ಡಾ.ಅಲಗೂರ, ಕುಚನೂರೆ ಅವರ ಸಾಧನೆಗೆ ಸಂದ ಫಲ

ಮಾಜಿ ಶಾಸಕ ಸಂಜಯ ಪಾಟೀಲ ಹೇಳಿಕೆ

ಡಾ.ಅಲಗೂರ, ಕುಚನೂರೆ ಅವರ ಸಾಧನೆಗೆ ಸಂದ ಫಲ – ಸಂಜಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಳ್ಳಾರಿಯ ಕೃಷ್ಣದೇವರಾಯ ವಿಶ್ವ ವಿದ್ಯಾಲಯಕ್ಕೆ ಉಪ ಕುಲಪತಿಯಾಗಿ ನೇಮಕಗೊಂಡಿರುವ ಡಾ.ಸಿದ್ದು ಅಲಗುರ ಮತ್ತು ಕರ್ನಾಟಕ ಲೋಕ ಸೇವಾ ಆಯೋಗದ ನಾಮನಿರ್ದೇಶಕರಾಗಿ ನೇಮಕಗೊಂಡಿರುವ ವಿಜಯಕುಮಾರ ಕುಚನೂರೆ ಅವರು ಮಾಡಿದ ಸಮಾಜ ಸೇವೆಗೆ ಸಂದ ಗೌರವವಾಗಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಅವರು ಇಂದಿಲ್ಲಿ ಹೇಳಿದರು.

ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರದಂದು ಬಳ್ಳಾರಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಸಿದ್ದು ಅಲಗುರ ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಾಮನಿರ್ದೇಶಕರಾಗಿ ನೇಮಕಗೊಂಡಿರುವ ವಿಜಯಕುಮಾರ ಕುಚನೂರೆ ಅವರನ್ನು ಬೆಳಗಾವಿ ಸಮಸ್ತ ಜೈನ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಡಾ. ಸಿದ್ದು ಅಲಗುರ ಮತ್ತು ವಿಜಯಕುಮಾರ ಕುಚನೂರೆ ಅವರು ಮಧ್ಯಮ ಕುಟುಂಬದಿಂದ ಬಂದಿದ್ದು, ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮದೇ ಆದ ರೀತಿಯಲ್ಲಿ ಸಮಾಜ ಸೇವೆಯನ್ನು ಕೈಗೊಂಡವರು. ಇಂತಹವರು ಇಂದು ಅತ್ಯುನ್ನತ ಹುದ್ದೆಯನ್ನೇರುವ ಮೂಲಕ ಜೈನ ಸಮಾಜಕ್ಕೆ ಹೆಚ್ಚಿನ ಗೌರವ ತಂದು ಕೊಟ್ಟಿದ್ದಾರೆ ಎಂದು ಹೇಳಿದ ಅವರು, ಈ ಇಬ್ಬರು ವ್ಯಕ್ತಿಗಳು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಗೆ ಕಟಿಬದ್ದರಾಗಲಿ ಎಂದು ಅವರು ಹಾರೈಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಬಳ್ಳಾರಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಸಿದ್ದು ಅಲಗೂರ ಅವರು, ಬಾಲ್ಯದಿಂದಲೂ ನನ್ನ ಮೇಲೆ ತಂದೆ ತಾಯಿಯವರ ಆರ್ಶಿವಾದ ಲಭಿಸಿದೆ. ಅವರು ತೋರಿದ ಮಾರ್ಗದರ್ಶನ , ಪ್ರೇರಣೆ, ಸಂಸ್ಕಾರ ಮತ್ತು ಆತ್ಮೀಯತೆಯಿಂದಾಗಿ ಇಂದು ನಾನು ಈ ಸ್ಥಾನವನ್ನು ಅಲಂಕರಿಸಿದ್ದೇನೆ. ಇದರ ಜೊತೆಗೆ ಸಮಾಜದ ಅನೇಕ ಹಿರಿಯರು ನನ್ನ ಶ್ರೇಯಸ್ಸಿನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

ಇನ್ನೋರ್ವ ಸನ್ಮಾನಿತ ವಿಜಯಕುಮಾರ ಕುಚನೂರೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಜೈನ ಸಮಾಜ ತಮ್ಮನ್ನು ಸನ್ಮಾನಿಸಿ ಗೌರವಿಸಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ರಾಜೀವ ದೊಡ್ಡಣ್ಣವರ ಅವರು ಮಾತನಾಡಿ , ಡಾ.ಸಿದ್ದು ಅಲಗೂರ ಮತ್ತು ವಿಜಯಕುಮಾರ ಕುಚನೂರೆ ಅವರ ಆಯ್ಕೆ ಸಮಾಜಕ್ಕೆ ಸಂದ ಗೌರವವಾಗಿದೆ. ಮುಂಬರುವ ದಿನಗಳಲ್ಲಿ ಇವರ ಸೇವೆ ಸಮಾಜಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ದೊರಕಲಿ ಎಂದು ಹೇಳಿದರು.
ಸಮಾರಂಭದಲ್ಲಿ ಡಾ. ಸಿದ್ದು ಅಲಗೂರ ಮತ್ತು ವಿಜಯಕುಮಾರ ಕುಚನೂರೆ ಅವರನ್ನು ಸಮಸ್ತ ಬೆಳಗಾವಿ ಜೈನ ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅದರಂತೆ ಸನ್ಮತಿ ಶಿಕ್ಷಣ ಸಂಸ್ಥೆ, ಜಿತೋ ಬೆಳಗಾವಿ ವಿಭಾಗದ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಸಮಾರಂಭದ ವೇದಿಕೆ ಮೇಲೆ ಉದ್ಯಮಿ ಬಾಳಾಸಾಹೇಬ ಪಾಟೀಲ, ಗೋಪಾಲ ಜಿನಗೌಡ, ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುಷ್ಪದಂತ ದೊಡ್ಡಣ್ಣವರ, ಉಪಾಧ್ಯಕ್ಷ ಜಿನದತ್ತ ದೇಸಾಯಿ, ಕಾಂತಿಲಾಲಜಿ ಪೋರವಾಲ, ಜಬ್ಬರಚಂದ ಸಾಮಸುಖಾ ಉಪಸ್ಥಿತರಿದ್ದರು. ವಿನೋದ ದೊಡ್ಡಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಜಿನದತ್ತ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎ.ಆರ್.ರೊಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಭರತ ಅಲಸಂದಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿಕುಮಾರ ಕಾಗವಾಡ ವಂದಿಸಿದರು.
ಸಮಾರಂಭದ ಕೊನೆಯಲ್ಲಿ ಖ್ಯಾತ ವಿದ್ವಾಂಸ ಮತ್ತು ಇತಿಹಾಸ ಸಂಶೋಧನಕಾರ ನಿರ್ಮಲಕುಮಾರ ಸೇಠಿ ಅವರಿಂದ ಹೊರ ದೇಶಗಳಲ್ಲಿ ಜೈನ ಧರ್ಮ ಕುರಿತು ವಿಶೇಷ ಉಪನ್ಯಾಸ ನೀಡಿದರು.