ಬೆಳಗಾವಿ ಬಳಿ 25 ಲಕ್ಷ ರೂ. ಮೌಲ್ಯದ ಸೀರೆಗಳ ವಶ; ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಹಂಚಲು ತರಲಾಗುತ್ತಿತ್ತು!
ಪ್ರಗತಿವಾಹಿನಿ ಸುದ್ದಿ, ಸದಲಗಾ: ಯಾವುದೇ ದಾಖಲೆಗಳು ಇಲ್ಲದೆ ಮಿನಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 25 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಚುನಾವಣಾ ಫ್ಲಾಯಿಂಗ್ ಸ್ಕ್ವಾಡ್ ವಾಹನ ಸಹಿತ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ರಾಯಬಾಗ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ಒಯ್ಯುತ್ತಿದ್ದುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಸಂಬಂಧ ವಾಹನ ಚಾಲಕ, ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಉಚಗಾಂವ ಹುಂಕಾರ ಕಾಲನಿ ನಿವಾಸಿ ಖದೀರ್ ದಾವರ್ ಶೇಖ್ (60) ಹಾಗೂ ವಸಂತ ರಾಜವ್ವ ಕಾಂಬಳೆ(50) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದ ಮೇರೆಗೆ ಫ್ಲಾಯಿಂಗ್ ಸ್ಕ್ವಾಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಹಿರಿಯ ನಿರೀಕ್ಷಕ ಮನೋಹರ ಸದಾಶಿವ ಪತ್ತಾರ ಹಾಗೂ ಸಿಬ್ಬಂದಿ ದತ್ತವಾಡಾ ಚೆಕ್ ಪೋಸ್ಟ್ ನಲ್ಲಿ ವಾಹನ ತಡೆದು ನಿಲ್ಲಿಸಿ ಅದರೊಳಗೆ ಏನಿದೆ ಎಂದು ಕೇಳಿದಾಗ ಚಾಲಕ ಉತ್ತರಿಸಲಾಗದೆ ತಡವರಿಸಿದ್ದಾನೆ.
ತಲಾ 350 ರೂ. ಅಂದಾಜು ಮೌಲ್ಯದ 25 ಲಕ್ಷ ರೂ. ಮೊತ್ತದ 5 ಸಾವಿರ ಸೀರೆಗಳು ವಾಹನದಲ್ಲಿ ಪತ್ತೆಯಾಗಿದ್ದು ಈ ಸೀರೆಗಳು ಹಾಗೂ ಅವುಗಳನ್ನು ಸಾಗಿಸಲಾಗುತ್ತಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಅಶೋಕ್ ಲೈಲ್ಯಾಂಡ್ ಮಿನಿ ಲಾರಿ ವಶಪಡಿಸಿಕೊಳ್ಳಲಾಗಿದೆ.
ಮನೋಹರ ಪತ್ತಾರ ಅವರೊಂದಿಗೆ ಅಮೃತ ಭರಮಾ ಗುರವ, ಗಜಾನನ ಲೋಕೂರ ಹಾಗೂ ಪೊಲೀಸ್ ಸಿಬ್ಬಂದಿ ಎಮ್. ಎಮ್. ಪಡತರೆ ಕಾರ್ಯಾಚರಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ