
ಪ್ರಗತಿವಾಹಿನಿ ಸುದ್ದಿ : ಕಳೆದ ರಾತ್ರಿ ಮಳೆಗೆ ಸಿಕ್ಕಿಂ ತತ್ತರಿಸಿ ಹೋಗಿದ್ದು ಭೂಕುಸಿತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ.
ಸಿಕ್ಕಿಂನ ಗ್ಯಾಲ್ ಶಿಂಗ್ ಜಿಲ್ಲೆಯ ರಿಂಬಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮಣ್ಣಿನ ಅಡಿಯಲ್ಲಿ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ. ಮೂವರು ಕಣ್ಮರೆಯಾಗಿದ್ದು, ರಕ್ಷಣಾ ಪಡೆಯಿಂದ ಶೋಧ ಕಾರ್ಯ ಮುಂದುವರಿಸಲಾಗಿದೆ.
ತಾತ್ಕಾಲಿಕ ಸೇತುವೆ ನಿರ್ಮಿಸಿ ಕಾರ್ಯಚರಣೆ ನಡೆಸಲಾಗಿದೆ. ಈ ವೇಳೆ ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಮಳೆಯ ತೀವ್ರತೆ ಹೆಚ್ಚಾಗಿ ಸುತಮುತ್ತಲಿನ ಪ್ರದೇಶದಲ್ಲಿ ಭೂ ಕುಸಿತ ಹೆಚ್ಚಾಗುತ್ತಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಭಾರಿ ಪ್ರಮಾಣದ ಮಣ್ಣು ಕುಸಿತದಿಂದ ಹಲವೆಡೆ ಸಂಚಾರ ಬಂದ್ ಆಗಿದ್ದು ಅನೇಕ ಮನೆಗಳಿಗೆ ಹಾನಿಯಾಗಿದೆ. ಸದ್ಯ ರಕ್ಷಣಾ ಪಡೆ ಸ್ಥಳೀಯ ಜನರ ಸಹಾಯದಿಂದ ಕಾರ್ಯಾಚರಣೆ ಮುಂದುವರಿಸಿದೆ.