ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ಸರಕಾರ ಸೋಮವಾರ ಮಂಡಿಸಿರುವ ಬಜೆಟ್ ಬಡವರ ಬೆನ್ನಿಗೆ ಚಿನ್ನದ ಚೂರಿ ಹಾಕಿದಂತಿದೆ ಎಂದು ಶಾಸಕಿ, ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.
ಬಡವರು ಬಳಸುವ ಬಹುತೇಕ ಉತ್ಪನ್ನಗಳ ಮೇಲೆ ಸೆಸ್ ವಿಧಿಸಲಾಗಿದೆ. ಕೊರೋನಾದಿಂದ ಕಂಗೆಟ್ಟಿರುವ ರೈತರು, ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್ ಏನನ್ನಾದರೂ ಘೋಷಿಸಬಹುದು. ಮುಳುಗಿರುವ ಬಡವರನ್ನು ಮೇಲೆತ್ತುವ ಯೋಜನೆ ಜಾರಿಗೊಳಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ಹಿಂದೆ ಘೋಷಿಸಿದ್ದ 20 ಲಕ್ಷ ಕೋಟಿ ರೂ. ಕೃಷಿ ಪ್ಯಾಕೇಜ್ ಎನ್ನುವ ಕನ್ನಡಿಯೊಳಗಿನ ಗಂಟನ್ನು ಸಮದೂಗಿಸಲು ಈಗ ಪೆಟ್ರೋಲ್, ಡಿಸೆಲ್, ಧಾನ್ಯ, ರಸಗೊಬ್ಬರ, ಪಾಮ್ ಆಯಿಲ್ ಮೊದಲಾದ ಉತ್ಪನ್ನಗಳ ಮೇಲೆ ಸೆಸ್ ಹಾಕಲಾಗಿದೆ. ಇವೆಲ್ಲ ನೇರವಾಗಿ ಬಡವರ ಮೇಲಿನ ಗದಾಪ್ರಹಾರವಾಗಿದೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರಕಾರ ಬಡವರ ವಿರೋಧಿ ಸರಕಾರ ಎನ್ನುವುದನ್ನು ಈ ಬಜೆಟ್ ಮತ್ತೊಮ್ಮೆ ಸಾಬೀತುಪಡಿಸಿದೆ. ಚಿನ್ನ, ಬೆಳ್ಳಿಯ ಮೇಲಿನ ಸೆಸ್ ಕಡಿಮೆ ಮಾಡುವ ಮೂಲಕ ಶ್ರೀಮಂತರ ನೆರವಿಗೆ ಸರಕಾರ ಧಾವಿಸಿದಂತಿದೆ. ಬಂಡವಾಳ ಶಾಹಿಗಳ ಕೈಗೇ ದೇಶವನ್ನು ಕೊಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ