಉತ್ತಮ ಚಿಂತನೆಯ ಕಾರ್ಯಾಗಾರ ನಡೆದು, ಕೃಷಿ ಭೂಮಿಯನ್ನು ಕಡ್ಡಾಯವಾಗಿ ಉಳಿಸಬೇಕು. ಅರಣ್ಯದ ಅತಿಕ್ರಮಣ, ಅನಾಚರಗಳ ಮೇಲೆ ಟಾಸ್ಕ್ ಫೋರ್ಸ್ ಮಾಡಬೇಕು. ಪ್ರಾಣಿಗಳ ಚಲನ ವಲನವನ್ನಲ್ಲ. ಇದು ಒಂದು ಮಾದರಿಯ ಉದಾಹರಣೆಯೆಂದು ಭಾವಿಸಬೇಕು. ಇದರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಪರಿಸರದ ಸಮತೋಲನಕ್ಕೆ ನಾವೆಲ್ಲರೂ ಜವಾಬ್ದಾರರು. ಹೊಣೆಗೇಡಿತನ ಸಲ್ಲದು. ನಮ್ಮಂತೆಯೇ ಪ್ರಾಣಿಗಳಿಗೂ ನೆಲೆ ಬೇಡವೇ? ಆಹಾರ, ನೀರು, ನಿದ್ರೆ, ನೆಮ್ಮದಿ ಬೇಡವೇ ? ವಿದ್ಯಾವಂತರಾದ ನಾವು ಅವುಗಳ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಬಾರದೇನು ? ಅವುಗಳನ್ನು ಬದುಕಲು ಬಿಟ್ಟರೆ,ನಮ್ಮನ್ನು ಬದುಕಲು ಅವುಗಳು ಬಿಡುತ್ತವೆ. ಇಲ್ಲವಾದರೆ ಇಂತಹ ಘಟನೆಗಳು ನಿರಂತರವಾಗಿ ಮರುಕಳಿಸುತ್ತಲೇ ಇರುತ್ತವೆ. ಹಾಗಾಗದಿರಲೆಂಬುದೇ ಆಶಯ.
ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ; ಪಕ್ಕ ಉತ್ತರ ಕರ್ನಾಟಕ ಶೈಲಿಯ ಮಾತು; ಹಿಂದೂ ಎಂಬಂತೆ ಬಿಂಬಿಸಿಕೊಂಡಿದ್ದ ಶಂಕಿತ ಉಗ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ