ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್ ನಿಂದಾಗಿ ಉಂಟಾದ ಭಾರಿ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಯಾವುದೇ ತೆರಿಗೆ ವಿಧಿಸದೇ ಉದ್ಯಮ ಸ್ನೇಹಿ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ್ದು ಇದು ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗಿದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಕೇಂದ್ರ ಬಜೆಟ್ ನ್ನು ಸ್ವಾಗತಿಸಿ ಮಾತನಾಡಿದ ಅವರು, ದೇಶಾದ್ಯಂತ 15,000 ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಕೋವಿಡ್ ನಂತರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಮರ್ಥವಾಗಿ ಮುನ್ನಡೆಸುವ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು ಸಂಕಷ್ಟದ ಮಧ್ಯೆಯೂ ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರಿಸಿರುವುದು ರೈತರ ಬಗ್ಗೆ ಕೇಂದ್ರ ಸರಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಅನಗತ್ಯವಾಗಿ ಗಲಭೆ ಮಾಡುತ್ತಿರುವವರಿಗೆ ಸ್ಪಷ್ಟ ಉತ್ತರ ನೀಡಿದಂತಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ದೇಶದ ಎಲ್ಲ ಆಯಾಮಗಳನ್ನು ಒಳಗೊಂಡ ಹಾಗೂ ಪ್ರಗತಿಯತ್ತ ಮುನ್ನಡೆಸಲು ಬೇಕಾದ ಸಮರ್ಥ ಕಾರ್ಯಸೂಚಿಯನ್ನು ಅನಾವರಣ ಮಾಡಿದ್ದಾರೆ. ಜೊತೆಗೆ ತುರ್ತು ಆದ್ಯತೆಗಳ ಬಗ್ಗೆ ಗಮನ ಹರಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ