Karnataka NewsLatest

ಬೇಸರದ ಮಧ್ಯೆಯೇ ಲಕ್ಷ್ಮಿ ಹೆಬ್ಬಾಳಕರ್ ಪುತ್ರನ ವಿವಾಹ ಕಾರ್ಯಕ್ರಮ ಆರಂಭ

ಪ್ರಗತಿವಾಹಿನಿ ಸುದ್ದಿ, ಪಣಜಿ – ಕಾಂಗ್ರೆಸ್ ರಾಜ್ಯ ನಾಯಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ ಮೃಣಾಲ್ ಮತ್ತು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ ಅವರ ಸಹೋದರ ಬಿ.ಕೆ.ಶಿವಕುಮಾರ ಅವರ ಪುತ್ರಿ ಡಾ.ಹಿತಾ ವಿವಾಹ ಪೂರ್ವ ಕಾರ್ಯಕ್ರಮ ಗೋವಾದ ಲೀಲಾ ಪ್ಯಾಲೇಸ್ ನಲ್ಲಿ ಆರಂಭವಾಗಿದೆ.

ಶುಕ್ರವಾರ (ನ.27ರಂದು) ಅದ್ಧೂರಿ ವಿವಾಹ ನಡೆಯಲಿದ್ದು, ಅದರ ಪೂರ್ವ ನಡೆಯಲಿರುವ ಮೆಹಂದಿ, ಹಳದಿ ಮತ್ತಿತರ ಕಾರ್ಯಕ್ರಮಗಳು ಆರಂಭವಾಗಿವೆ. ಎರಡೂ ಕುಟುಂಬಗಳು 2 ದಿನಗಳ ಹಿಂದೆಯೇ ಗೋವಾಕ್ಕೆ ಬಂದಿಳಿದಿವೆ.

 

ವಾಯುಮಾಲಿನ್ಯದ ಕಾರಣದಿಂದ ದೆಹಲಿ ತೊರೆಯುವಂತೆ ವೈದ್ಯರು ನೀಡಿದ ಸೂಚನೆಯನ್ವಯ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ಗೋವಾಕ್ಕೆ ಆಗಮಿಸಿದ್ದರು. ಆದರೆ ಅಹ್ಮದ್ ಪಟೇಲ್ ನಿಧನದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಾಪಸ್ ತೆರಳಿದ್ದು, ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ.

ಸೋನಿಯಾ ಗಾಂಧಿ ಕೂಡ ಅಹ್ಮದ್ ಪಟೇಲ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಯೋಚನೆಯಲ್ಲಿದ್ದು, ಅದಕ್ಕಾಗಿ ತೆರಳದಿದ್ದರೆ ವಿವಾಹದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಸೇರಿದಂತೆ ಸುಮಾರು ಒಂದು ಸಾವಿರದಷ್ಟು ಜನರು ಶುಕ್ರವಾರದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

 

ನಿಶ್ಚಿತಾರ್ಥದ ಫೋಟೋ

ಕ್ಷೇತ್ರದ ಜನರನ್ನೆಲ್ಲ ಆಹ್ವಾನಿಸಿ, ಭರ್ಜರಿ ಊಟೋಪಚಾರದೊಂದಿಗೆ ಪುತ್ರನ ವಿವಾಹ ಕಾರ್ಯಕ್ರಮವನ್ನು ನಡೆಸಬೇಕೆನ್ನುವ ಯೋಚನೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಇದ್ದರು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಅದಕ್ಕೆ ಅವಕಾಶವಾಗಲಿಲ್ಲ. ಇದರಿಂದಾಗಿ ಅವರು ಪುತ್ರನ ವಿವಾಹದ  ಸಂಭ್ರಮದ ಮಧ್ಯೆಯೂ ಬೇಸರದಲ್ಲಿದ್ದಾರೆ.

ಆದರೂ ಕ್ಷೇತ್ರದ ಪ್ರತಿ ಮನೆಗೆ ಒಂದು ಪತ್ರದೊಂದಿಗೆ ಸಿಹಿ ತಿಂಡಿಯ ಬಾಕ್ಸ್ ಕಳುಹಿಸುವುದನ್ನು ಅವರು ಮರೆಯಲಿಲ್ಲ. `ನಿಮ್ಮ ಕಷ್ಟ ಸುಖದಲ್ಲಿ ನಾನು ಹೇಗೆ ಭಾಗಿಯೋ, ಹಾಗೆಯೇ ನಿಮ್ಮ ಮನೆಮಗಳಾದ ನನ್ನ ಕಷ್ಟ ಸುಖದಲ್ಲಿಯೂ ನೀವೆಲ್ಲ ಭಾಗಿಯಾಗಬೇಕೆಂದು ಬಯಸುವವಳು ನಾನು. ಆದರೆ ಕೊರೋನಾ ಮಹಾಮಾರಿ ನಿಮ್ಮೆಲ್ಲರ ಸಮ್ಮುಖದಲ್ಲಿ ಪುತ್ರನ ವಿವಾಹ ಮಾಡಬೇಕೆನ್ನುವ ನನ್ನ ಆಸೆಗೆ ತಣ್ಣೀರೆರಚಿದೆ. ನಿಮ್ಮೆಲ್ಲರ ಆಶಿರ್ವಾದ ನನ್ನ ಪುತ್ರನ ಮೇಲಿರಲಿ’ ಎಂದು ಪತ್ರದಲ್ಲಿ ಕೋರಿದ್ದಾರೆ.

ಲಕ್ಷಿ ಹೆಬ್ಬಾಳಕರ್ ಪುತ್ರ ಮೃಣಾಲ್ ವಿವಾಹ ನಿಶ್ಚಿತಾರ್ಥ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button